Wednesday, July 6, 2022

Latest Posts

ಹಾವೇರಿ| ಕೋವಿಡ್‌ನಿಂದ ಗುಣಮುಖರಾದ ಕಾನ್‌ಸ್ಟೇಬಲ್‌ಗೆ ಹೂ ಮಳೆಗರೆದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು!

ಹಾವೇರಿ: ಕೋವಿಡ್‌ನಿಂದ ಗುಣಮುಖರಾಗಿ ಜಿಲ್ಲಾ ಆಸ್ಪತ್ರೆಯಿಂದ ಹೊರಬಂದ ಬ್ಯಾಡಗಿ ಪೊಲೀಸ್ ಠಾಣೆ ಎಸ್.ಬಿ. ಕಾನ್‌ಸ್ಟೇಬಲ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಉನ್ನತ ಅಧಿಕಾರಿಗಳು ಹೂಗುಚ್ಛ ನೀಡಿ ಸಂಭ್ರಮದಿಂದ ಬೀಳ್ಕೊಟ್ಟರು.
ಕದರಮಂಡಲಗಿಯ ನಿವಾಸಿಯಾದ ೪೧ ವರ್ಷದ ಎಸ್.ಬಿ. ಕಾನ್‌ಸ್ಟೇಬಲ್‌ಗೆ ಇದೇ ಜೂನ್ ೧೫ ರಂದು ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಕಾನ್‌ಸ್ಟೇಬಲ್ ಕಾರ್ಯನಿರ್ವಹಿಸುತ್ತಿದ್ದ ಬ್ಯಾಡಗಿ ಪೊಲೀಸ್ ಠಾಣೆ ಹಾಗೂ ಬ್ಯಾಡಗಿ ತಹಶೀಲ್ದಾರ ಕಚೇರಿಯನ್ನು ಸೀಲ್‌ಡೌನ್ ಮಾಡಿ ಸ್ಯಾನಿಟೈಸ್ ಮಾಡಲಾಗಿತ್ತು.
ಸದರಿ ವ್ಯಕ್ತಿಯು ಸೋಂಕಿನಿಂದ ಹೊರಬಂದಿದ್ದು, ಈತನ ಸಂಪರ್ಕಿತ ಎಲ್ಲ ವ್ಯಕ್ತಿಗಳ ಲ್ಯಾಬ್ ವರದಿ ನೆಗಟಿವ್ ಬಂದಿದೆ. ಗುಣಮುಖನಾದ ಕಾನ್‌ಸ್ಟೇಬಲ್ ಆಸ್ಪತ್ರೆಯಿಂದ ಹೊರಬರುತ್ತಿದ್ದಂತೆ ಪೊಲೀಸ್ ಹಿರಿಯ ಹಾಗೂ ಕಿರಿಯ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳು ಕಾನ್‌ಸ್ಟೇಬಲ್ ಮೇಲೆ ಹೂಮಳೆಗರೆದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳು ಕಾನ್‌ಸ್ಟೇಬಲ್‌ಗೆ ಹೂಗುಚ್ಛ ನೀಡಿ ಅಭಿನಂದಿಸಿದರು. ಪೊಲೀಸ್ ಚೀಪ್‌ನಲ್ಲಿ ಗೌರವದೊಂದಿಗೆ ಮನೆಗೆ ಕಳುಹಿಸಿಕೊಟ್ಟರು. ಈ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳಿಂದ ಗೌರಕ್ಕೆ ಪಾತ್ರನಾದ ಕಾನ್‌ಸ್ಟೇಬಲ್ ಭಾವುಕರಾಗಿದ್ದು ಕಂಡುಬಂದಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ ಅವರು ಮಾತನಾಡಿ, ಕಾನ್‌ಸ್ಟೇಬಲ್‌ಗೆ ಪಾಸಿಟಿವ್ ಬಂದಕಾರಣ ಆಸ್ಪತ್ರೆಗೆ ದಾಖಲಾಗಿತ್ತು. ಕೋವಿಡ್ ಆಸ್ಪತ್ರೆಯ ವೈದ್ಯಾಧಿಕಾರಿಗಳ ವಿಶೇಷ ಶ್ರಮದಿಂದ ತ್ವರಿತವಾಗಿ ಗುಣಮುಖರಾಗಿ ಹೊರಬಂದಿರುವುದು ಸಂತಸ ತಂದಿದೆ. ಇವರ ಪ್ರಾಥಮಿಕ ಸಂಪರ್ಕದ ಎಲ್ಲರ ಲ್ಯಾಬ್ ವರದಿಯೂ ಸಹ ನೆಗಟಿವ್ ಬಂದಿದೆ. ಇಂದಿನಿಂದ ಬ್ಯಾಡಗಿ ಪೊಲೀಸ್ ಠಾಣೆ ಸೀಲ್‌ಡೌನ್ ತೆರವುಗೊಳಿಸಿ ಎಂದಿನಂತೆ ಕಚೇರಿ ಕೆಲಸವನ್ನು ಪುನರ್ ಆರಂಭಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಿ.ವೈಎಸ್.ಪಿ. ವಿಜಯಕುಮಾರ್ ಸಂತೋಷ್, ಸಿ.ಪಿ.ಐ.ಸಂತೋಷ್ ಪವಾರ, ಇನ್ಸಪೆಕ್ಟರ್ ಮಂಜಣ್ಣ ಟಿ., ಬ್ಯಾಡಗಿ ಪಿ.ಎಸ್.ಐ. ಮಹಾಂತೇಶ ಎಂ.ಎಂ., ಪಿ.ಎಸ್.ಐ.ಗಳಾದ ಜಿ.ಬಿ.ನಾವಿ, ಪಿ.ಜಿ.ನಂದಿ, ಎಂ.ಡಿ.ಬೆಟಗೇರಿ, ಪ್ರಭಾರ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಆರ್.ಹಾವನೂರ, ಡಾ.ಸುರೇಶ ಪೂಜಾರ ಹಾಗೂ ಡಾ. ನಿರಂಜನ ಬಣಕಾರ, ಡಾ.ವಿಶ್ವನಾಥ ಸಾಲಿಮಠ ಇತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss