ಹೊಸ ದಿಗಂತ ವರದಿ , ಹಾವೇರಿ:
ರೈತರ ಉತ್ಪಾದನೆ ದ್ವಿಗುಣಗೊಳಿಸುವುದು ಹಾಗೂ ರೈತರ ಆರ್ಥಿಕ ಬೆಳವಣಿಗೆಗೆ ಪೂರಕವಾದ ಕೃಷಿ ಸಂಶೋಧನೆ ತಾಂತ್ರಿಕತೆಯ ಬಳಕೆಯ ನಿಟ್ಟಿನಲ್ಲಿ ಕ್ರಿಯಾಯೋಜನೆ ರೂಪಿಸಲು ಕೃಷಿ ಪೂರಕ ಚಟುವಟಿಕೆಗಳ ಇಲಾಖೆಗಳು ಹಾಗೂ ರೈತರ ಸಹಕಾರ ಅವಶ್ಯ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಮಹಾದೇವ ಚಟ್ಟಿ ಹೇಳಿದರು.
ಗುರುವಾರ ಹನುಮನಮಟ್ಟಿಯ ಐ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರದಲ್ಲಿ ಜರುಗಿದ ೪೩ನೇ ವೈಜ್ಞಾನಿಕ ಸಲಹಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಮುಖ್ಯ ಧ್ಯೇಯ ಕೃಷಿ ಉತ್ಪನ್ನಗಳ ದ್ವಿಗುಣಗೊಳಿಸಿ ರೈತರ ಆರ್ಥಿಕ ಸಬಲತೆಗೆ ಆದ್ಯತೆ ನೀಡುವುದಾಗಿದೆ. ಈ ನಿಟ್ಟಿನಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯ ಯೋಜನೆ ಹಾಕಿಕೊಂಡಿದೆ. ಕೃಷಿ ವಿಜ್ಞಾನ ಕೇಂದ್ರಗಳು ಈ ನಿಟ್ಟಿನಲ್ಲಿ ಕ್ರಿಯಾ ಯೋಜನೆಗಳನ್ನು ರೂಪಿಸಬೇಕು ಎಂದರು.
ಹಾವೇರಿ ಜಿಲ್ಲೆ ರಾಜ್ಯದಲ್ಲಿ ಅತ್ಯಂತ ಕೃಷಿ ಪ್ರಧಾನ ಪ್ರಾಮುಖ್ಯವಾದ ಜಿಲ್ಲೆಯಾಗಿದೆ. ಇಲ್ಲಿಯ ಹವಾಮಾನ, ಮಣ್ಣಿನಗುಣ, ಪ್ರದೇಶಕ್ಕನುಗುಣವಾಗಿ ನವೀನ ಕೃಷಿ ತಾಂತ್ರಿಕತೆ ಮೂಲಕ ಕೃಷಿ ಉತ್ಪನ್ನಗಳ ಹೆಚ್ಚಳ, ರೈತರ ಆರ್ಥಿಕ ಬೆಳವಣಿಗೆಗೆ ಪೂರಕವಾದ ಕ್ರಿಯಾ ಯೋಜನೆಯನ್ನು ತಯಾರಿಸಿ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ತಿಳಿಸಿದರು.
10 ಕೋಟಿ ರೂ.
ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರವನ್ನು ಪೂರ್ಣ ಪ್ರಮಾಣದ ಕೃಷಿ ವಿಜ್ಞಾನ ಕೇಂದ್ರವಾಗಿ ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ ಅಭಿವೃದ್ಧಿ ಕಾರ್ಯಗಳು ಆರಂಭಗೊಂಡಿವೆ. ಕೃಷಿ ಪದವಿ ಹಾಗೂ ಡಿಪ್ಲೋಮಾ ಕೋರ್ಸ್ಗಳನ್ನು ಆರಂಭಿಸಲಾಗಿದೆ. ಕಾಲೇಜು ಕಟ್ಟಡ ನಿರ್ಮಾಣ ಹಾಗೂ ವಿದ್ಯಾರ್ಥಿ ನಿಲಯದ ಕಟ್ಟಡಕ್ಕೆ ನರ್ಬಾಡ್ನಿಂದ ೧೦ ಕೋಟಿ ರೂ. ಮಂಜೂರಾಗಿದೆ. ಶೀಘ್ರವೇ ಕಟ್ಟಡ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಪೂರ್ಣ ಪ್ರಮಾಣದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.
ಕೆ.ವಿ.ಕೆ. ನೋಡಲ್ ಅಧಿಕಾರಿಗಳು ಹಾಗೂ ಪ್ರಧಾನ ವಿಜ್ಞಾನಿ ವಿಸ್ತರಣಾ ನಿರ್ದೇಶಕ ಶ್ರೀನಿವಾಸ ರೆಡ್ಡಿ ಅವರು ವಿಡಿಯೋ ಸಂವಾದದ ಮೂಲಕ ಮಾತನಾಡಿ, ಕೃಷಿ ಪ್ರಧಾನವಾದ ಹಾವೇರಿ ಜಿಲ್ಲೆಯಲ್ಲಿ ಮುಖ್ಯ ಬೆಳೆಗಳಲ್ಲಿ ಇಳುವರಿಯ ಸಮಸ್ಯೆಗಳ ಕ್ರೋಢಿಕರಿಸಿ ಈ ಸಮಸ್ಯೆ ನಿವಾರಣೆಗೆ ನವೀನ ಕೃಷಿ ತಾಂತ್ರಿಕತೆ ಅಳವಡಿಕೆ, ಬೀಜೋತ್ಪಾದನೆಗೆ ಆದ್ಯತೆ ನೀಡಬೇಕು. ಒಣ ಬೇಸಾಯ ಪ್ರದೇಶದಲ್ಲಿ ತೋಟಗಾರಿಕಾ ಚಟುವಟಿಕೆಯ ವಿಸ್ತರಣೆ ಸೇರಿದಂತೆ ಅಭಿವೃದ್ಧಿಗೆ ಪೂರಕವಾದ ಕ್ರಿಯಾ ಯೋಜನೆಯನ್ನು ರೂಪಿಸುವಂತೆ ಹೇಳಿದರು.
ಬೆಂಗಳೂರಿನ ಅಟಾರಾ ನಿರ್ದೇಶಕ ಹಾಗೂ ವಿಜ್ಞಾನಿ ಡಾ.ವೆಂಕಟಸುಬ್ರಮಣ್ಯ ಅವರು ಮಾತನಾಡಿ, ಪ್ರಾಕೃತಿಕ ಸಂಪನ್ಮೂಲಗಳ ನಿರ್ವಹಣೆ, ನವೀನ ತಾಂತ್ರಿಕತೆ ಅಳವಡಿಕೆ, ಸಾಮರ್ಥ್ಯವೃದ್ಧಿ ವಿವಿಧ ವೈಜ್ಞಾನಿಕ ಕ್ರಮಗಳ ಕುರಿತಂತೆ ಕ್ರಿಯಾ ಯೋಜನೆ ರೂಪಿಸಲು ಸಲಹೆ ನೀಡಿದರು.
ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಹಾಗೂ ಹಿರಿಯ ವಿಜ್ಞಾನಿ ಡಾ.ಪಿ.ಅಶೋಕ ಅವರು ಕೃಷಿ ವಿಜ್ಞಾನ ಕೇಂದ್ರದ ಕಳೆದ ಎರಡು ವರ್ಷಗಳ ಕಾರ್ಯಗಳ ಪೂರ್ಣ ಮಾಹಿತಿ ತಿಳಿಸಿದರು. ಸಭೆಯಲ್ಲಿ ಅನೇಕ ವಿಜ್ಞಾನಿಗಳು ರೈತರು ಪಾಲ್ಗೊಂಡಿದ್ದರು.