Monday, July 4, 2022

Latest Posts

ಹಸಿವು ಎಂದು ಆನ್ ಲೈನ್ ನಲ್ಲಿ ಊಟ ಆರ್ಡರ್ ಮಾಡಿದ್ದ ಯುವತಿಗೆ ಬಂದಿದ್ದು ‘ಸಾರಿ ನಿಮ್ಮ ಊಟ ನಾನು ತಿಂದೆ’ ಎಂಬ ಸಂದೇಶ !! ಮುಂದೇನಾಯ್ತು ?

ಹೊಸ ದಿಗಂತ ಆನ್ ಲೈನ್ ಡೆಸ್ಕ್: 

ಹೊಟ್ಟೆ ತೀರಾ ಹಸಿದಿರುತ್ತದೆ. ಆನ್ಲೈನ್ನಲ್ಲಿ ಊಟ ಆರ್ಡರ್ ಮಾಡಿ, ಅದು ಬರುವುದಕ್ಕೇ ಕಾಯುತ್ತಾ ಕುಳಿತಿರುತ್ತೀರಿ. ಆಗ ನಿಮ್ಮ ಊಟದ ಡೆಲಿವರಿ ಬಾಯ್, ಊಟ ತಿಂದು ಮುಗಿಸಿಬಿಟ್ಟೆ ಎಂದು ಸಂದೇಶ ಕಳುಹಿಸಿದರೆ? ಆ ಸ್ಥಿತಿಯನ್ನು ನೆನಪಿಸಿಕೊಂಡರೇ, ಕೋಪ ಉಕ್ಕಿಬರುತ್ತದೆಯಲ್ಲವೇ? ಹೌದು ನಿಜಕ್ಕೂ ಇಂತದ್ದೊಂದು ಘಟನೆ ನಡೆದಿದೆ.

ಲಂಡನ್ನಲ್ಲಿ ಕಾನೂನು ವಿದ್ಯಾಭ್ಯಾಸ ಮಾಡುತ್ತಿರುವ 21 ವರ್ಷ ಇಲಿ ಇಲಿಯಾಸ್ ಶನಿವಾರದಂದು ಎರಡು ಬರ್ಗರ್, ಚಿಕನ್ ಖಾದ್ಯವನ್ನು ಆನ್ಲೈನ್ನಲ್ಲಿ ಆರ್ಡರ್ ಮಾಡಿದ್ದಳಂತೆ. ಅದಕ್ಕೆಂದು 20 ಡಾಲರ್ (1,456 ರೂಪಾಯಿ) ಹಣವನ್ನೂ ಪಾವತಿಸಿದ್ದಳಂತೆ. ಊಟಕ್ಕಾಗಿ ಕಾಯುತ್ತಾ ಕುಳಿತ ಇಲಿಯಾಸ್ಗೆ ಶಾಕ್ ಆಗಿದೆ. ಡೆಲಿವರಿ ಬಾಯ್ನಿಂದ ‘ಸಾರಿ ಲವ್, ನಾನು ನಿನ್ನ ಊಟವನ್ನು ತಿಂದು ಮುಗಿಸಿದೆ’ ಎನ್ನುವ ಸಂದೇಶ ಬಂದಿದೆ.

ಈ ಸಂದೇಶವನ್ನು ನೋಡಿದ ಆಕೆಗೆ ಏನು ಮಾಡಬೇಕೆಂದೇ ತಿಳಿಯಲಿಲ್ಲವಂತೆ. ಮೆಸೇಜಿನ ಸ್ಕ್ರೀನ್ಶಾಟ್ ತೆಗೆದು ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ಆಕೆ, ಡೆಲಿವರಿ ಬಾಯ್ ಆರೋಗ್ಯವಾಗಿದ್ದಾನೆ ತಾನೇ? ಎಂದು ತಮಾಷೆಯಾಗಿ ಕೇಳಿದ್ದಾಳೆ. ಅದಷ್ಟೇ ಅಲ್ಲ, ಆನ್ಲೈಡ್ ಫುಡ್ ಆರ್ಡರಿಂಗ್ ಆಯಪ್ ತೆರೆದಾಗ ಆಕೆಗೆ ಮತ್ತೊಂದು ಶಾಕ್ ಎದುರಾಗಿದೆ. ನಿಮ್ಮ ಊಟವನ್ನು ಸುರಕ್ಷಿತವಾಗಿ ತಲುಪಿಸಲಾಗಿದೆ. ಡೆಲಿವರಿ ಬಾಯ್ಗೆ ಬೇಕಿದ್ದರೆ ಟಿಪ್ಸ್ ಕೊಡಿ ಎಂದು ಆಯಪ್ ಸಂದೇಶ ಕೊಟ್ಟಿದೆ. ಇದನ್ನು ಕಂಡು ಒಂದೆಡೆ ನಗು ಇನ್ನೊಂದೆಡೆ ಕೋಪ ಬಂದ ಯುವತಿ ಫುಡ್ ಆರ್ಡರಿಂಗ್ ಸಂಸ್ಥೆಯನ್ನು ಸಂಪರ್ಕಿಸಿದ್ದಾಳೆ. ಅದಾದ ಮೇಲೆ ಆಕೆಗೆ ಉಚಿತವಾಗಿ ಆಕೆ ಆರ್ಡರ್ ಮಾಡಿದ್ದ ಊಟವನ್ನು ಕಳುಹಿಸಿಕೊಡಲಾಗಿದೆ.

ಈ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಇಲಿಯಾಸ್ ಹಂಚಿಕೊಂಡಿದ್ದಾಳೆ. ‘ಪಾಪ… ಡೆಲಿವರಿ ಬಾಯ್ಗೆ ನಿಜಕ್ಕೂ ಹಸಿವಾಗಿದ್ದಕ್ಕೆ ಆತ ಹೀಗೆ ಮಾಡಿರಬಹುದು. ನನ್ನಿಂದ ಒಬ್ಬರ ಕೆಲಸ ಹೋಗುವುದು ನನಗೆ ಇಷ್ಟವಿಲ್ಲ. ಅದಕ್ಕಾಗಿ ಆತನ ಬಗ್ಗೆ ಯಾವುದೇ ದೂರು ದಾಖಲಿಸಲಿಲ್ಲ’ ಎಂದು ಬರೆದುಕೊಂಡಿದ್ದಾಳೆ. (ಏಜೆನ್ಸೀಸ್)

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss