Wednesday, July 6, 2022

Latest Posts

ಹಸಿರು ಪಟಾಕಿಯ ಗೊಂದಲಗಳ ನಡುವೆಯೂ ಸಾಂಪ್ರದಾಯಿಕ ದೀಪಾವಳಿ ಆಚರಣೆ ಮಾಡಿದ ಜನತೆ

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ಕೊರೋನಾ ನಿರ್ಬಂಧ, ಹಸಿರು ಪಟಾಕಿಯ ಗೊಂದಲಗಳಿದ್ದರೂ ಜನತೆ ದೀಪಾವಳಿಯ ಸಾಂಪ್ರದಾಯಿಕ ಆಚರಣೆಯನ್ನು ಸಡಗರದಿಂದ ಆಚರಿಸಿರು.
ಪಟಾಕಿಗಳ ಮೇಲೆ ಹೇರಲಾಗಿದ್ದ ನಿರ್ಬಂಧಗಳು ಹೆಚ್ಚೇನು ಪರಿಣಾಮ ಬೀರಿದಂತೆ ಕಾಣಲಿಲ್ಲ. ಹಬ್ಬದ ಮೊದಲ ದಿನ ನರಕಚತುರ್ದಶಿಯಂದು ಜನವಸತಿ ಬಡಾವಣೆಗಳಲ್ಲಿ ಮಾಮೂಲಿನಂತೆ ಪಟಾಕಿಗಳನ್ನು ಹಚ್ಚಿ ಸಂಭ್ರಮಿಸಿದ್ದು ಕಂಡುಬಂದರೆ, ಮಾರುಕಟ್ಟೆ ಪ್ರದೇಶದ ವಾಣಿಜ್ಯ ಮಳಿಗೆಗಳಲ್ಲಿ ಬಹಳ ಮಂದಿ ಶನಿವಾರವೇ ಲಕ್ಷ್ಮೀ ಪೂಜೆ ಆಚರಿಸಿದರಾದರೂ ಪಟಾಕಿಗಳನ್ನು ಮಾತ್ರ ಹಚ್ಚದಿರುವುದು ಕಂಡುಬಂತು.
ಅಧಿಕಾರಿಗಳು ಬರುತ್ತಾರೆ ದಂಡ ವಿಧಿಸುತ್ತಾರೆ ಎನ್ನುವುದ ಕೆಲವರ ಭಯವಾದರೆ, ಕೊರೋನಾ ಸಂದರ್ಭದಲ್ಲಿ ಪಟಾಕಿಗಳಿಂದ ಉಂಟಾಗುವ ಮಾಲಿನ್ಯ ಹೆಚ್ಚು ಅಪಾಯವನ್ನು ಉಂಟುಮಾಡುತ್ತದೆ ಎಂದು ಸರ್ಕಾರವೇ ನಿರ್ಬಂಧ ಹೇರಿದೆ ಈ ಕಾರಣಕ್ಕೆ ಪಟಾಕಿಗಳನ್ನು ಹಚ್ಚಲಿಲ್ಲ ಎಂದರು.
ಉಳಿದಂತೆ ನಗರದ ಎಂಜಿ ರಸ್ತೆ ಇನ್ನಿತರೆ ಪ್ರಮುಖ ಬೀದಿಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಿ ಅದ್ಧೂರಿಯಾಗಿ ಲಕ್ಷ್ಮೀಪೂಜೆ ನೆರೆವೇರಿಸಿದರು.
ಭಾನುವಾರ ಲಕ್ಷ್ಮೀ ಪೂಜೆ ಅಂಗವಾಗಿ ನಗರದ ಮನೆ ಮನೆಗಳಲ್ಲಿ ತಳಿರು-ತೋರಣ ಕಟ್ಟಿ ಸಿಂಗರಿಸಿ ಸ್ನೇಹಿತರು, ಬಂಧು-ಬಳಗಕ್ಕೆ ಸಿಹಿ ಹಂಚಿ ಹೋಳಿಗೆ ಊಟ ಸವಿದು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಮನೆ ಮನೆಗಳಲ್ಲಿ ಹಣತೆಗಳನ್ನು ಹಚ್ಚಿಟ್ಟು ಬೆಳಕು ಚೆಲ್ಲಿದ ಆಸ್ತಿಕರು ಮನೆ ಬಾಗಿಲಲ್ಲಿ ರಂಗೋಲಿ, ತಳಿರು-ತೋರಣ ಕಟ್ಟಿ ಹೂವಿನಿಂದ ಅಲಂಕರಿಸಿ ದೀಪಾವಳಿ ಹಬ್ಬಕ್ಕೆ ವಿಶೇಷ ಮೆರುಗು ನೀಡಿದ್ದರು. ಲಕ್ಷ್ಮೀಪೂಜೆಯ ಪ್ರಯುಕ್ತ ಅಂಗಡಿಗಳಲ್ಲಿ ಕಲಶವನ್ನಿಟ್ಟು ಜತೆಗೆ ಧನ-ಧಾನ್ಯದೊಂದಿಗೆ ಭಕ್ತಿ ಪೂರ್ವಕವಾಗಿ ಪೂಜೆ-ಪ್ರಾರ್ಥನೆ ಸಲ್ಲಿಸಿದರು.
ಅಂಗಡಿ ಮೇಲೆ ದಾಳಿ
ಶನಿವಾರ ರಾತ್ರಿ ನಗರಸಭೆ ಆಯುಕ್ತ ಬಸವರಾಜ್ ಸೇರಿದಂತೆ ಪೊಲೀಸ್ ಸಿಬ್ಬಂಧಿಗಳು ನಗರದ ಪಟಾಕಿ ಅಂಗಡಿಗಳ ಮೇಲೆ ದಾಳಿ ನಡೆಸಿ ನಿರ್ಬಂಧಿತ ಪಟಾಕಿಗಳನ್ನು ವಶಕ್ಕೆ ಪಡೆದುಕೊಂಡರು.
ಸರ್ಕಾರ ಸೂಚಿಸಿದ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು ಎಂದು ತಾಕೀತು ಮಾಡಿದರು. ಈ ವೇಳೆ ಅಂಗಡಿ ಮಾಲೀಕರು ಮೊದಲೇ ವ್ಯಾಪಾರವಿಲ್ಲ. ಹೂಡಿದ ಬಂಡವಾಳವೂ ಈ ಬಾರಿ ಕೈಗೆ ಸಿಗುವ ಭರವಸೆ ಇಲ್ಲ. ಪಟಾಕಿಗಳನ್ನು ವಶಪಡಿಸಿಕೊಳ್ಳುವುದು ಸರಿಯಲ್ಲ ಎಂದು ಮನವಿ ಮಾಡಿದರೂ ಅಧಿಕಾರಿಗಳು ಸಾರ್ವಜನಿಕ ಹಿತದೃಷ್ಠಿಯಿಂದ ಸರ್ಕಾರ ತೆಗೆದುಕೊಂಡಿರುವ ತೀರ್ಮಾನಕ್ಕೆ ಸ್ಪಂದಿಸಬೇಕು ಎಂದು ಮನವರಿಕೆ ಮಾಡಿಕೊಟ್ಟರು.
ಅಂಗಡಿ ಮುಚ್ಚಲು ಸೂಚನೆ
ಹಸಿರು ಪಟಾಕಿ ಹೊರತುಪಡಿಸಿ ಉಳಿದಂತೆ ಶಬ್ಧ ಹಾಗೂ ವಾಯುಮಾಲಿನ್ಯ ಹೆಚ್ಚಿಸುವ ಪಟಾಕಿಗಳನ್ನು ಸಿಡಿಸಬಾರದು ಎನ್ನುವ ನಿರ್ಬಂಧವಿದ್ದರೂ ಶನಿವಾರ ರಾತ್ರಿ ಎಲ್ಲೆಡೆ ಮಾಮೂಲಿಯಂತೆ ಪಟಾಕಿಗಳನ್ನು ಹಚ್ಚಿದ್ದು ಕಂಡು ಬಂದ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ 10 ಗಂಟೆ ನಂತರ ಎಲ್ಲ ಪಟಾಕಿ ಅಂಗಡಿಗಳನ್ನು ಮುಚ್ಚಿಸುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ನಗರಸಭೆ ಸಿಬ್ಬಂದಿಗಳನು ಅಂಗಡಿಗಳನ್ನು ಮುಚ್ಚುವಂತೆ ಮಾಲೀಕರಿಗೆ ಸೂಚನೆ ನೀಡಿದರು. ಇದರಿಂದ ಆತಂಕಗೊಂಡ ವ್ಯಾಪಾರಿಗಳು ಬೆಳಗ್ಗೆ ಶಾಸಕ ಸಿ.ಟಿ.ರವಿ ಅವರ ಮನೆಗೆ ತೆರಳಿ ಅಹವಾಲು ಹೇಳಿಕೊಂಡಿದ್ದರು. ನಂತರ ಶಾಸಕರು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಬುಧವಾರದ ವರೆಗೆ ಪಟಾಕಿ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟರು.
ಭಾರೀ ನಷ್ಟ
ಕಳೆದ ಬಾರಿಗೆ ಹೋಲಿಸಿದರಲ್ಲಿ ಈ ವರ್ಷ ಅರ್ಧಕ್ಕಿಂತಲೂ ವ್ಯಾಪಾರ ಕಡಿಮೆಯಾದ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದ ನಷ್ಟ ಅನುಭವಿಸಬೇಕಾಗಿದೆ ಎಂದು ಪಟಾಕಿ ವ್ಯಾಪಾರಿಗಳು ತಿಳಿಸಿದರು.
ಪಟಾಕಿ ಮಾರಾಟಕ್ಕೆ ಸರ್ಕಾರ ಕೊನೆ ಘಳಿಗೆಯಲ್ಲಿ ನಿರ್ಬಂಧ ಹೇರಿದ್ದು ಇದಕ್ಕೆ ಕಾರಣ. ಪಟಾಕಿ ಖರೀದಿಸಿ ದಾಸ್ತಾನಿಟ್ಟುಕೊಂಡ ನಂತರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿರುವುದು ನಷ್ಟಕ್ಕೆ ಕಾರಣವಾಯಿತು ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss