Wednesday, June 29, 2022

Latest Posts

ಹಾರಂಗಿಯಲ್ಲಿ ಕೊಡಗಿನ ಮತ್ತೊಂದು ಆನೆ ಶಿಬಿರ: ಅರಣ್ಯ ಇಲಾಖೆಯಿಂದ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ!

ಕೆ.ಕೆ.ನಾಗರಾಜ ಶೆಟ್ಟಿ
ಕುಶಾಲನಗರ: ಜಿಲ್ಲೆಯ ಪ್ರಮುಖ ಜಲಾಶಯವಾದ ಹಾರಂಗಿಯ ಅಣೆಕಟ್ಟೆಯ ಹಿನ್ನೀರಿನ ಪ್ರದೇಶದಲ್ಲಿ ಮತ್ತೊಂದು ಆನೆ ಶಿಬಿರ ಆರಂಭಿಸುವ ಬಗ್ಗೆ ಅರಣ್ಯ ಇಲಾಖೆಯು ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ.
ಈಗಾಗಲೇ ಜಿಲ್ಲೆಯ ದುಬಾರೆಯಲ್ಲಿ ಆನೆ ಶಿಬಿರವೊಂದಿದ್ದು, ಇಲ್ಲಿ ಪ್ರಸಕ್ತ 30 ಆನೆಗಳನ್ನು ಸಲಹಲಾಗುತ್ತಿದೆ. ಆದರೆ ಒಂದು ಶಿಬಿರದಲ್ಲಿ 15ಕ್ಕಿಂತ ಹೆಚ್ಚು ಆನೆಗಳನ್ನು ಸಾಕುವಂತಿಲ್ಲ ಎಂಬ ನಿರ್ದೇಶನವನ್ನು ಇತ್ತೀಚೆಗೆ ಜಿಲ್ಲೆಗೆ ಆಗಮಿಸಿದ್ದ ಹೈಕೋರ್ಟ್‍ನ ನಿವೃತ್ತ ನ್ಯಾಯಾಧೀಶರನ್ನೊಳಗೊಂಡ ಪರಿಸರ ಕುರಿತ ತಜ್ಞರ ತಂಡ ಅರಣ್ಯ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಇದೀಗ ಮತ್ತೊಂದು ಆನೆ ಶಿಬಿರವನ್ನು ಆರಂಭಿಸಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
ಅದರಂತೆ ಮೈಸೂರು ಮತ್ತು ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಸೋಮವಾರಪೇಟೆ ತಾಲೂಕು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೆಹರು ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಈಗಾಗಲೇ ಹಾರಂಗಿ ಅಣೆಕಟ್ಟೆಯ ಹಿನ್ನೀರಿನ ಪ್ರದೇಶದಲ್ಲಿರುವ ಅರಣ್ಯ ಇಲಾಖೆಗೆ ಸೇರಿದ ಜಾಗವನ್ನು ಪರಿಶೀಲನೆ ಮಾಡಿದೆ.
ಆನೆ ಶಿಬಿರವನ್ನು ಪ್ರಾರಂಭಿಸಲು ಪ್ರಮುಖವಾಗಿ ಬೇಕಾಗುವ ನೀರಿನ ಸೌಲಭ್ಯ ಸೇರಿದಂತೆ ಇತರ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಲಾಗಿದ್ದು, ಹಾರಂಗಿ ಹಿನ್ನೀರಿನ ಪ್ರದೇಶದ ಸಮೀಪದಲ್ಲಿ ದೊಡ್ಡ ನೀರಿನ ಕೆರೆ ಇರುವುದರಿಂದ ಆನೆಗಳಿಗೆ ಅನುಕೂಲವಾಗಲಿದೆ ಎಂಬ ಉದ್ದೇಶದಿಂದ ಇಲಾಖೆಯು ಹಾರಂಗಿ ಹಿನ್ನೀರು ಪ್ರದೇಶದ ಸಮೀಪದ ಜಾಗವನ್ನು ಆನೆ ಶಿಬಿರಕ್ಕೆ ಸೂಕ್ತ ಎಂದು ಪರಿಗಣಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ.
ಹಾರಂಗಿ ಅಣೆಕಟ್ಟೆಯ ಸಂಗೀತ ಕಾರಂಜಿಯ ಸಮೀಪದಲ್ಲಿ ಅರಣ್ಯ ಇಲಾಖೆ ವತಿಯಿಂದ ಟ್ರೀ ಪಾರ್ಕ್ ನಿರ್ಮಿಸುವ ಯೋಜನೆ ಈಗಾಗಲೇ ಕಾರ್ಯರೂಪಕ್ಕೆ ಬಂದಿದ್ದು, ಇದರ ಸನಿಹದಲ್ಲೇ ಆನೆ ಶಿಬಿರ ಪ್ರಾರಂಭಿಸಲು ಸ್ಥಳ ಪರಿಶೀಲನೆ ನಡೆಸಲಾಗಿದೆ.
ವಿಷಯಕ್ಕೆ ಸಂಬಂಧಿಸಿದಂತೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೆಹರು ಅವರಿಂದ ಮಾಹಿತಿ ಬಯಸಿದಾಗ, ಆನೆ ಶಿಬಿರ ಪ್ರಾರಂಭಿಸುವ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಿದ್ಧಗೊಂಡಿದ್ದು, ಸರಕಾರದಿಂದ ಆದೇಶ ಬಂದ ನಂತರ ಈ ನಿಟ್ಟಿನಲ್ಲಿ ಪ್ರಕ್ರಿಯೆಗಳು ಚುರುಕುಗೊಳ್ಳಲಿದೆ ಎಂದು ಹೇಳಿದ್ದಾರೆ.
ಇನ್ನೂ ಹೆಚ್ಚಿನ ಆಕರ್ಷಣೆ
ಈಗಾಗಲೇ ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾಗಿರುವ ಹಾರಂಗಿ ಜಲಾಶಯ ಹೆಚ್ಚು ಅಭಿವೃದ್ಧಿ ಹೊಂದಿ ಅಣೆಕಟ್ಟೆಯ ಮುಂಭಾಗದಲ್ಲಿ ಹತ್ತು ಎಕರೆ ಪ್ರದೇಶದಲ್ಲಿ ಸುಂದರವಾದ ಪಾರ್ಕ್ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಸಂಜೆ ಸಮಯದಲ್ಲಿ ಪ್ರವಾಸಿಗರಿಗೆ ಮನರಂಜನೆ ನೀಡಲು ಅಧುನಿಕ ತಂತ್ರಜ್ಞಾನ ಬಳಸಿ ಸುಂದರ ಸಂಗೀತ ಕಾರಂಜಿ ವ್ಯವಸ್ಥೆಯೂ ರೂಪುಗೊಂಡಿದೆ.
ಈಗಾಗಲೇ ಹಾರಂಗಿ ಅಣೆಕಟ್ಟೆಯ ವೀಕ್ಷಣೆ ಸಾವಿರಾರು ಪ್ರವಾಸಿಗರು ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆಯ ವತಿಯಿಂದ ಟ್ರೀ ಪಾರ್ಕ್ ಮತ್ತು ಆನೆ ಶಿಬಿರ ಪ್ರಾರಂಭವಾದಲ್ಲಿ ಹಾರಂಗಿ ಮತ್ತಷ್ಟು ಪ್ರವಾಸಿಗರನ್ನು ತನ್ನೆಡೆಗೆ ಆಕರ್ಷಿಸುವುದರಲ್ಲಿ ಸಂಶಯವಿಲ್ಲ. ಈ ಎರಡೂ ಯೋಜನೆಗಳನ್ನು ಶೀಘ್ರವಾಗಿ ಕಾರ್ಯರೂಪಕ್ಕೆ ತರಲು ಅರಣ್ಯ ಇಲಾಖೆ ಮುಂದಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss