ಹೊಸ ದಿಗಂತ ವರದಿ, ಶಿವಮೊಗ್ಗ:
ಕೊರೋನಾದಿಂದಾಗಿ ಸಾಕಷ್ಟು ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಇಂಥ ಸಂದರ್ಭದಲ್ಲಿ ನಾವು ಸ್ವಯಂ ಉದ್ಯೋಗಕ್ಕೆ ಒತ್ತು ನೀಡಬೇಕಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದ ಡಿವಿಎಸ್ ಸಂಜೆ ಕಾಲೇಜಿನಲ್ಲಿ ನಿರಂತರ ಟ್ರಸ್ಟ್ ನಿಂದ ಮಕ್ಕಳಿಗೆ ಮಣ್ಣಿನ ಹಣತೆಗಳ ಬಗ್ಗೆ ಅರಿವು ಮೂಡಿಸಲು ಹಾಗೂ ಸ್ವಯಂ ಉದ್ಯೋಗದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ದೀಪದೊಂದಿಗೆ ದೇಶ ಬೆಳೆಸೋಣ, ಸ್ವಯಂ ಉದ್ಯೋಗ ಬೆಳೆಸೋಣ ಕಾರ್ಯಕ್ರಮವನ್ನು ತಾವೇ ಸ್ವತಃ ಹಣತೆ ತಯಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರೂ ಸ್ವಯಂ ಉದ್ಯೋಗಕ್ಕೆ ಹೆಚ್ಚಿನ ಒತ್ತು ನೀಡಬೇಕು.
ಕೊರೋನಾ ಸೋಂಕು ಇಡೀ ಪ್ರಪಂಚವನ್ನೇ ತಲ್ಲಣಗೊಳಿಸಿದೆ. ಆರ್ಥಿಕ ಸಂಕಷ್ಟದಿಂದಾಗಿ ಹಲವು ಉದ್ದಿಮೆಗಳು ಬಾಗಿಲು ಮುಚ್ಚುವ ಹಂತ ತಲುಪಿವೆ. ಇಂಥ ಸಂದರ್ಭದಲ್ಲಿ ನಾವು ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದೇ ಆದಲ್ಲಿ ಆರ್ಥಿಕ ಸಂಕಷ್ಟದಿಂದ ಪಾರಾಗಲು ಸಾಧ್ಯವಾಗಲಿದೆ ಎಂದರು.
ನಿರಂತರ ಟ್ರಸ್ಟ್ ಸ್ವಯಂ ಉದ್ಯೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಿರುವುದು ಇಂದಿನ ದಿನಮಾನದಲ್ಲಿ ಪ್ರಸ್ತುತವಾಗಿದೆ ಎಂದರು.
ಮಹಾನಗರ ಪಾಲಿಕೆ ಸದಸ್ಯ ವಿಶ್ವಾಸ್, ಡಿವಿಎಸ್ ಕಾರ್ಯದರ್ಶಿ ರಾಜಶೇಖರ್, ನಿರಂತರ ಟ್ರಸ್ಟ್ ಸಂಸ್ಥಾಪಕಿ ಚೈತ್ರಾ ಸಜ್ಜನ್ ಉಪಸ್ಥಿತರಿದ್ದರು.