ಬೆಂಗಳೂರು : ಸ್ಯಾಂಡಲ್ ವುಡ್ ನ ಹಿರಿಯ ನಟ ಮತ್ತು ಬರಹಗಾರ ಕೃಷ್ಣ ನಾಡಿಗ್ ಶನಿವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸುಮಾರು ನಾಲ್ಕು ದಶಕಗಳಿಂದ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದ ಅವರು ಸಾಕಷ್ಟು ಸಿನಿಮಾಗಳಿಗೆ ಬರಹಗಾರನಾಗಿ ಕೆಲಸ ಮಾಡಿದ್ದಾರೆ. ಜೊತೆಗೆ ಕಲಾವಿದರಾಗಿಯೂ ಹೆಚ್ಚು ಜನಪ್ರಿಯರಾಗಿದ್ದಾರೆ.
ಕಳೆದು ಮೂರು ದಿನಗಳಿಂದ ಕೃಷ್ಣ ನಾಡಿಗ್ ಅವರಿಗೆ ಎದೆ ನೋವು ಕಾಣಿಸಿಕೊಳ್ಳುತ್ತಿತ್ತಂತೆ. ಆದರೆ ಶೂಟಿಂಗ್ ಇದ್ದ ಕಾರಣ ವೈದ್ಯರ ಬಳಿ ಹೋಗಲು ನಿರ್ಲಕ್ಷ್ಯ ಮಾಡಿದ್ದಾರೆ. ನಿನ್ನೆ ರಾತ್ರಿ ಎದೆ ನೋವು ಜಾಸ್ತಿಯಾಗಿದೆ. ಆದರೆ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ. ಕೃಷ್ಣ ನಾಡಿಗ್ ನಿಧನಕ್ಕೆ ಕಿರುತೆರೆ ಮತ್ತು ಸ್ಯಾಂಡಲ್ ವುಡ್ ಗಣ್ಯರು ಕಂಬನಿ ಮಿಡಿದಿದ್ದಾರೆ.
ಕೃಷ್ಣ ಅವರು ಹುಟ್ಟಿದ್ದು ಚಿಕ್ಕಮಗಳೂರಿನ ಕಡೂರಿನಲ್ಲಿ. ತಂದೆ-ತಾಯಿಯಿಂದ ಸಾಂಸ್ಕೃತಿಕ ಲೋಕದ ಕಡೆ ಒಲವು ಬೆಳೆಸಿಕೊಂಡಿದ್ದರು. ನಿರ್ದೇಶಕ ಪುಟ್ಟಣ್ಣ ಕಣಗಲ್ ಅವರ ಚಿತ್ರಗಳನ್ನು ನೋಡಿ ತಾವು ನಿರ್ದೇಶಕರಾಗಬೇಕೆಂದು ಕನಸುಕಂಡಿದ್ದರು. ಆದರೆ ಅವರ ಕನಸು ಕೊನೆಗೂ ನನಸಾಗಲಿಲ್ಲ. ಓದು ಮುಗಿಸಿ ಬೆಂಗಳೂರಿಗೆ ಬಂದು ಕಿರ್ಲೋಸ್ಕರ್ ಫ್ಯಾಕ್ಟರಿಯಲ್ಲಿ ವೃತ್ತಿ ಜೀವನ ಪ್ರಾರಂಭಿಸಿದ್ದರು.