Monday, August 15, 2022

Latest Posts

ಹಾವೇರಿ ಜಿಲ್ಲೆಗೆ ರೂ.178.88 ಕೋಟಿ ಬೆಳೆ ವಿಮೆ ಮಂಜೂರು: ಸಚಿವ ಬಸವರಾಜ ಬೊಮ್ಮಾಯಿ

ಹಾವೇರಿ: ಜಿಲ್ಲೆಯ ೧೭೫ ಗ್ರಾಮ ಪಂಚಾಯತಿಗಳ ೭೫,೭೦೪ ರೈತರಿಗೆ ೧೭೮.೮೮ ಕೋಟಿ ರೂ. ಬೆಳೆ ವಿಮೆ ಮಂಜೂರಾಗಿದೆ. ಇದು ರಾಜ್ಯದಲ್ಲಿ ಅತೀ ಹೆಚ್ಚು ಬೆಳೆ ವಿಮೆ ಮೊತ್ತ ಜಿಲ್ಲೆಗೆ ಬಿಡುಗಡೆಯಾಗಿರುವುದು ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರವಾಹದಿಂದ ಬೆಳೆ ನಷ್ಟ ಸಂಕಷ್ಟದಲ್ಲಿರುವ ರೈತರಿಗೆ ಸಮಯೋಚಿತ ಸಹಾಯ ಸಿಕ್ಕಂತಾಗಿದೆ.
ಜಿಲ್ಲೆಯ ಬ್ಯಾಡಗಿ, ಹಾನಗಲ್, ಹಾವೇರಿ, ಹಿರೇಕೆರೂರು, ರಾಣೇಬೆನ್ನೂರು ಮತ್ತು ಶಿಗ್ಗಾಂವ ತಾಲೂಕುಗಳಲ್ಲಿ ಪ್ರಮುಖವಾಗಿ ಭತ್ತ, ಮೆಕ್ಕೆಜೋಳ, ಹತ್ತಿ ಮತ್ತು ಶೇಂಗಾ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಜಿಲ್ಲೆಯ ೨೨೩ ಗ್ರಾಮ ಪಂಚಾಯತಿಗಳಲ್ಲಿ ಬೆಳೆ ವಿಮೆಗೆ ೧,೧೩,೮೫೭ ರೈತರು ನೊಂದಾಯಿಸಿದ್ದು, ಈ ಪೈಕಿ ೪೮ ಗ್ರಾಮ ಪಂಚಾಯತಿಗಳನ್ನು ಹೊರತುಪಡಿಸಿ ೧೭೫ ಗ್ರಾಮ ಪಂಚಾಯತಿಗಳ ೭೫,೭೦೪ ರೈತರಿಗೆ ೧೭೮.೮೮ ಕೋಟಿ ರೂ. ಬೆಳೆ ವಿಮೆ ಮಂಜೂರಾಗಿದೆ. ಈಗಾಗಲೇ ಮಧ್ಯಂತರ ಬೆಳೆವಿಮೆ ಪರಿಹಾರವಾಗಿ ೪೮.೭೪ ಕೋಟಿ ರೂ. ನೀಡಲಾಗಿದೆ. ಉಳಿದ ೧೩೦.೧೪ ಕೋಟಿ ರೂ. ಶೀಘ್ರದಲ್ಲೇ ಬಿಡುಗಡೆ ಮಾಡಲು ಕೃಷಿ ಆಯುಕ್ತರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಬಾಕಿ ಇರುವ ೪೫ ಗ್ರಾಮ ಪಂಚಾಯತಿಗಳ ೩೮,೧೫೩ ರೈತರಿಗೆ ವಿಮೆ ಬಿಡುಗಡೆ ರೈತರಿಂದ ಒತ್ತಡವಿದ್ದು, ಈ ಹಿಂದೆ ಮಾಡಿರುವ ಬೆಳೆ ಕಟಾವು ಪ್ರಯೋಗಗಳ ಫಲಿತಾಂಶದ ಬಗ್ಗೆ ತೀವ್ರ ಅಸಮಾಧಾನ ಇರುವ ಹಿನ್ನೆಲೆಯಲ್ಲಿ ಸದರಿ ಗ್ರಾಮ ಪಂಚಾಯತಿಗಳ ಬೆಳೆಗಳ ಇಳುವರಿಯನ್ನು ಮತ್ತೊಮ್ಮೆ ಪರಿಶೀಲಿಸಲು ಸೂಚನೆ ನೀಡಲಾಗಿದೆ.
ಪ್ರವಾಹದಿಂದ ಬೆಳೆ ನಷ್ಟ ಆಗಿರುವ ಬಗ್ಗೆ ಸಂಪೂರ್ಣವಾಗಿ ಸರ್ವೇಮಾಡಿ ವಿವಿಧ ಬೆಳೆಗಳ ನಷ್ಟದ ವಿವರಗಳನ್ನು ರಾಜ್ಯ ಸರ್ಕಾರಕ್ಕೆ ಕೂಡಲೇ ಕಳುಹಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss