Monday, August 8, 2022

Latest Posts

ಹರಡುತ್ತಿರುವ ಕೊರೋನಾ ವೈರಸ್: ಕಾಸರಗೋಡು ಜಿಲ್ಲೆಯಲ್ಲಿ ನಿಷೇದಾಜ್ಞೆ ಜಾರಿಗೊಳಿಸಿದ ಜಿಲ್ಲಾಧಿಕಾರಿ

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಸೋಂಕು ಅತ್ಯಧಿಕ ಪ್ರಮಾಣದಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಆದೇಶ ಹೊರಡಿಸಿದ್ದಾರೆ. 1973ರ ಕ್ರಿಮಿನಲ್ ಕಾಯಿದೆ 144 ಪ್ರಕಾರದ ನಿಷೇಧಾಜ್ಞೆಯು ಅ.2 ರಂದು ಮಧ್ಯರಾತ್ರಿ 12 ಗಂಟೆಯಿಂದ ಅ.9 ರಂದು ಮಧ್ಯರಾತ್ರಿ 12 ಗಂಟೆಯ ವರೆಗೆ ಜಾರಿಯಲ್ಲಿರುವುದು ಎಂದವರು ತಿಳಿಸಿದ್ದಾರೆ.
ಕಾಸರಗೋಡು ಜಿಲ್ಲೆಯ ಎಲ್ಲ ಜನರು ಸಾಮಾಜಿಕ ಅಂತರ ಕಾಯ್ದುಕೊಂಡು, ಸಾಬೂನು ಅಥವಾ ಸಾನಿಟೈಸರ್ ಬಳಸಿ ಕೈಗಳನ್ನು ಶುಚಿಗೊಳಿಸಿ, ಸೂಕ್ತ ರೀತಿಯಲ್ಲಿ ಮಾಸ್ಕ್ ಬಳಸಿ, ಕೋವಿಡ್ ಪ್ರತಿರೋಧ ಸಂಹಿತೆಗಳನ್ನು ಯಥಾವತ್ತಾಗಿ ಪಾಲಿಸಿ ಸಹಕರಿಸುವಂತೆ ಅವರು ಕರೆ ನೀಡಿದರು.
ವಿವಾಹ ಸಂಬಂಧ ಸಮಾರಂಭಗಳಲ್ಲಿ ಗರಿಷ್ಠ 50 ಮಂದಿ ಹಾಗೂ ಮರಣ, ಉತ್ತರಕ್ರಿಯೆ ಸಹಿತದ ಕಾರ್ಯಕ್ರಮಗಳಲ್ಲಿ ಗರಿಷ್ಠ 20 ಮಂದಿ ಭಾಗವಹಿಸಬಹುದು.
ಅಧಿಕೃತ ಕಾರ್ಯಕ್ರಮಗಳು, ಧಾರ್ಮಿಕ ಕಾರ್ಯಕ್ರಮಗಳು, ಪ್ರಾರ್ಥನೆ, ರಾಜಕೀಯ ಪಕ್ಷಗಳ ಸಭೆಗಳು, ಸಾಂಸ್ಕೃತಿಕ, ಸಾಮಾಜಿಕ, ಸಾರ್ವಜನಿಕ ಸಮಾರಂಭಗಳು ಇತ್ಯಾದಿ ಕಡೆ 20 ಮಂದಿ ಭಾಗವಹಿಸಲು ಮಾತ್ರ ಅನುಮತಿ ನೀಡಲಾಗಿದೆ. ಸಾರ್ವಜನಿಕ ಉತ್ಸವಗಳು, ಬಸ್ ನಿಲ್ದಾಣ, ಸಾರ್ವಜನಿಕ ಸಂಚಾರ ವ್ಯವಸ್ಥೆ , ಕಚೇರಿಗಳು, ನೌಕರಿ ಕೇಂದ್ರಗಳು, ಅಂಗಡಿಗಳು, ಇನ್ನಿತರ ವಾಣಿಜ್ಯ , ವ್ಯಾಪಾರ ಸಂಸ್ಥೆಗಳು, ಉದ್ದಿಮೆ ಕೇಂದ್ರಗಳು, ಆಸ್ಪತ್ರೆಗಳು, ಆರೋಗ್ಯ ಕ್ಲಬ್ ಗಳು, ಕ್ರೀಡಾ ತರಬೇತಿ ಕೇಂದ್ರಗಳು, ಪರೀಕ್ಷೆ , ರಿಕ್ರೂಟ್ ಮೆಂಟ್ ಇತ್ಯಾದಿ ಕಡೆಗಳಲ್ಲಿ ಕಡ್ಡಾಯವಾಗಿ ಕೋವಿಡ್ ಪ್ರತಿರೋಧ ಅಂಗವಾಗಿ ಬ್ರೇಕ್ ದಿ ಚೈನ್ ಸಂಹಿತೆ ಪಾಲಿಸಬೇಕು ಎಂದು ಉಲ್ಲೇಖಿಸಲಾಗಿದೆ.
ಈ ಕೆಳಗೆ ತಿಳಿಸಲಾದ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮತ್ತು ಸಾರ್ವಜನಿಕ ಕೇಂದ್ರಗಳಲ್ಲಿ 5 ಮಂದಿಗಿಂತ ಅಧಿಕ ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಮಂಜೇಶ್ವರ, ಕುಂಬಳೆ, ಬದಿಯಡ್ಕ , ಕಾಸರಗೋಡು, ವಿದ್ಯಾನಗರ, ಮೇಲ್ಪರಂಬ, ಬೇಕಲ, ಹೊಸದುರ್ಗ, ನೀಲೇಶ್ವರ, ಚಂದೇರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲೂ ಮತ್ತು ಪರಪ್ಪ , ಒಡಯಂಚಾಲ್, ಪನತ್ತಡಿ ಪೇಟೆ ವ್ಯಾಪ್ತಿಗಳಲ್ಲೂ 5 ಮಂದಿಗಿಂತ ಅಧಿಕ ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಯವರ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈ ಆದೇಶದ ಜಾರಿಯ ಖಚಿತತೆ ನಡೆಸಬೇಕು. ಜನರು ಸೇರುವ ಸಾರ್ವಜನಿಕ ಪ್ರದೇಶಗಳಾದ ಮಾರುಕಟ್ಟೆ , ಬಸ್ ನಿಲ್ದಾಣ, ಬಸ್ ಗಾಗಿ ಕಾದು ನಿಲ್ಲುವ ತಾಣಗಳು ಸಹಿತ ವಿವಿಧ ಕೇಂದ್ರಗಳಲ್ಲಿ ದಿನಕ್ಕೆ ಕನಿಷ್ಠ ಒಂದು ಬಾರಿಯಾದರೂ ರೋಗಾಣುಮುಕ್ತ ಚಟುವಟಿಕೆ ನಡೆಸುವಂತೆ ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯದರ್ಶಿಗಳಿಗೆ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss