Monday, August 8, 2022

Latest Posts

ಹಕ್ಕಿಜ್ವರ ಬೀತಿ: ಹೊರ ರಾಜ್ಯಗಳಿಂದ ಜಿಲ್ಲೆಗೆ ಬರುವ ಕೋಳಿ ಮರಿಗಳ ರ‍್ಯಾಂಡಮ್ ಪರೀಕ್ಷೆಗೆ ಒಳಪಡಿಸಲು ಆಗ್ರಹ

ಹೊಸ ದಿಗಂತ ವರದಿ, ದಾವಣಗೆರೆ:

ಕೋಳಿ ಶೀತ ಜ್ವರದ ರೋಗ ಹರಡುತ್ತಿರುವ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಂದ ಜಿಲ್ಲೆಗೆ ಬರುವ ಕೋಳಿ ಮರಿಗಳನ್ನು ರ‍್ಯಾಂಡಮ್ ಪರೀಕ್ಷೆಗೆ ಒಳಪಡಿಸಬೇಕೆಂದು ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘ ಆಗ್ರಹಿಸಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಲ್ಲಾಪುರ ದೇವರಾಜ್ ಮಾತನಾಡಿ, ಜಿಲ್ಲೆಗೆ ಕೇರಳ, ತಮಿಳುನಾಡು, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶಗಳಿಂದ ಕೋಳಿ ಮರಿಗಳು ಬರುತ್ತವೆ. ಈಗಾಗಲೇ ಕೇರಳ ಮತ್ತು ತಮಿಳುನಾಡಿನಲ್ಲಿ ಕೋಳಿ ಶೀತ ಜ್ವರ
ಹೆಚ್ಚಾಗಿ ಹರಡುತ್ತಿದೆ. ಆದ್ದರಿಂದ ಅಲ್ಲಿಂದ ಬರುವ ಕೋಳಿ ಮರಿಗಳಿಗೆ ರ್ಯಾಂ ಡಮ್  ಪರೀಕ್ಷೆ ಮಾಡಿಸಿ, ರೈತರಿಗೆ ಸರಬರಾಜು ಮಾಡಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು ಕೋಳಿ ಮರಿ ಸರಬರಾಜು ಕಂಪನಿಗಳಿಗೆ ಸೂಚನೆ ಕೊಟ್ಟು, ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ 650ಕ್ಕೂ ಹೆಚ್ಚು ಕೋಳಿ ಫಾರಂ ಇದ್ದು, 11 ಲಕ್ಷ ಕೆ.ಜಿ.ಗೂ ಹೆಚ್ಚು ಕೋಳಿಗಳಿವೆ. ಹೊರ ಭಾಗದಿಂದ ಬರುವ ಕೋಳಿ ಮರಿಗಳಲ್ಲಿ ಈ ರೋಗ ಕಂಡು ಬಂದಲ್ಲಿ ದೊಡ್ಡ ಪ್ರಮಾಣದಲ್ಲಿ ಸಾಕಾಣಿಕೆ ಮಾಡಲಾದ ಕೋಳಿಗೆ ರೋಗ ತಗುಲಿ ನಮಗೆ ಸಂಕಷ್ಟ ಉಂಟಾಗಲಿದೆ.
ಕಳೆದ ಎಂಟು ತಿಂಗಳ ಹಿಂದೆ ಇಂತಹದ್ದೇ ರೋಗ ತಗುಲಿ ಸುಮಾರು 8.50 ಲಕ್ಷ ಕೋಳಿ ಮರಿಗಳನ್ನು ನಾಶ ಮಾಡಿದ್ದು, ಇನ್ನೊಮ್ಮೆ ಈ ರೋಗ ಬಂದಲ್ಲಿ ಸಾಕಾಣಿಕೆದಾರರು ಲಕ್ಷಾಂತರ ರೂ.ನಷ್ಟ ಅನುಭವಿಸುವಂತಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಸಂಘದ ಬನ್ನಿಕೋಡು ಅಭಿಷೇಕ್, ಕಲ್ಕೆರೆ ಮಂಜುಪ್ಪ ಇತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss