Friday, August 12, 2022

Latest Posts

ಹಸಿರುವಲಯವಾಗಿದ್ದ ಕೋಲಾರ ಜಿಲ್ಲೆಯಲ್ಲೂ ಕೊರೋನಾ ಕೇಕೆ| ಮುಳಬಾಗಿಲಿನಲ್ಲಿ ಐವರಿಗೆ ಸೋಂಕು ದೃಢ

ಕೋಲಾರ: ಕೊರೋನಾ ಮಾರಿಯ ಸುಳಿಗೆ ಸಿಲುಕದೇ ಹಸಿರುವಲಯವಾಗಿದ್ದ ಜಿಲ್ಲೆಯಲ್ಲಿ ಐವರಿಗೆ ಸೋಂಕು ದೃಢಪಟ್ಟಿದ್ದು ಲಾಕ್‌ಡೌನ್ ಸಡಿಲಿಕೆ ನಂತರ ಗಡಿಗಳಲ್ಲಿ ಆತಂಕ ಹೆಚ್ಚಲು ಕಾರಣವಾಗಿದೆ.
ಮುಳಬಾಗಿಲು ತಾಲ್ಲೂಕಿನ ಬುಸಲುಕುಂಟ ಗ್ರಾಮದ ೬೫ ವರ್ಷದ ಮಹಿಳೆ, ಬೈರಕೂರು ಹೋಬಳಿ ವಿ.ಹೊಸಹಳ್ಳಿಯ ಓರ್ವ ವಿದ್ಯಾರ್ಥಿನಿ, ತಾಯಲೂರು ಹೋಬಳಿ ಬೆಳಗಾನಹಳ್ಳಿಯ ಒರಿಸ್ಸಾಗೆ ಹೋಗಿ ಬಂದಿದ್ದ ಚಾಲಕರಿಬ್ಬರು,ಇದೇ ಹೋಬಳಿಯ ಬೈರಸಂದ್ರದ ೪೫ ವರ್ಷದ ಮಧ್ಯ ವಯಸ್ಕರಿಗೆ ಈ ಸೋಂಕು ತಾಗಿದೆ ಎಂದು ದೃಢಪಟ್ಟಿದೆ.
ರಾಜ್ಯ ಸೋಂಕಿತರ ಪಟ್ಟಿಯಲ್ಲೂ ಜಿಲ್ಲೆಯ ಹೆಸರು ಇದೀಗ ಪ್ರತ್ಯಕ್ಷವಾಗಿದ್ದು, ಪಿ-೯೦೬, ಪಿ-೯೦೭, ಪಿ-೯೦೮, ಪಿ-೯೦೯, ಪಿ-೯೧೦ ಎಂದು ಸೋಂಕಿತರಿಗೆ ಸಂಖ್ಯೆ ನೀಡಲಾಗಿದೆ.
ಹೊರಗೋಗಿದ್ದವರೇ ಸೋಂಕಿತರಾಗಿ ಪತ್ತೆ
ಜಿಲ್ಲೆಯಲ್ಲೇ ಇದ್ದವರಿಗೆ ಯಾರಿಗೂ ಈವರೆಗೂ ಸೋಂಕು ಪತ್ತೆಯಾಗಿಲ್ಲ, ಈಗ ಪತ್ತೆಯಾಗಿರುವ ಐವರು ಹೊರ ಜಿಲ್ಲೆ,ರಾಜ್ಯಗಳಿಗೆ ಹೋಗಿ ಬಂದವರೇ ಆಗಿರುವುದು ಆತಂಕ ಸ್ವಲ್ಪಮಟ್ಟಿಗೆ ಕಡಿಮೆಯಾಗುವಂತೆ ಮಾಡಿದೆ.
ಪಿ-೯೦೬ ಸೋಂಕಿತೆ ೨೨ ವರ್ಷದ ವಿದ್ಯಾರ್ಥಿನಿಯಾಗಿದ್ದು, ಈಕೆ ಹುಮ್ನಾಬಾದ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದರೆನ್ನಲಾಗಿದ್ದು ಇತ್ತೀಚೆಗೆ ಗ್ರಾಮಕ್ಕೆ ವಾಪಸ್ಸಾಗಿದ್ದು, ಈಕೆಯ ಗಂಟಲು ದ್ರಮದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು.
ಪಿ.೯೦೭ ಸೋಂಕಿತ ಮಹಿಳೆ ಬೆಂಗಳೂರಿನ ಜೆಪಿ ನಗರದಲ್ಲಿ ಮನೆಕೆಲಸ ಮಾಡಿಕೊಂಡಿದ್ದು, ಈಕೆ ಇತ್ತೀಚೆಗೆ ಊರಿಗೆ ಬಂದಿದ್ದ ಕಾರಣ ಈಕೆಯನ್ನು ಕ್ವಾರೆಂಟೈನ್‌ಗೆ ಒಳಪಡಿಸಲಾಗಿತ್ತು. ಪಿ-೯೦೮ ಮತ್ತು ಪಿ-೯೦೯ ಇಬ್ಬರು ಲಾರಿ ಚಾಲಕರಾಗಿದ್ದು, ಇವರು ಇತ್ತೀಚೆಗೆ ಒರಿಸ್ಸಾಗೆ ಹೋಗಿ ಬಂದಿದ್ದರೆನ್ನಲಾಗಿದ್ದು, ಇವರ ಗಂಟಲು ದ್ರವವನ್ನೂ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು.
ಪಿ-೯೧೦ ಸಹಾ ಚಾಲಕನಾಗಿದ್ದು, ಇವರು ಚೆನ್ನೈಗೆ ಹೋಗಿ ಬಂದಿದ್ದರೆನ್ನಲಾಗಿದ್ದು, ಇವರ ಗಂಟಲು ದ್ರವವನ್ನೂ ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದು, ಈ ಐವರು ಸೋಂಕಿತರೆಂದು ಫಲಿತಾಂಶ ಬಂದಿದೆ.
ಕೋಲಾರ ಜಿಲ್ಲೆಯಲ್ಲೂ ಕೊರೋನಾ ಕೇಕೆ
ಇಡೀ ರಾಜ್ಯದಲ್ಲೇ ಕೊರೋನಾ ಮಾರಿ ಕೇಕೆ ಹಾಕುತ್ತಿದ್ದರೂ, ಕೊರೋನಾ ರೆಡ್ ಝೋನ್‌ನಲ್ಲಿದ್ದ ಆಂದ್ರ,ತಮಿಳುನಾಡು ರಾಜ್ಯಗಳ ಗಡಿ, ಮತ್ತೊಂದೆಡೆ ಚಿಕ್ಕಬಳ್ಳಾಪುರ,ಬೆಂಗಳೂರು ಗ್ರಾಮಾಂತರ ಗಡಿಗಳನ್ನು ಹೊಂದಿ, ಸುತ್ತಲೂ ಸೋಂಕಿತರಿಂದ ಕೂಡಿದ್ದರೂ ಜಿಲ್ಲಾಡಳಿತದ ಬಿಗಿ ಕ್ರಮಗಳಿಂದಾಗಿ ಸೋಂಕು ಜಿಲ್ಲೆಗೆ ನುಸುಳಿರಲಿಲ್ಲ. ವಿಕೋಟಾ ಮೂಲದ ಸೋಂಕಿತ ತರಕಾರಿ ವ್ಯಾಪಾರಿ ಈಗಾಗಲೇ ನಗರದ ಎಪಿಎಂಸಿಯಲ್ಲಿ ಓಡಾಡಿಕೊಂಡು ಹೋಗಿದ್ದು, ಅಲ್ಲಿನ ೨೬ ಮಂದಿಯನ್ನು ಕ್ವಾರೆಂಟೈನ್‌ಗೆ ಕಳುಹಿಸಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಶ್ರೀನಿವಾಸಪುರಕ್ಕೆ ಆಂಧ್ರದಿಂದ ಬಂದಿದ್ದ ವ್ಯಕ್ತಿ ಓಡಾಡಿಕೊಂಡು ಹೋಗಿದ್ದರಿಂದಾಗಿ ಅಲ್ಲಿ ೪೪ ಮಂದಿಯನ್ನು ಕ್ವಾರೆಂಟೈನ್‌ಗೆ ಒಳಪಡಿಸಲಾಗಿದೆ. ಒಟ್ಟರೆ ಹಸಿರುವಲಯವಾಗಿದ್ದ ಕೋಲಾರಕ್ಕೆ ಆಂಧ್ರದ ಗಡಿ ಮತ್ತು ಹೊರ ಜಿಲ್ಲೆ,ರಾಜ್ಯಗಳಿಗೆ ಹೋಗಿ ಬಂದವರೇ ಕಂಟಕವಾಗಿದ್ದು, ಕರೋನಾ ಸೋಂಕಿತರ ಪಟ್ಟಿಯಲ್ಲಿ ಕೋಲಾರವೂ ಕಾಣುವಂತಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss