ಕುಶಾಲನಗರ: ಕೂಡಿಗೆ ಹಾಗೂ ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ನಡುವೆ ಹಾರಂಗಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯ ಮೇಲ್ಭಾಗದಲ್ಲಿ ಒಂದು ಅಡಿಗೂ ಹೆಚ್ಚಿನ ಮಟ್ಟದಲ್ಲಿ ಮಳೆ ನೀರು ನಿಂತಿದ್ದು, ಸಾರ್ವಜನಿಕರಿಗೆ ತಿರುಗಾಡಲು ಮತ್ತು ವಾಹನಗಳ ಸಂಚಾರಕ್ಕೂ ಅಡ್ಡಿಯಾಗುತ್ತಿದೆ.
ಈ ಸೇತುವೆಯನ್ನು ಎರಡೂ ಗ್ರಾಮ ಪಂಚಾಯತಿಗಳು ನಿರ್ವಹಣೆ ಮಾಡದೆ ನಿರ್ಲಕ್ಷಿಸಿರುವುದರಿಂದ ಅನೇಕ ಅಪಘಾತಗಳೂ ಸಂಭವಿಸಿವೆ. ಸೇತುವೆಯ ಮೇಲ್ಭಾಗದಲ್ಲಿ ನೀರು ನಿಲ್ಲುವುದರಿಂದ ವಾಹನಗಳು ಚಲಿಸುವ ಸಂದರ್ಭ ಸಾರ್ವಜನಿಕರು ಸೇತುವೆಯಲ್ಲಿದ್ದರೆ ಕೆಸರಿನ ಓಕುಳಿಯಾಗಿ ಮನೆಗೆ ಮರಳುವಂತಾಗಿದೆ.
ಸಂಬಂಧಿಸಿದ ಗ್ರಾಮ ಪಂಚಾಯತಿಯವರು ತಕ್ಷಣ ಇತ್ತ ಗಮನಹರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.