Tuesday, July 5, 2022

Latest Posts

ಹಡಿಲು ಭೂಮಿಯಲ್ಲಿ ಭತ್ತದ ಬೇಸಾಯ: ಶಾಸಕ ರಘುಪತಿ ಭಟ್ ಮತ್ತು ಪುತ್ರನಿಂದ ನಾಟಿ

ಉಡುಪಿ: ಇಲ್ಲಿನ ನಿಟ್ಟೂರು ಪ್ರೌಢ ಶಾಲೆ ನೇತೃತ್ವದಲ್ಲಿ ಶಾಲೆಯ ಸುತ್ತಮುತ್ತಲಿನ ಗ್ರಾಮಗಳಲ್ಲಿರುವ ಹಡಿಲು ಬಿದ್ದ ಭೂಮಿಯಲ್ಲಿ ಭತ್ತ ಬೇಸಾಯ ಮಾಡುವ ವಿನೂತನ ಯೋಜನೆ ಜಾರಿಯಾಗುತ್ತಿದೆ. ಇಂದು ಉಡುಪಿ ಶಾಸಕರು ಹಾಗೂ ಪುತ್ರ ಹದಗೊಳಿಸಿದ ಗದ್ದೆಗಿಳಿದು ನಾಟಿ ಮಾಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಈ ಯೋಜನೆ ಚಾಲ್ತಿಯಲ್ಲಿದೆ. ಇಂದು ಕರಂಬಳ್ಳಿಯ ಗದ್ದೆಯಲ್ಲಿ ನಾಟಿ ಮಾಡುವ ಕಾರ್ಯಕ್ರಮ‌ ಹಮ್ಮಿಕೊಳ್ಳಲಾಗಿತ್ತು. ಉಡುಪಿ ಶಾಸಕ ಕೆ. ರಘುಪತಿ ಭಟ್ ಮನೆಯ ಸಮೀಪ ಹಡಿಲು ಬಿದ್ದ ಭೂಮಿಯಲ್ಲಿ ನೇಜಿ ನೆಡುವ ಕಾರ್ಯಕ್ರಮದಲ್ಲಿ ಸ್ವತಃ ಶಾಸಕ ರಘುಪತಿ ಭಟ್ ಭಾಗವಹಿಸಿ ಸ್ಥಳೀಯರಲ್ಲಿ ಹುರುಪು ತುಂಬುವ ಕೆಲಸ ಮಾಡಿದ್ದಾರೆ. ಮಳೆ ಬರುತ್ತಿದ್ದರೂ ರೈನ್ ಕೋಟ್, ಟೋಪಿ ಹಾಕಿ ತಮ್ಮ ಕಿರಿಯ ಮಗನ ಜೊತೆ ನೇಜಿ ನೆಟ್ಟು ಇತರರಿಗೆ ಮಾದರಿಯಾಗಿದ್ದಾರೆ.
ಕರಂಬಳ್ಳಿಯ ಈ ಕೃಷಿ ಭೂಮಿ ಕಳೆದ 15 ವರ್ಷಗಳಿಂದ ಹಡಿಲು ಬಿದ್ದಿತ್ತು. ಉಡುಪಿಯಲ್ಲಿ ನೂರಾರು ಎಕರೆ ಭತ್ತದ ಗದ್ದೆಗಳು ಕೃಷಿ ಮಾಡುವವರಿಲ್ಲದೆ ಹಡಿಲು ಬಿದ್ದಿವೆ. ಇಂಥ ಗದ್ದೆಗಳಲ್ಲಿ ಮತ್ತೆ ಭತ್ತದ ಬೆಳೆ ತೆಗೆಯುವ ವಿನೂತನ ಯೋಜನೆ ಇದು. ಐದು ಕಡೆಗಳಲ್ಲಿ ಸುಮಾರು 50 ಎಕರೆ ಹಡಿಲು ಬಿದ್ದ ಭೂಮಿಯಲ್ಲಿ, ಸ್ಥಳೀಯರು ಮತ್ತು ನಿಟ್ಟೂರು ಶಾಲೆಯ ಹಳೆ ವಿದ್ಯಾರ್ಥಿಗಳು ಬೇಸಾಯ ಕಾರ್ಯ ಮಾಡಲಿದ್ದಾರೆ. ಬೇಸಾಯದಲ್ಲಿ ಇಳುವರಿ ಬಂದ ಭತ್ತವನ್ನು ಮಾರಿ ಆ ದುಡ್ಡನ್ನು ಭೂಮಿಯ ಮಾಲಕರಿಗೆ ಕೊಡಲಾಗುವುದು. ಈ ಯೋಜನೆ ರಾಜ್ಯಾದ್ಯಂತ ಆಗಬೇಕಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss