Tuesday, August 16, 2022

Latest Posts

ಹಳೆ ವಾಹನ ಗುಜರಿಗೆ ಹಾಕುವವರಿಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರಕಾರ

ಹೊಸ ದಿಗಂತ ಆನ್ ಲೈನ್ ಡೆಸ್ಕ್:  

ತಮ್ಮ ಹಳೆ ವಾಹನಗಳನ್ನು ಗುಜರಿಗೆ ಹಾಕುವವರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ.
ಹೌದು, ಕೇಂದ್ರ ಸರ್ಕಾರ ಜಾರಿಗೆ ತರಲಿರುವ ವಾಹನ ಗುಜರಿ ನೀತಿ ಅಡಿ ಹಳೆಯ ವಾಹನಗಳನ್ನು ಗುಜರಿಗೆ ಹಾಕಿ ಹೊಸ ವಾಹನ ಖರೀದಿಸುವವರಿಗೆ ಆಟೋ ಮೇಕರ್‌ಗಳಿಂದ 5%ರಷ್ಟು ವಿನಾಯಿತಿ ಸಿಗಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ಈ ಕುರಿತಂತೆ ಮಾಹಿತಿ ನೀಡಿದ ಸಚಿವರು,  ಈ ನೀತಿಯಡಿ ಹಳೆಯ ವಾಹನವನ್ನು ಗುಜರಿಗೆ ಹಾಕಿದವರಿಗೆ ಆಟೋ ಮೊಬೈಕ್ ತಯಾರಕರು ಹೊಸ ಕಾರುಗಳ ಖರೀದಿ ಮೇಲೆ ಶೇ 5ರಷ್ಟು ವಿನಾಯಿತಿ ನೀಡಲಿದ್ದಾರೆ. ಈ ನೀತಿಯಲ್ಲಿ ನಾಲ್ಕು ಪ್ರಮುಖ ಅಂಶಗಳು ಇವೆ. ವಿನಾಯಿತಿಯ ಆಚೆಗೆ, ಹಸಿರು ತೆರಿಗೆಗಳು ಮತ್ತು ಹಳೆಯ ಮಾಲಿನ್ಯಕಾರಕ ವಾಹನಗಳ ಮೇಲೆ ಇತರೆ ಸುಂಕಗಳನ್ನು ವಿಧಿಸುವ ನಿಯಮಗಳು ಇವೆ. ಹಳೆಯ ವಾಹನಗಳು ಸ್ವಯಂಚಾಲಿತ ಸೌಲಭ್ಯ ಕೇಂದ್ರಗಳಲ್ಲಿ ಫಿಟ್ನೆಸ್ ಹಾಗೂ ಮಾಲಿನ್ಯ ಪರೀಕ್ಷೆಗೆ ಒಳಪಡುವುದು ಕಡ್ಡಾಯವಾಗಲಿದೆ. ಇದಕ್ಕಾಗಿ ದೇಶದೆಲ್ಲೆಡೆ ಫಿಟ್ನೆಸ್ ಕೇಂದ್ರಗಳನ್ನು ಸ್ಥಾಪಿಸಬೇಕಿದ್ದು, ಆ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಸ್ವಯಂಚಾಲಿತ ಫಿಟ್ನೆಸ್ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಸ್ಕ್ರಾಪಿಂಗ್ ಕೇಂದ್ರಗಳಿಗಾಗಿ ಖಾಸಗಿ ಪಾಲುದಾರರು ಮತ್ತು ರಾಜ್ಯ ಸರ್ಕಾರಗಳಿಗೆ ಸರ್ಕಾರ ಸಹಾಯ ಮಾಡಲಿದೆ. ಸ್ವಯಂಚಾಲಿತ ಪರೀಕ್ಷೆಗಳಲ್ಲಿ ಉತ್ತೀರ್ಣವಾಗಲು ವಿಫಲವಾಗುವ ವಾಹನಗಳಿಗೆ ಭಾರಿ ದಂಡ ವಿಧಿಸಲಾಗುತ್ತದೆ ಮತ್ತು ವಶಕ್ಕೆ ಪಡೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಳೆದ ತಿಂಗಳು ಮಂಡಿಸಿದ ಕೇಂದ್ರ ಬಜೆಟ್ 2021ರಲ್ಲಿ ಸ್ವಯಂ ಪ್ರೇರಿತ ವಾಹನ ಗುಜರಿ ನೀತಿಯನ್ನು ಪ್ರಕಟಿಸಲಾಗಿತ್ತು. ಖಾಸಗಿ ವಾಹನಗಳಿಗೆ 20 ವರ್ಷಗಳ ಬಳಿಕ ಹಾಗೂ ವಾಣಿಜ್ಯ ವಾಹನಗಳಿಗೆ 15 ವರ್ಷದ ನಂತರ ಫಿಟ್ನೆಸ್ ಪರೀಕ್ಷೆ ನಡೆಸಬೇಕು ಎಂದು ಈ ನೀತಿ ಹೇಳಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss