Monday, July 4, 2022

Latest Posts

ಸ್ವಾವಲಂಬನೆಯ ನವಭಾರತ ನಿರ್ಮಾಣಕ್ಕೆ ಪಣ : ಗೃಹ ಸಚಿವ ಬಸವರಾಜ ಬೊಮ್ಮಾಯಿ

ಹಾವೇರಿ: ಹಲವು ಸವಾಲುಗಳ ನಡುವೆ ಅದಮ್ಯ ವಿಶ್ವಾಸದಿಂದ ಸ್ವಾತಂತ್ರ್ಯ ಭಾರತವನ್ನು ಸ್ವಾವಲಂಬನೆಯ ಆತ್ಮನಿರ್ಭರ ನವಭಾರತ ನಿರ್ಮಾಣಕ್ಕೆ ಪಣತೊಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲಾಡಳಿತದಿಂದ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ ೭೪ನೇ ಸ್ವಾತಂತ್ರ್ಯೋತ್ಸವ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಜಿಲ್ಲಾ ಸಾಧನೆಯ ಕಿರಿರುಹೊತ್ತಿಗೆ ಬಿಡುಗಡೆಮಾಡಿ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದ ಅವರು, ಕರ್ನಾಟಕ ರಾಜ್ಯದಲ್ಲೇ ಹಾವೇರಿ ಜಿಲ್ಲೆ ಬರುವ ದಿನಗಳಲ್ಲಿ ಎಲ್ಲ ರಂಗಗಳಲ್ಲೂ ಮುಂಚೂಣಿಯಲ್ಲಿ ನಿಲ್ಲಿಸಲು ಪಣತೊಡಗಲಾಗಿದೆ ಎಂದು ಘೋಷಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಅತ್ಯಂತ ಕಠಿಣ ಸವಾಲು ಎದುರಿಸಿ ಹೊಸ ಮಾರ್ಗದಲ್ಲಿ ಭಾರತ ದೇಶ ಸ್ವಾವಲಂಬನೆಯ ಎಡೆಗೆ ಬಹುದೊಡ್ಡ ಹೆಜ್ಜೆ ಇಟ್ಟಿದೆ. ಆಹಾರ ಸ್ವಾವಲಂಬನೆ, ರಕ್ಷಣಾ ವಲಯದಿಂದ ಬಾಹ್ಯಕಾಶದವರೆಗೆ ಸ್ವಾವಲಂಬನೆಯನ್ನು ಸಾಧಿಸಿದೆ. ಭಾರತವಲ್ಲದೆ ಜಗತ್ತಿನ ಇತರ ರಾಷ್ಟ್ರಗಗಳಿಗೂ ಸಾಟ್ಲೈಟ್ ನಿರ್ಮಾಣಮಾಡಿಕೊಡುವ ಮೂಲಕ ಸ್ವಾವಲಂಬಿ ಭಾರತವಾಗಿ ಮುನ್ನಡೆದಿದೆ ಎಂದರು.
ಬರುವ ದಿನಗಳಲ್ಲಿ ಪ್ರತಿ ಗ್ರಾಮಗಳಿಗೂ ವಿದ್ಯುತ್, ಪ್ರತಿಯೊಬ್ಬರಿಗೂ ಶಿಕ್ಷಣ, ಎಲ್ಲರಿಗೂ ಸೂರು, ಆತ್ಮಗೌರವದ ಸ್ವಾಭಿಮಾನದ ಬದುಕು ಕಲ್ಪಿಸುವ ಮೂಲಕ ಆರ್ಥಿಕ ಅಸಮಾನತೆಯನ್ನು ತೊಡೆದುಹಾಕಿ ಸಮಾನತೆಯ ಕಲ್ಪನೆಯ ರಾಮರಾಜ್ಯದ ನಿರ್ಮಾಣದ ಕನಸು ಸಹಕಾರಗೊಳ್ಳಬೇಕು. ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಆಶಯದಂತೆ ಸಮಾನ ಸಮಾಜ ನಿರ್ಮಾಣ ಸ್ವಾವಲಂಬನೆಯ ಬದುಕು ರೂಪಿಸಿಕೊಡಲು ಪಣತೊಟ್ಟಿದೆ ಎಂದು ಹೇಳಿದರು.
ದೇಶಕ್ಕಾಗಿ ಪ್ರಾಣ ತ್ಯಾಗಮಾಡಿದ ಸಹಸ್ರಾರು ಜನರನ್ನು ನಾವು ನೆನಯಬೇಕಾಗಿದೆ. ಇವರ ತ್ಯಾಗದಿಂದ ಸ್ವಾತಂತ್ರ್ಯಗಳಿಸಿ ೭೩ ವರ್ಷ ಕಳೆದಿದ್ದೇವೆ. ಆದರೆ ಇಂದಿನ ದಿನಗಳಲ್ಲಿ ದೇಶಕ್ಕಾಗಿ ನೀವು ಏನು ಮಾಡುತ್ತಿರಿ ಎಂದರೆ ಪ್ರಾಣಕೊಡುವ ಜನ ಇಂದಿಲ್ಲ. ಆದರೆ ಪ್ರತಿಯೊಬ್ಬರೂ ಸತ್ಯದ ಪ್ರಾಮಾಣಿಕವಾಗಿ ದೇಶದ ಸೇವೆ ಮಾಡುತ್ತೇವೆ ಎನ್ನುವ ಜನ ಇದ್ದಾರೆ. ದೇಶಕ್ಕಾಗಿ ನಾವು ಬದುಕಬೇಕಾಗಿದೆ. ದೇಶಕ್ಕಾಗಿ ಬದುಕಿ ಬಾಳಬೇಕು. ಪ್ರತಿಯೊಬ್ಬ ನಾಗರಿಕ, ಪ್ರತಿಯೊಬ್ಬ ಭಾರತೀಯನು ದೇಶ ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಬೇಕಾಗಿದೆ ಎಂದು ಹೇಳಿದರು.
ಶಾಸಕ ನೆಹರು ಓಲೇಕಾರ, ತಾ.ಪಂ.ಅಧ್ಯಕ್ಷೆ ಕಮಲವ್ವ ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ, ಜಿ.ಪಂ ಸಿಇಓ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ ಇತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss