ಹಾರಂಗಿ ಜಲಾಶಯದ ಹಿನ್ನೀರಿನ ಬಳಿಯ ಮೀಸಲು ಜಾಗದಲ್ಲಿ ಆನೆ ಕ್ಯಾಂಪ್: ಪ್ರಸ್ತಾವನೆ ರೆಡಿ

0
19

ಮಡಿಕೇರಿ: ಕೊಡಗು ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿಯ ಹಿನ್ನೀರಿನ ಸಮೀಪವಿರುವ ಮೀಸಲು ಜಾಗದಲ್ಲಿ ಅರಣ್ಯ ಇಲಾಖೆಯ ವತಿಯಿಂದ ಆನೆ ಕ್ಯಾಂಪ್ ಮಾಡುವ ಪ್ರಸ್ತಾವನೆಯನ್ನು ಈಗಾಗಲೇ ಜಿಲ್ಲಾ ಅರಣ್ಯ ಇಲಾಖೆ ಸಿದ್ಧಪಡಿಸಿದೆ.
ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶರು ಸೇರಿದಂತೆ ಪರಿಸರದ ಬಗ್ಗೆ ನುರಿತ ತಜ್ಞರ ತಂಡ ಕಳೆದ ತಿಂಗಳು ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಜಿಲ್ಲೆಯ ಪ್ರಮುಖ ದುಬಾರೆ ಆನೆ ಕ್ಯಾಂಪ್ ನ್ನು ವೀಕ್ಷಣೆ ಮಾಡಿದ್ದರು. ಆ ಸಂದರ್ಭದಲ್ಲಿ ದುಬಾರೆ ಆನೆ ಶಿಬಿರದಲ್ಲಿ 30 ಆನೆಗಳು ಇರುವ ಮಾಹಿತಿ ಪಡೆದ ತಂಡ, ಒಂದು ಆನೆ ಶಿಬಿರದಲ್ಲಿ 15 ಕ್ಕೂ ಹೆಚ್ಚು ಆನೆಗಳು ಇರಬಾರದು ಎಂದು ಜಿಲ್ಲಾ ಅರಣ್ಯ ಅಧಿಕಾರಿಗಳಿಗೆ ತಿಳಿಸಿದ್ದರು.
ಅದರಂತೆ ಮೈಸೂರು ಮತ್ತು ಕೊಡಗು ಮುಖ್ಯ ಅರಣ್ಯ ಸಂರಕ್ಷಣಾ ಹೀರಲಾಲ್, ಜಿಲ್ಲಾ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಪ್ರಭಾಕರನ್ ಮತ್ತು ಸೋಮವಾರಪೇಟೆ ತಾಲೂಕು ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ನೆಹರು ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಹಾರಂಗಿಯ ಅಣೆಕಟ್ಟೆಯ ಹಿನ್ನೀರಿನ ಪ್ರದೇಶದಲ್ಲಿರುವ ಅರಣ್ಯ ಇಲಾಖೆಗೆ ಸೇರಿದ ಜಾಗವನ್ನು ಪರಿಶೀಲನೆ ಮಾಡಿದ್ದರು.
ಇಲ್ಲಿ ಆನೆ ಶಿಬಿರವನ್ನು ಪ್ರಾರಂಭ ಮಾಡಲು ಬೇಕಾಗುವ ಎಲ್ಲಾ ಸೌಕರ್ಯಗಳು ಇರುವುದನ್ನು ಮತ್ತು ಪ್ರಮುಖವಾಗಿ ನೀರಿನ ಸೌಲಭ್ಯದ ವ್ಯವಸ್ಥೆಗೆ ಹಿನ್ನೀರಿನ ಪ್ರದೇಶದ ಸಮೀಪದಲ್ಲಿ ದೊಡ್ಡ ನೀರಿನ ಕೆರೆ ಇದ್ದು, ಇದರಿಂದ ಆನೆಗಳಿಗೆ ನೀರಿನ ಸೌಲಭ್ಯಕ್ಕೆ ಅನುಕೂಲವಾಗಲಿದೆ ಎಂಬ ಉದ್ದೇಶದಿಂದ ಅರಣ್ಯ ಇಲಾಖೆಯ ವತಿಯಿಂದ ಹಾರಂಗಿಯ ಹಿನ್ನೀರಿನ ಪ್ರದೇಶ ಆನೆ ಶಿಬಿರ ಪ್ರಾರಂಭಿಸಲು ಸೂಕ್ತವಾದ ಸ್ಥಳವಾಗಿದೆ ಎಂದು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿದೆ.

LEAVE A REPLY

Please enter your comment!
Please enter your name here