Wednesday, July 6, 2022

Latest Posts

ಹಳ್ಳಿಗರ ನೆಮ್ಮದಿ ಕೆಡಿಸಿದ ಕೊರೋನಾ ಎಂಬ ಮಹಾಮಾರಿ

ಸಾಗರ: ಮಲೆನಾಡು ಭಾಗದ ಬಹುತೇಕ ಹಳ್ಳಿಗಳ ಯುವ ಜನತೆ ಉದ್ಯೋಗಕ್ಕಾಗಿ ದೊಡ್ಡದೊಡ್ಡ ದೇಶ ಮತ್ತು ನಗರಗಳಲ್ಲಿದ್ದಾರೆ. ಕೊರೋನಾ ಭೀತಿಯಿಂದ ವಿವಿಧ ದೇಶದಿಂದ ನಗರ ಮತ್ತು ಹಳ್ಳಿಗಳಿಗೆ ಬರುತ್ತಿರುವುದರಿಂದ ಇನ್ನಷ್ಟು ಆತಂಕ ಸೃಷ್ಟಿ ಉಂಟಾಗಲು ಕಾರಣವಾಗಿದೆ.

ಈಗಾಗಲೇ ನಗರ ಪ್ರದೇಶ ಸಂಪರ್ಕಿಸುವ ರೈಲು, ವಿಮಾನ ನಿಲ್ದಾಣ, ಗಡಿ ಭಾಗದಲ್ಲಿ ಕೊರೋನಾ ತಡೆಗಟ್ಟಲು ಆರೋಗ್ಯ ಇಲಾಖೆ ಶಕ್ತಿಮೀರಿ ಪ್ರಯತ್ನ ನಡೆಸುತ್ತಿದೆ. ಆದರೆ, ಹೊರ ದೇಶ ಮತ್ತು ರಾಜ್ಯದಿಂದ ಸ್ವಗ್ರಾಮಕ್ಕೆ ಮರಳುವವರ ಸಂಖ್ಯೆಯೂ ಹೆಚ್ಚಾಗಿದೆ. ಇವರ ಮೇಲೆ ಇನ್ನಷ್ಟು ನಿಗಾ ವಹಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಪೇಟೆಯಿಂದ ಹಳ್ಳಿ ಕಡೆಗೆ: ಮಲೆನಾಡು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಯ ಸಾವಿರಾರು ಯುವಕ -ಯುವತಿಯರು ಉದ್ಯೋಗಕ್ಕಾಗಿ ಬೆಂಗಳೂರು, ದೆಹಲಿ, ಮುಂಬೈ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಬೇರೆಬೇರೆ ರಾಜ್ಯಗಳಿಗೆ ವಲಸೆ ಹೋಗಿದ್ದಾರೆ. ಇನ್ನು ಕೆಲವರು ಅಮೆರಿಕಾ, ನ್ಯೂಯಾರ್ಕ್, ದುಬೈನಂತಹ ದೇಶಗಳಿಗೆ ಉದ್ಯೋಗ ಮತ್ತು ವಿದ್ಯಾಭ್ಯಾಸಕ್ಕೆ ಹೋಗಿದ್ದಾರೆ. ಅವರೆಲ್ಲಾ ಕೊರೋನಾ ಭಯದಿಂದ ಹಳ್ಳಿಗಳಿಗೆ ವಾಪಾಸ್ ಬಂದಿದ್ದಾರೆ. ಇವರು ತಪಾಸಣೆ ಬಳಿಕವೂ ಕೂಡ ಕೆಲವು ಕಡೆಗಳಲ್ಲಿ ಪ್ರಕರಣಗಳು ಕಂಡು ಬರುತ್ತಿರುವುದರಿಂದ ಗ್ರಾಮೀಣ ಭಾಗದಲ್ಲೂ ಇಂತಹ ಘಟನೆಗಳು ಸಂಭವಿಸುವ ಸಾಧ್ಯತೆಗಳಿವೆ.

ಪಿಜಿ ಬಿಟ್ಟು ಬಂದ ಯುವಕರು: ಕೆಲವು ನಗರಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಪಿ.ಜಿ.ಯಲ್ಲಿದ್ದವರನ್ನು ಒತ್ತಾಯ ಪೂರ್ವಕವಾಗಿ ಮನೆಗೆ ಕಳುಹಿಸಲಾಗುತ್ತಿದೆ. ಇದಕ್ಕೆ ಪುಷ್ಟಿ ಕೊಡುವಂತೆ ಸಾಗರ ತಾಲೂಕುವೊಂದರಲ್ಲೇ ಕಳೆದ ಒಂದು ವಾರದಿಂದ ಸಾವಿರಾರು ಯುವಕ -ಯುವತಿಯರು, ಅವರನ್ನುನಂಬಿಕೊಂಡು ನಗರ ಸೇರಿದ್ದ ಅಪ್ಪ ಅಮ್ಮಂದಿರು ತಮ್ಮ ಮೂಲ ಊರಿಗೆ ಮರಳಿದ್ದಾರೆ. ಹಳ್ಳಿಗೆ ಮರಳಿರುವುದು ಈಗ ಸಮಸ್ಯೆಯಾಗಿದೆ. ಇದು ಗ್ರಾಮೀಣ ಜನರ ನೆಮ್ಮದಿಯನ್ನು ಕಿತ್ತುಕೊಂಡಿದೆ.

ವರ್ಕ್ ಫ್ರಂ ಹೋಂ: ನಗರಗಳಲ್ಲಿ ದೊಡ್ಡದೊಡ್ಡ ಕಂಪನಿಯಲ್ಲಿ ಕೆಲಸ ಮಾಡುವ ಯುವಕ – ಯುವತಿಯರು ಕಾಯಿಲೆ ಭೀತಿ ಕಾಡುತ್ತಿದೆ. ಕಂಪನಿಗಳನ್ನು ತಾತ್ಕಾಲಿಕವಾಗಿ ಮುಚ್ಚಿರುವುದರಿಂದ ತಮ್ಮ ಲ್ಯಾಪ್‌ಟಾಪ್ ಸಹಿತ ಹಳ್ಳಿಗೆ ಬಂದಿದ್ದಾರೆ. ಕಂಪನಿ ಮಾಲೀಕರು ಮನೆಯಲ್ಲಿ ಕೆಲಸ ಮಾಡಿ ಪ್ರತಿದಿನ ಆನ್‌ಲೈನ್ ಮೂಲಕ ಕಳುಹಿಸುವ ಕಂಡೀಷನ್ ಹಾಕಿ ಕಳಿಸಿದ್ದಾರೆ. ವರ್ಕ್ ಫ್ರಂ ಹೋಂನಿಂದ ಅವರು ತಿಂಗಳು ಪಡೆಯುವಷ್ಟು ಸಂಬಳ ಸಹ ಅವರ ಖಾತೆಗೆ ಜಮೆ ಆಗುತ್ತದೆ. ಇದರಿಂದಾಗಿ ಬೆಂಗಳೂರು ಸೇರಿದಂತೆ ಬೇರೆಬೇರೆ ರಾಜ್ಯಗಳ ಐಟಿಬಿಟಿ ಸೇರಿದಂತೆ ಪ್ರತಿಷ್ಠಿತ ಕಂಪನಿಯಲ್ಲಿದ್ದವರು ತಮ್ಮ ಹಳ್ಳಿಗೆ ಬಂದು ಮನೆಯಲ್ಲಿಯೇ ಕಚೇರಿಯಲ್ಲಿ ಮಾಡಬಹುದಾದ ಎಲ್ಲ ಕೆಲಸವನ್ನು ಮಾಡುತ್ತಿದ್ದಾರೆ.

ಮನೆ ಮೇಲು ಆಂಟೆನಾ: ಹಳ್ಳಿಗಳಲ್ಲಿ ಇಂಟರ್‌ನೆಟ್ ಸಂಪರ್ಕ ಸಿಗುವುದು ಕಷ್ಟ. ಈ ಹಿನ್ನೆಲೆಯಲ್ಲಿ ನಗರದಿಂದ ಹಳ್ಳಿಗೆ ಬಂದವರು ಆಂಟೆನಾ ಮೂಲಕ ಇಂಟರ್‌ನೆಟ್ ಸೌಲಭ್ಯ ಕಲ್ಪಿಸಿಕೊಂಡಿದ್ದಾರೆ. ಆನ್‌ಲೈನ್ ಅಥವಾ ಕೆಲವು ಆಂಟೆನಾ ಮಾರಾಟ ಸಂಸ್ಥೆಯಿಂದ ಆಂಟೇನಾ ಖರೀದಿಸಿ ಹಳ್ಳಿಯಲ್ಲಿರುವ ತಮ್ಮ ಮನೆಯ ಮೇಲ್ಭಾಗದಲ್ಲಿ ಅಳವಡಿಸಿಕೊಂಡಿದ್ದಾರೆ.
ಈ ಆಂಟೆನಾ ಸುಮಾರು 2000 ಅಡಿ ಸುತ್ತಮುತ್ತಲಿನ ಪ್ರದೇಶದಲ್ಲಿ ಇಂಟರ್‌ನೆಟ್ ಸೌಲಭ್ಯ ಕಲ್ಪಿಸುತ್ತದೆ. ಇದಕ್ಕೆ ಸುಮಾರು 20 ಸಾವಿರ ರೂ. ಖರ್ಚು ಬರುತ್ತದೆ. ಇಷ್ಟು ಹಣ ಖರ್ಚು ಮಾಡಿದರೂ ಚಿಂತೆಯಿಲ್ಲ. ಕಾಯಿಲೆ ಭೀತಿಯಿಂದ ದೂರವಿದ್ದು, ಬರುವ ಸಂಬಳಕ್ಕೆ ಕೆಲಸ ಮಾಡಬಹುದು ಎನ್ನುವುದು ಅವರ ಆಲೋಚನೆಯಾಗಿದೆ. ಒಂದೊಮ್ಮೆ ಅವರಿಗೆ ಕರೋನಾ ಇದ್ದರೆ ಗತಿ ಏನು ಎನ್ನುವುದು ಗ್ರಾಮೀಣ ಜನರ ಯೋಚನೆಯಾಗಿದೆ!

ಕೆಮ್ಮು, ಜ್ವರ ಬಂದರೆ ಎಚ್ಚರ: ಆರೋಗ್ಯ ಇಲಾಖೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯ ಸಿಬ್ಬಂದಿಗಳಿಗೆ, ಆರೋಗ್ಯ ಮತ್ತು ಆಶಾ ಕಾರ್ಯಕರ್ತೆಯರಿಗೆ ಕರೋನಾ ಕುರಿತು ತರಬೇತಿ ನೀಡಿದೆ. ಫ್ಲೂಕಾರ್ನರ್ ಮಾಡುವ ಮೂಲಕ ಶೀತ, ಕೆಮ್ಮು, ಜ್ವರ ಬಂದರೆ ಅವರನ್ನು ತಕ್ಷಣ ಆಸ್ಪತ್ರೆಗೆ ಬರುವಂತೆ ವೈದ್ಯಕೀಯ ಸಲಹೆ ಸಹ ನೀಡುತ್ತಿದೆ. ಆದರೆ ನಗರಗಳಿಂದ ಹಳ್ಳಿಗೆ ಬಂದವರ ಬಗ್ಗೆ ಗಮನ ಹರಿಸುತ್ತಿಲ್ಲ ಎನ್ನುವ ದೂರು ಕೇಳಿ ಬಂದಿದೆ. ಹೀಗೆ ನಗರಗಳಿಂದ ಹಳ್ಳಿಗೆ ಬಂದ ಕೆಲವರು ಜನಸಾಮಾನ್ಯರ ಜೊತೆ ಬೆರೆಯುತ್ತಿದ್ದಾರೆ. ಸಭೆ ಸಮಾರಂಭ, ಮದುವೆಗಳಲ್ಲಿ ತಿರುಗುತ್ತಿದ್ದಾರೆ. ಕೊರೋನಾ ಇದೀಗ ಎರಡನೇ ಹಂತವನ್ನು ದಾಟುವ ಹೊಸ್ತಿನಲ್ಲಿದೆ. ಇಂತಹ ಹೊತ್ತಿನಲ್ಲಿ ನಗರ ಪ್ರದೇಶದ ಬಗ್ಗೆ ಗಮನ ಹರಿಸುವ ಸರ್ಕಾರ ಗ್ರಾಮೀಣ ಭಾಗಕ್ಕೂ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. ಆರೋಗ್ಯ ಇಲಾಖೆ ಪತ್ತೆಹಚ್ಚಿ ಅವರನ್ನು ತಪಾಸಣೆಗೆ ಒಳಪಡಿಸಬೇಕೆಂದು ಜನರ ಆಗ್ರಹ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss