ಹೊಸ ದಿಗಂತ ವರದಿ, ಕುಶಾಲನಗರ:
ಸರಕಾರದ ನಿರ್ದೇಶನದಂತೆ ರಾಜ್ಯದ ಎಲ್ಲಾ ಅಣೆಕಟ್ಟೆಗಳು ಹಾಗೂ ವಿಮಾನ ನಿಲ್ದಾಣಗಳಿಗೆ ಬಿಗು ಭದ್ರತೆ ಕಲ್ಪಿಸಲಾಗಿದ್ದು, ಅದರಂತೆ ಕೊಡಗು ಜಿಲ್ಲೆಯ ಪ್ರಮುಖ ಜಲಾಶಯವಾದ ಹಾರಂಗಿ ಅಣೆಕಟ್ಟೆಗೂ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ (ಕೆಎಸ್ಐಎಸ್ಎಫ್) ತಂಡವನ್ನು ನಿಯೋಜಿಸಲಾಗಿದೆ.
ಅಣೆಕಟ್ಟೆಯ ಭದ್ರತೆಯ ದೃಷ್ಟಿಯಿಂದ ಕಳೆದ 15 ದಿನಗಳಿಂದ ಒಬ್ಬರು ಪೊಲೀಸ್ ಇನ್ಸ್ಪೆಕ್ಟರ್ ಸೇರಿದಂತೆ ವಿವಿಧ ದರ್ಜೆಯ 21 ಮಂದಿ ಕೆಎಸ್ಐಎಸ್ಎಫ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಇದರಿಂದಾಗಿ ಯಾವುದೇ ವ್ಯಕ್ತಿ ಅಣೆಕಟ್ಟೆಯ ಪ್ರದೇಶಕ್ಕೆ ಬರಲು ಸಂಬಂಧಿಸಿದವರ ಅನುಮತಿ ಪಡೆಯುವುದು ಕಡ್ಡಾಯವಾಗಿದ್ದು, ಮುಖ್ಯ ದ್ವಾರದಲ್ಲಿ ಹೋಗುವ ವ್ಯಕ್ತಿಯ ಸಂಪೂರ್ಣ ತಪಾಸಣೆ ನಡೆಸಲಾಗುತ್ತಿದೆ.
ಅಣೆಕಟ್ಟೆಯ ನಾಲ್ಕು ಭಾಗದಲ್ಲಿ ಕಣ್ಗಾವಲು ಕೇಂದ್ರಗಳನ್ನು ನಿರ್ಮಿಸಿ ಕರ್ತವ್ಯಕ್ಕೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಕೆಎಸ್ಐಎಸ್ಎಫ್ ಅನುಮತಿ ಇಲ್ಲದೆ ಅಣೆಕಟ್ಟೆಯ ಮೇಲ್ಭಾಗಕ್ಕೆ ಪ್ರವೇಶ ಇಲ್ಲದಾಗಿದೆ.
ಅಣೆಕಟ್ಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರನ್ನು ಕೂಡಾ ತಪಾಸಣೆ ಮಾಡಿ ಒಳಗೆ ಬಿಡಲಾಗುತ್ತಿದ್ದು, ಅಣೆಕಟ್ಟೆಯ ಎಡಭಾಗ ಮತ್ತು ಬಲ ಭಾಗಗಳಲ್ಲಿ ಯಾರೂ ಒಳ ಪ್ರವೇಶಿಸದಂತೆ ಕಟ್ಟುನಿಟ್ಟಾದ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅಣೆಕಟ್ಟೆಯ ಸಂಪೂರ್ಣ ಭದ್ರತೆಯು ಕೆಎಸ್ಐಎಸ್ಎಫ್ನ ಹಿಡಿತದಲ್ಲಿದೆ. ಅಣೆಕಟ್ಟೆಯ ಸುತ್ತಲೂ ಸಿ ಸಿ ಟಿವಿ ಸೇರಿದಂತೆ ಸೂಕ್ಷ್ಮ ವ್ಯವಸ್ಥೆಯನ್ನು ಮಾಡಿ ಭಾರೀ
ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ.