Sunday, August 14, 2022

Latest Posts

ಹಾರಂಗಿ ಜಲಾಶಯಕ್ಕೆ ಶಾಸಕ ಅಪ್ಪಚ್ಚು ರಂಜನ್ ರಿಂದ ಬಾಗಿನ ಅರ್ಪಣೆ: ರೈತರ ಕೃಷಿಗೆ ಹರಿದ ನೀರು

ಕುಶಾಲನಗರ: ಹಾರಂಗಿ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ವರಲಕ್ಷ್ಮೀ ಹಬ್ಬದ ದಿನವಾದ ಶುಕ್ರವಾರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಹಾರಂಗಿ ಜಲಾಶಯಕ್ಕೆ ಬಾಗಿನ ಅರ್ಪಿಸಿದರು.
ಹಾರಂಗಿ ಜಲಾಶಯದ ಕಾವೇರಿ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿ ಜಲಾಶಯಕ್ಕೆ ತೆರಳಿ ಬಾಗಿನ ಅರ್ಪಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕರು ನಾಡಿನಲ್ಲಿ ಕಾಲ ಕಾಲಕ್ಕೆ ಮಳೆ, ಬೆಳೆಯಾಗಿ ಕೃಷಿಕರಲ್ಲಿ ಸಮೃದ್ಧಿ ತರುವಂತಾಗಲಿ ಎಂದು ಆಶಿಸಿದರು.
ಕೃಷಿ ಬೆಳೆಗಾಗಿ ಬಲದಂಡೆ ಮತ್ತು ಎಡದಂಡೆ ನಾಲೆಗಳಿಗೆ ಒಟ್ಟು 1,900 ಕ್ಯುಸೆಕ್ ನೀರನ್ನು ಹರಿಯ ಬಿಡಲಾಗುತ್ತಿದೆ. ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ ರಾಜ್ಯ ಹಾಗೂ ತಮಿಳುನಾಡಿಗೆ ಕುಡಿಯಲು ಮತ್ತು ಕೃಷಿಗೆ ನೀರು ಒದಗಿಸುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಕಳೆದ 24 ವರ್ಷಗಳಿಂದ ಬಾಗಿನ ಅರ್ಪಿಸಿಕೊಂಡು ಬರಲಾಗಿದೆ. ಗುರುವಾರ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಿದಂತೆ ಹಾಗೂ ನೀರಾವರಿ ಸಚಿವರ ಗಮನಕ್ಕೆ ತಂದು ಶುಕ್ರವಾರ ಬಾಗಿನ ಅರ್ಪಿಸಲಾಗುತ್ತಿದೆ ಎಂದು ಶಾಸಕರು ತಿಳಿಸಿದರು.
ಹಾರಂಗಿ ನದಿ ಪಾತ್ರದಲ್ಲಿ ಹೂಳು ತೆಗೆಯಲು ಈಗಾಗಲೇ ಆರ್ಥಿಕ ಇಲಾಖೆಗೆ 135 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಕೋವಿಡ್ ಹಿನ್ನೆಲೆ ಆರ್ಥಿಕ ಪರಿಸ್ಥಿತಿ ಕುಂಠಿತಗೊಂಡಿರುವುದರಿಂದ ಯಾವಾಗ ಹಣ ಬಿಡುಗಡೆಯಾಗುತ್ತದೆ ಎಂದು ಹೇಳಲು ಬರುವುದಿಲ್ಲ ಎಂದು ಶಾಸಕರು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಕುಶಾಲನಗರದ ಕಾವೇರಿ ನದಿ ಬಳಿ ಹೂಳು ತೆಗೆದಿರುವುದರಿಂದ ಈ ಬಾರಿ ಪ್ರವಾಹ ಪರಿಸ್ಥಿತಿ ಉಂಟಾಗುವುದಿಲ್ಲ ಎಂದು ಅಪ್ಪಚ್ಚು ರಂಜನ್ ಅವರು ವಿಶ್ವಾಸ ವ್ಯಕ್ತಪಡಿಸಿದರು. ಬಳಿಕ ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ಬಲದಂಡೆ ನಾಲೆಗೆ 1500 ಕ್ಯುಸೆಕ್ ಮತ್ತು ಎಡದಂಡೆ ನಾಲೆಗೆ 400 ಕ್ಯುಸೆಕ್ ನೀರು ಹರಿಸುವುದಕ್ಕೆ ಶಾಸಕರು ಚಾಲನೆ ನೀಡಿದರು.
ಜಿ.ಪಂ.ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಆರ್.ಮಂಜುಳ, ಸದಸ್ಯ ಶ್ರೀನಿವಾಸ್, ತಾ.ಪಂ. ಸದಸ್ಯರಾದ ಗಣೇಶ್, ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಚರಣ್, ತಾಲೂಕು ಬಿಜೆಪಿ ಅಧ್ಯಕ್ಷ ಮನುರೈ,ಮಾಜಿ ಅಧ್ಯಕ್ಷ ಕೊಮಾರಪ್ಪ, ಪ್ರಮುಖರಾದ ಬಿ.ಬಿ.ಭಾರತೀಶ್, ತಿಮ್ಮಪ್ಪ, ಮೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಹಾರಂಗಿ ಜಲಾಶಯ ಕಾರ್ಯಪಾಲಕ ಎಂಜಿನಿಯರ್ ರಾಜೇಗೌಡ, ಅಧೀಕ್ಷಕ ಚೆನ್ನಕೇಶವ, ಎಇಇ ಮಹೇಂದ್ರ ಕುಮಾರ್, ಎಂಜಿನಿಯರ್‍ಗಳಾದ ನಾಗರಾಜ್, ಕಿರಣ್, ಇತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss