Friday, August 19, 2022

Latest Posts

ಹಾರಂಗಿ ಜಲಾಶಯದಿಂದ 12,500 ಕ್ಯುಸೆಕ್ ನೀರು ಹೊರಕ್ಕೆ: ನಯನ ಮನೋಹರ ದೃಶ್ಯ ವೀಕ್ಷಣೆಗೆ ಪ್ರವಾಸಿಗರ ದಂಡು!

ಕುಶಾಲನಗರ: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಜಲಾಶಯದಿಂದ ಸುಮಾರು 12,500 ಕ್ಯುಸೆಕ್‍ನಷ್ಟು ನೀರನ್ನು ನಾಲ್ಕು ಕ್ರೆಸ್ಟ್ ಗೇಟ್‍ಗಳ ಮೂಲಕ ನದಿಗೆ ಬಿಡಲಾಗುತ್ತಿದ್ದು, ನಯನಮನೋಹರವಾದ ಈ ದೃಶ್ಯವನ್ನು ವೀಕ್ಷಿಸಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.
ಆದರೆ ಈ ದೃಶ್ಯವನ್ನು ಜಲಾಶಯದ ಸಮೀಪದಿಂದ ವೀಕ್ಷಿಸಲು ಅವಕಾಶವಿಲ್ಲದ ಹಿನ್ನೆಲೆಯಲ್ಲಿ ರಸ್ತೆಯಲ್ಲೇ ನಿಂತು ವೀಕ್ಷಿಸಿ ಮೊಬೈಲ್‍ಗಳ ಮೂಲಕ ದೃಶ್ಯವನ್ನು ಸೆರಡಹಿಡಿದು ಪ್ರವಾಸಿ ತಾಣಗಳಾದ ಕುಶಾಲನಗರದ ನಿಸರ್ಗಧಾಮ, ದುಬಾರೆಗಳಿಗೆ ಭೇಟಿ ನೀಡುತ್ತಿದ್ದಾರೆ.
ಈ ಹಿಂದೆ ಹಾರಂಗಿಗೆ ಭೇಟಿ ನೀಡುವ ಪ್ರವಾಸಿಗರು ಜಲಾಶಯದ ಮುಂಭಾಗದಲ್ಲಿರುವ ಉದ್ಯಾನವನ ಮೂಲಕ ಸಾಗಿ ಅಣೆಕಟ್ಟೆಯನ್ನು ಹತ್ತಿರದಿಂದ ವೀಕ್ಷಿಸಬಹುದಾಗಿತ್ತು. ಆದರೆ ಕೊರೋನಾ ಲಾಕ್‍ಡೌನ್ ಸಂದರ್ಭದಲ್ಲಿ ಜಲಾಶಯದ ವೀಕ್ಷಣೆಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದ್ದು, ಅದು ಈಗಲೂ ಮುಂದುವರಿದಿರುವುದರಿಂದ ರಸ್ತೆಯಿಂದಲೇ ಜಲಾಶಯದಿಂದ ನೀರು ಧುಮುಕುವ ನಯನಮನೋಹರ ದೃಶ್ಯವನ್ನು ಕಣ್ತುಂಬಿಕೊಳ್ಳುವಂತಾಗಿದೆ.
ಪ್ರಸಕ್ತ ವರ್ಷ ಎರಡು ಬಾರಿ ಅಣೆಕಟ್ಟೆ ಪೂರ್ಣ ಪ್ರಮಾಣದಲ್ಲಿ ಭರ್ತಿಯಾದ ಹಿನ್ನೆಲೆಯಲ್ಲಿ ಸಾವಿರಾರು ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಈ ನೀರು ಹರಿಯುವ ದೃಶ್ಯ ಬಹಳ ಸುಂದರವಾಗಿದ್ದು, ಕೊರೋನಾ ಲಾಕ್‍ಡೌನ್‍ನಿಂದ ಬೇಸತ್ತಿದ್ದ ಪ್ರವಾಸಿಗರು ಇದೀಗ ಈ ದೃಶ್ಯವನ್ನು ವೀಕ್ಷಿಸಲು ಸಹಸ್ರಾರು ಸಂಖ್ಯೆಯಲ್ಲಿ ಹಾರಂಗಿಗೆ ಆಗಮಿಸುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ನೀರಾವರಿ ಇಲಾಖೆಯ ಉನ್ನತ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿ, ನಂತರ ಸರಕಾರದ ನಿಯಮಗಳಿಗೆ ಅನುಸಾರವಾಗಿ ಪ್ರವಾಸಿಗರಿಗೆ ಹಾರಂಗಿಯ ಉದ್ಯಾನವನ ವೀಕ್ಷಿಸಲು ಅವಕಾಶವನ್ನು ಒದಗಿಸಲಾಗುತ್ತದೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!