Friday, August 12, 2022

Latest Posts

ಹಾವೇರಿ ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಎಲ್ಲ ರೀತಿಯಲ್ಲೂ ಸಮರ್ಥ: ಗೃಹ ಸಚಿವ

ಹಾವೇರಿ: ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾದರೂ ಎಲ್ಲ ಸವಾಲುಗಳನ್ನು ಎದುರಿಸಲು ಎಲ್ಲ ರೀತಿಯಿಂದಲ್ಲೂ ಸಮರ್ಥವಾಗಿದ್ದೇವೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಸೋಮವಾರ ಜಿಲ್ಲಾ ಆಸ್ಪತ್ರೆಯಲ್ಲಿ ನೂತನ ವೈರಾಣು ಸಂಶೋಧನೆ ಮತ್ತು ರೋಗ ನಿರ್ಣಯ ಪ್ರಯೋಗಾಲಯ (ವಿ.ಆರ್.ಡಿ.ಎಲ್.) ಹಾಗೂ ಐ.ಸಿ.ಯು ವಾರ್ಡ್‌ನ್ನು ಉದ್ಘಾಟಿಸಿ ಸಾರ್ವಜನಿಕ ಸೇವೆಗೆ ಸಮರ್ಪಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು.
ಕೋವಿಡ್ ಸೋಂಕು ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ವೈದ್ಯಕೀಯ ವ್ಯವಸ್ಥೆಗಳು ಮಾಡಿಕೊಳ್ಳಲಾಗಿದೆ, ಇಂದು ಆರಂಭಗೊಳಿಸಲಾದ ವಿ.ಆರ್.ಡಿ. ಲ್ಯಾಬ್ ಕೋವಿಡ್ ಸೋಂಕಿಗೆ ಮಾತ್ರವಲ್ಲದೆ ಇತರೆ ಸೋಂಕುಗಳ ತಪಾಸಣೆಗೆ ಅನುಕೂಲವಾಗಿದೆ, ವೈರಲ್ ಇನ್‌ಫೆಕ್ಷನ್, ಡೆಂಗ್ಯೂ, ವೆಲಿಸಾ ಹಾಗೂ ಎಚ್.ವಿ.ಸೋಂಕು ತಪಾಸಣೆಗೆ ಅನುಕೂಲವಾಗಲಿದೆ ಎಂದರು.
ವಿ.ಆರ್.ಡಿ. ಲ್ಯಾಬ್‌ನಲ್ಲಿ ಒಂದು ಸಿಫ್ಟ್‌ನಲ್ಲಿ ೧೦೦ ರಂತೆ ದಿನವೊಂದಕ್ಕೆ ೩೦೦ ಮಾದರಿಗಳನ್ನು ಪರೀಕ್ಷೆ ಮಾಡಬಹುದು. ಆರಂಭದಲ್ಲಿ ೫೦ ರಿಂದ ೬೦ ಮಾದರಿಗಳನ್ನು ಪರೀಕ್ಷೆ ನಡೆಸಲಾಗುವುದು. ಮೈಕ್ರೋಬಯೋಲೆಜಿಸ್ಟ್, ಪ್ರಯೋಗಾಲಯ ತಂತ್ರಜ್ಞರ ಅನುಭವ ಮತ್ತು ಸಾಮರ್ಥ್ಯಕ್ಕನುಸಾರವಾಗಿ ಪರೀಕ್ಷೆಗಳ ಸಂಖ್ಯೆ ಹೆಚ್ಚಳವಾಗಲಿದೆ. ಮೊದಲ ದಿನವಾದ ಇಂದು ಪ್ರಾಯೋಗಿಕವಾಗಿ ಐದು ಕೇಸ್‌ಗಳ ಪರೀಕ್ಷೆ ನಡೆಸಿ ನಿಮಾನ್ಸ್‌ಗೆ ಕಳುಹಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ೧೬ ವೆಂಟಿಲೇಟರ್‌ನ ಐ.ಸಿ.ಯು. ವ್ಯವಸ್ಥೆ ಮಾಡಲಾಗಿದೆ. ಹೊಸದಾಗಿ ಐದು ವೆಂಟಿಲೇಟರ್ ಬೇಡಿಕೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ವಿಶೇಷವಾಗಿ ಕೋವಿಡ್ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ೫೦ ಬೆಡ್ ಹಾಗೂ ಸವಣೂರಲ್ಲಿ ೩೦ ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ೧೦ ರಿಂದ ೧೫ ಬೆಡ್‌ಗಳ ಸೇರ್ಪಡೆಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸೌಲಭ್ಯಗಳ ವ್ಯವಸ್ಥೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲೆಯ ಕೋವಿಡ್ ಲ್ಯಾಬ್ ಸ್ಥಾಪನೆಗೆಗ ಎಸ್.ಡಿ.ಆರ್.ಎಫ್.ನಲ್ಲಿ ವಿ.ಆರ್.ಡಿ.ಉಪಕರಣಕ್ಕೆ ಅನುಮತಿ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕಂದಾಯ ಸಚಿವ ಆರ್.ಅಶೋಕ, ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ.ಸುಧಾಕರ ಅವರಿಗೆ ಧನ್ಯವಾದ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಸದ ಶಿವಕುಮಾರ ಉದಾಸಿ, ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ, ಅಪರ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ,. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಂದ್ರ ದೊಡ್ಡಮನಿ, ಪ್ರಭರ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಎಸ್. ಹಾವನೂರ, ಡಾ.ಸುರೇಶ ಪೂಜಾರ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss