ಕಾಸರಗೋಡು: ಸೆಪ್ಟೆಂಬರ್ 14 ರಂದು ಹಾವು ಕಡಿದು ಸಾವಿಗೀಡಾದ ಎಣ್ಮಕಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಜಂಪಾಡಿ ಕಾಲನಿಯ ಕಾಂತಪ್ಪ – ಕುಸುಮಾ ದಂಪತಿಯ ಎರಡು ವರ್ಷದ ಬಾಲಕ ದೀಪಕ್ ಕುಟುಂಬಕ್ಕೆ ಹಾಗೂ ಕಾಲನಿಯಲ್ಲಿ ವಾಸಯೋಗ್ಯವಲ್ಲದ ಎಲ್ಲ ಗುಡಿಸಲುಗಳನ್ನು ಪಿಎಂಜಿಎಸ್ ವೈ ಯೋಜನೆಯಲ್ಲಿ ಒಳಪಡಿಸಿ ಹೊಸ ಮನೆಗಳನ್ನು ನಿರ್ಮಿಸಿ ನೀಡಬೇಕೆಂದು ಕೇರಳ ಮಕ್ಕಳ ಹಕ್ಕು ಆಯೋಗವು ಆದೇಶ ನೀಡಿದೆ. ಅಲ್ಲದೆ ಬಾಲಕನ ಕುಟುಂಬಕ್ಕೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಸೂಚಿಸಲಾಗಿದೆ.
ಈ ಮಧ್ಯೆ ವರ್ಷಗಳ ಹಿಂದೆ ಮಂಜೇಶ್ವರ ಶಾಸಕರ ನಿಧಿಯಿಂದ ಸ್ಥಾಪಿಸಲಾದ ಮಿನಿ ಹೈಮಾಸ್ಟ್ ಲೈಟ್ ನ್ನು ಕಾರ್ಯಗತಗೊಳಿಸಬೇಕೆಂದು ಪಂಚಾಯತ್ ಕಾರ್ಯದರ್ಶಿಗೆ ನಿರ್ದೇಶನ ನೀಡಲಾಗಿದೆ. ಕಾಲನಿ ಪರಿಸರದಲ್ಲಿರುವ ಕುಟುಂಬ ಕ್ಷೇಮ ಕೇಂದ್ರವನ್ನು ಕಾರ್ಯಾರಂಭಗೊಳಿಸಲು ಹಾಗೂ ಕಾಸರಗೋಡು ಜಿಲ್ಲೆಯ ಯಾವೆಲ್ಲ ಆಸ್ಪತ್ರೆಗಳಲ್ಲಿ ವಿಷಜಂತು ಪ್ರತಿರೋಧ ಚಿಕಿತ್ಸೆ ಇರುವುದರ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ವೈದ್ಯಾಧಿಕಾರಿಗಳಿಗೆ ಆಯೋಗವು ಸೂಚಿಸಿದೆ. ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ಕಾರ್ಯಾಚರಿಸುವ ಎನ್ ಜಿಒ ಸಂಘಟನೆ ಚೈಲ್ಡ್ ಪ್ರೊಟೆಕ್ಟ್ ಟೀಮ್ ನ ಪ್ರಮುಖರು ಭೇಟಿ ನೀಡಿ ಕಜಂಪಾಡಿ ಕಾಲನಿಯ ದುರವಸ್ಥೆಯ ಬಗ್ಗೆ ಮುಖ್ಯಮಂತ್ರಿ ಹಾಗೂ ಮಕ್ಕಳ ಹಕ್ಕು ಆಯೋಗಕ್ಕೆ ದೂರು ನೀಡಿದ್ದರು. ಈ ಟೀಮ್ ನ ನಿರಂತರ ಪ್ರಯತ್ನದ ಫಲವಾಗಿ ಕುಟುಂಬಕ್ಕೆ ಬಿಪಿಎಲ್ ಕಾರ್ಡ್ ಹಾಗೂ ಅರಣ್ಯ ಇಲಾಖೆಯಿಂದ ಒಂದು ಲಕ್ಷ ರೂಪಾಯಿ ಪರಿಹಾರ ಧನ ಲಭಿಸುವಂತಾಗಿದೆ. ಅಲ್ಲದೆ ಮೃತಪಟ್ಟ ಬಾಲಕನ ಮನೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗಿದೆ.