spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹಣೆಪಟ್ಟಿ ಬಾರದಂತೆ ಎಚ್ಚರ ವಹಿಸಿ…

- Advertisement -Nitte

ಜನ್ಮ ಕೊಟ್ಟ ತಾಯಿ ಮತ್ತು ತಾಯಿ ನೆಲ ಸ್ವರ್ಗಕ್ಕಿಂತಲೂ ಮಿಗಿಲಾದುದು ಎಂಬ ಮಾತಿದೆ. ಇಂಥಹ ಸಂಸ್ಕೃತಿ ಪರಂಪರೆ ಹೊಂದಿರುವ ನಮ್ಮ ನೆಲದಲ್ಲಿ ಅಮೂಲ್ಯಳಂಥ ಹೆಣ್ಣು ಮಗಳು ನಮ್ಮ ಶತ್ರು ರಾಷ್ಟ್ರವನ್ನು ಹೊಗಳುತ್ತಾಳೆಂದರೆ ನಮ್ಮ ಯುವ ಜನತೆ ಎತ್ತ ಕಡೆ ಸಾಗುತ್ತಿದೆ ಎಂದು ಪ್ರಶ್ನೆ ಹಾಕಿಕೊಳ್ಳಬೇಕಾಗಿದೆ. ಮನಸ್ಸಿನ ಮೇಲೆ ಹತೋಟಿ ಇಲ್ಲದ ಇವತ್ತಿನ ಯುವಜನತೆ ಮುಂದೆ ನಮ್ಮ ದೇಶವನ್ನು ಕಟ್ಟುತ್ತಾರೆನ್ನುವ ವಿಶ್ವಾಸ ಇಲ್ಲದಂತಾಗಿದೆ. ಇಂದಿನ ಯುವಪೀಳಿಗೆಯನ್ನು ಯಾರು ಬೇಕಾದರೂ ಹೇಗೆ ಬೇಕಾದರೂ ಆಡಿಸಬಹುದು. ಯಾರೋ ಒಬ್ಬಿಬ್ಬರು ಮಾಡಿದ ಹೀನ ಕೃತ್ಯಕ್ಕೆ ಇಡೀ ಸಮೂಹವನ್ನು ದೂರುವುದು ಸಹ ತಪ್ಪು. ದೇಶ ಭಕ್ತಿ ಇರುವ ಯುವ ಜನತೆ ನಮ್ಮಲ್ಲಿ ಅಸಂಖ್ಯಾತರಿದ್ದಾರೆ. ಆದರೆ ಈ ಅಮೂಲ್ಯಳಂಥಹ ಅವಿವೇಕಿಗಳಿಂದಾಗಿ ಯುವ ಸಮೂಹವನ್ನು ಅನುಮಾನದಿಂದ ನೋಡುವ ಪರಿಸ್ಥಿತಿ ಬಂದೊದಗಿದೆ. ಏನೇ ಇರಲಿ, ನಮ್ಮ ಪರಮ ಶತ್ರು ರಾಷ್ಟ್ರವಾದ ಪಾಕಿಸ್ಥಾನವನ್ನು ಜಿಂದಾಬಾದ್ ಎನ್ನುವ ಯಾವ ಕ್ರಿಮಿಯೂ ಭಾರತದ ನೆಲದಲ್ಲಿ ಇರಬಾರದು. ಆ ನಿಟ್ಟಿನಲ್ಲಿ ಕಾನೂನು ಗಟ್ಟಿಯಾಗಿ ತನ್ನ ನಿಲುವನ್ನು ತೆಗೆದುಕೊಳ್ಳಬೇಕು.

ಒಂದನ್ನು ಗಮನಿಸಬೇಕು. ನಮ್ಮ ದೇಶದಲ್ಲಿ ವಾಕ್‌ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಂಡಷ್ಟು ಬೇರಾವ ಪ್ರಜಾಪ್ರಭುತ್ವ ದೇಶದಲ್ಲಿ ಇರಲಾರದು. ಇಲ್ಲಿ ಯಾರು ಏನೂ ಬೇಕಾದರೂ ಮಾತನಾಡಬಹುದೆನ್ನುವ ಹುಂಬತನ ಅನೇಕರಲ್ಲಿದೆ. ಇತ್ತೀಚೆಗೆ ಗಮನಿಸಿದಂತೆ ಈ ಬುದ್ಧಿಜೀವಿ ಅನ್ನಿಸಿಕೊಳ್ಳುವ ಹುಚ್ಚು ಮತ್ತು ಭಂಡತನದಿಂದ ದೇಶದೊಳಗೇ ಇದ್ದುಕೊಂಡು ಆಂತರಿಕ ಕಾನೂನುಗಳನ್ನು ಗೌರವಿಸದಿರುವುದು, ಸರಕಾರದ ನಿಯಮಗಳನ್ನು ಅರ್ಥವಿಲ್ಲದ ರೀತಿಯಲ್ಲಿ ವಿರೋಧಿಸುವುದು ಇತ್ಯಾದಿಗಳನ್ನು ಮಾಡಿ ಒಂದೆರಡು ಹೋರಾಟ ಚಳವಳಿಗಳಲ್ಲಿ ಭಾಗವಹಿಸಿ ಹತ್ತಿ ಬಟ್ಟೆಯ ಜುಬ್ಬ ಧರಿಸಿದರೆ ಮುಗಿಯಿತು. ಅವನು ಪೂರ್ಣ ಪ್ರಮಾಣದ ಬುದ್ಧಿಜೀವಿ ಅನ್ನಿಸಿಕೊಳ್ಳುತ್ತಾನೆ. ಒಮ್ಮೆ ಆ ಅರ್ಹತೆ ಬಂದ ಮೇಲೆ ಮುಗಿಯಿತು. ಅವನ ಪ್ರತಿಮಾತಿಗೂ ವಿವಾದ ಆಗಲೇಬೇಕು. ನಮ್ಮ ಮಾಧ್ಯಮದವರು ಸಹ ಅವನ ಬಾಯಿಂದ ಬರುವ ವೇದ ವಾಕ್ಯಕ್ಕಾಗಿ ಕಾಯುತ್ತಾ ಇರುತ್ತಾರೆ. ಬೆಳಗ್ಗೆದ್ದ ಕೂಡಲೇ ಅವನಿಗೆ ಹೋರಾಟ ಚಳುವಳಿಗಳಿಗೆ ಹೋಗುವುದೇ ಕಾಯಕವಾಗುತ್ತದೆ. ಇದು ತಮಾಷೆಯಾಗಿ ಕಂಡರೂ ಇದು ಇವತ್ತಿನ ನಮ್ಮ ದೇಶದ ಪರಿಸ್ಥಿತಿ. ಈ ರೀತಿ ಬುದ್ಧಿಜೀವಿಗಳೆಂದು ಕರೆಸಿಕೊಂಡವರು ಒಬ್ಬರಾದರೂ ದೇಶದ ನೀರಿನ ಸಮಸ್ಯೆ, ಕಸದ ಸಮಸ್ಯೆ, ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಟ ಮಾಡಿದ್ದು ಇವೆಯಾ? ಖಂಡಿತಾ ಇಲ್ಲ. ಇವರು ಹುಡುಕುವುದು ಧರ್ಮ, ಜಾತಿ ಮುಂತಾದ ವಿಚಾರಗಳಲ್ಲಿ ಬೇಳೆ ಬೇಯಿಸಿಕೊಂಡು ಪ್ರಚಾರ ಪಡೆಯುವುದು.

ಇತ್ತೀಚೆಗೆ ಇಂಥಹ ಕೃತ್ಯಗಳನ್ನು ಮಾಡುವಲ್ಲಿ ಯುವಜನರೇ ಜಾಸ್ತಿ ಇದ್ದಾರೆ. ಕಾರಣ ಅವರ ಹಿಂದೆ ಕಾಣದ ಕೈಗಳಿವೆ. ಯುವ ಮನಸ್ಸನ್ನು ಬಹಳ ಸುಲಭವಾಗಿ ಪಳಗಿಸಬಹುದು. ಯಾವುದನ್ನೂ ಸರಿ ಯಾಗಿ ಯೋಚನೆ ಮಾಡದ ವಯಸ್ಸದು. ಕ್ರಾಂತಿಕಾರಿ ಭಾಷಣಗಳಿಂದ ಅವರನ್ನು ತಮ್ಮೆಡೆಗೆ ಆಕರ್ಷಿಸಿಕೊಂಡು ಅವರಿಂದ ಇಂಥಹ ದೇಶದ್ರೋಹದ ಕೃತ್ಯ ಗಳನ್ನು ಮಾಡಿಸುತ್ತಾರೆ.

ಪೋಷಕರು ತಮ್ಮ ಮಕ್ಕಳ ಅದರಲ್ಲೂ ಕಾಲೇಜಿಗೆ ಹೋಗುವ ಯುವಕ ಯುವತಿಯರ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಅವರ ಉಡುಗೆ ತೊಡುಗೆ ಮಾತನಾಡುವ ಶೈಲಿ ಮುಂತಾದವುಗಳಲ್ಲಿ ವ್ಯತ್ಯಾಸವಿದೆಯೇ ಅಥವಾ ಅಸಹಜವಾಗಿದೆಯೇ ಎಂದು ಗಮನಿಸುತ್ತಿರಬೇಕು. ಪ್ರಾರಂಭಿಕ ಹಂತದಲ್ಲಿ ಅಂಥಹ ವ್ಯತ್ಯಾಸಗಳು ಕಂಡು ಬಂದಲ್ಲಿ ಸರಿದಾರಿಗೆ ತರಬಹುದು. ಆದರೆ ಕೈಮೀರಿದ ಮೇಲೆ ಸರಿಪಡಿಸುವುದು ಕಷ್ಟ. ಈ ವಿಚಾರದಲ್ಲಿ ಉದಾಸೀನತೆ ತೋರಿದರೆ ಮುಂದೊಂದು ದಿನ ದೇಶದ್ರೋಹಿಯ ತಂದೆ ಅನ್ನಿಸಿಕೊಳ್ಳುವ ಪ್ರಾರಬ್ಧ ಖಂಡಿತಾ ಬರುತ್ತದೆ. ಈ ವಿಚಾರವಾಗಿ ಹೆತ್ತವರು ಜಾಗೃತರಾಗಿರಬೇಕು. ಕೆಲವು ಪೋಷಕರು “ನಮ್ಮ ಮಗ ಅಥವಾ ಮಗಳು ಕೋಣೆಯಿಂದ ಹೊರಗೆ ಬರೋದೇ ಇಲ್ಲ. ಯಾವಾಗಲೂ ಓದುತ್ತಾ ಇರುತ್ತಾರೆ ” ಎಂದು ಹೊಗಳಿಕೊಳ್ಳುತ್ತಿರುತ್ತಾರೆ.

ಅಂಥವರು ಒಂದನ್ನು ತಿಳಿದುಕೊಳ್ಳಬೇಕು. ಇಡೀ ಜಗತ್ತಿನ ಒಳ್ಳೆಯ ವಿಷಯವಿರಲಿ, ಕೆಟ್ಟದಿರಲಿ ನಿಮ್ಮ ಮನೆಯ ಕೋಣೆಯನ್ನು ತಲುಪುವುದು ಕಷ್ಟದ ವಿಚಾರವಲ್ಲ. ಹಿಂದಿನ ಕಾಲದಂತಲ್ಲ ಇಂದಿನ ಪರಿಸ್ಥಿತಿ. ಮೊಬೈಲ್ ಫೋನ್, ಇಂಟರ್‌ನೆಟ್ ಯುಗದಲ್ಲಿ ಯಾರನ್ನು ಯಾರೂ ಬೇಕಾದರೂ ಬಹಳ ಸುಲಭವಾಗಿ ಸಂಪರ್ಕಿಸಬಹುದು. ಈ ವಿಚಾರವಾಗಿ ಪೋಷಕರ ಜವಾಬ್ದಾರಿ ಬಹಳ ಮುಖ್ಯ. ತನ್ನ ಇಪ್ಪತ್ತನೆ ವಯಸ್ಸಿನಲ್ಲಿ ‘ಪಾಕಿಸ್ಥಾನ್ ಜಿಂದಾಬಾದ್’ ಎಂದು ಕೂಗಿಕೊಳ್ಳಬೇಕಾದರೆ ಆ ಅಮೂಲ್ಯ ಎನ್ನುವ ಹುಡುಗಿಯ ಮನಸ್ಥಿತಿ ಏನಿರಬಹುದು ಎಂದು ಯೋಚಿಸಿ. ಅವಳ ಮೇಲೆ ಎಂತಹ ಮಂದಿಯ ಪ್ರಭಾವ ಉಂಟಾಗಿರಬಹುದು ಯೋಚಿಸಿ. ಪೋಡಿಯಂ ಎದುರು ನಿಂತರೆ ಕಾಣದಷ್ಟು ಆಕಾರವಿರುವ ಹುಡುಗಿ ಈ ರೀತಿ ಮಾಡುತ್ತಾಳೆಂದರೆ ಅವಳಲ್ಲಿ ಮೂಡಿರುವ ದಾರ್ಷ್ಟ್ಯ ಹೇಗಿರಬಹುದು? ಆಕೆಗೆ ಯಾವ ರೀತಿಯ ಶಿಕ್ಷೆ ನೀಡಬೇಕೆಂದರೆ ಅವಳಿಗೆ ಕೊಡುವ ಶಿಕ್ಷೆಯಿಂದ ಮುಂದೆ ಯಾವ ವ್ಯಕ್ತಿಯೂ ಈ ರೀತಿ ದೇಶ ದ್ರೋಹದ ಕೆಲಸ ಮಾಡಲು ಭಯಪಡುವಂತಿರಬೇಕು. ದೂರದ ಗಲ್ಫ್ ರಾಷ್ಟ್ರಗಳಲ್ಲಾಗಿದ್ರೆ ಆ ದಿನವೇ ಸಾರ್ವಜನಿಕವಾಗಿ ಗಲ್ಲಿಗೇರಿಸುತ್ತಿದ್ದರು. ಆದರೆ ನಮ್ಮ ದೇಶದ ಕಾನೂನಿಗೆ ಒಂದು ರೀತಿ ನಿಯಮಗಳಿವೆ. ಅದರಂತೆಯೇ ನಡೆಯುತ್ತದೆ.

ಏನೇ ಇರಲಿ, ಮುಖ್ಯವಾಗಿ ಪೋಷಕರಿಗೆ ಇದೊಂದು ಎಚ್ಚರಿಕೆಯ ಗಂಟೆ. ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿದಲ್ಲಿ ಪೋಷಕರಿಗೆ ತಮ್ಮ ಮಕ್ಕಳ ಕೃತ್ಯ ಹಠಾತ್ತನೆ ಬೆಳಕಿಗೆ ಬಂದು ಅಚ್ಚರಿ ಪಡುತ್ತಾರೆ. ಅಕ್ಕಪಕ್ಕದ ಮನೆಯವರು ಸಹ ಅವಳು ಈ ರೀತಿ ಮಾಡಿದ್ದಾಳಾ ಎಂದು ಆಶ್ಚರ್ಯ ಪಡುತ್ತಾರೆ. ಕಾರಣ ಮಕ್ಕಳಿಗೂ ಮತ್ತು ಪೋಷಕರಿಗೂ ಅದೊಂದು ರೀತಿಯ ಅಂತರ ಬೆಳೆಯುತ್ತಿದೆ.  ತಮ್ಮ ಮಕ್ಕಳು ಏನು ಮಾಡುತ್ತಿದ್ದಾರೆ, ಅವರ ಸ್ನೇಹಿತರು ಯಾರು, ಸದಾ ಯಾವುದರಲ್ಲಿ ಮಗ್ನರಾಗಿರುತ್ತಾರೆ, ಯಾವ ಚಳವಳಿಗಳಿಗೆ ಹೋಗುತ್ತಿದ್ದಾರೆ ಎಂಬ ಅರಿವೇ ಹೆತ್ತವರಿಗಿರುವುದಿಲ್ಲ.

ಹೆತ್ತವರು ಇಂಥಹ ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಾಗಿದ್ಯೆ. ಅವರ ಚಟುವಟಿಕೆಗಳಲ್ಲಿ ಯಾವುದಾದರೂ ಸಮಾಜ ಘಾತುಕ ಅಥವಾ ವಿಧ್ವಂಸಕ ಕೃತ್ಯಗಳ ಸುಳಿವು ಸಿಕ್ಕಲ್ಲಿ ಅವರಿಗೆ ಬುದ್ಧಿ ಹೇಳುವ ಕೆಲಸ ಮಾಡಬೇಕು. ಇಲ್ಲದಿದ್ದಲ್ಲಿ ‘ದೇಶದ್ರೋಹಿಯ ಹೆತ್ತವರು’ ಎನ್ನುವ ಹಣೆಪಟ್ಟಿಯನ್ನು ಹಚ್ಚಿಸಿಕೊಳ್ಳಬೇಕಾದೀತು. ಅಂತಹ ಪರಿಸ್ಥಿತಿ ಬಾರದಿರಲಿ.

-ರೂಪೇಶ್ ಶೆಟ್ಟಿ ಬನ್ನಾಡಿ

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss