Monday, August 15, 2022

Latest Posts

ಹಾವೇರಿ| ದ್ವಿತೀಯ ಪಿ.ಯು.ಸಿ ಇಂಗ್ಲೀಷ್ ಪರೀಕ್ಷೆ: ಸಾಮಾಜಿಕ ಅಂತರ, ಮಾಸ್ಕ್ , ಸ್ಕ್ರೀನಿಂಗ್ ಕಡ್ಡಾಯ

ಹಾವೇರಿ: ಇದೇ ತಿಂಗಳು ೧೮ ರಂದು ನಡೆಯುವ ದ್ವಿತೀಯ ಪಿ.ಯು.ಸಿ ಇಂಗ್ಲೀಷ್ ವಿಷಯದ ಪರೀಕ್ಷೆಯಿಂದ ಯಾವುದೇ ವಿದ್ಯಾರ್ಥಿ ಮಾಹಿತಿಯ ಕೊರತೆ ಸಾರಿಗೆ ವ್ಯವಸ್ಥೆಯ ಅನಾನುಕೂಲತೆಯಿಂದ ಪರೀಕ್ಷೆ ಬರೆಯಲಾಗದೇ ಮನೆಯಲ್ಲಿ ಉಳಿಯಬಾರದು ಎಂದು ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಕರಿಗೆ ಅಪರ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ದ್ವಿತೀಯ ಪಿ.ಯು.ಸಿ ಇಂಗ್ಲಿಷ್ ವಿಷಯದ ಪರೀಕ್ಷಾ ಪೂರ್ವ ಸಿದ್ದತೆ ಸಭೆಯ ಅಧ್ಯಕ್ಷತೆವಹಿಸಿ ಕೇಂದ್ರವಾರು ಕೈಗೊಂಡಿರುವ ಸಿದ್ಧತೆಗಳ ಪರಿಶೀಲನೆ ನಡೆಸಿದ ಅವರು, ತಮ್ಮ ತಮ್ಮ ಕಾಲೇಜುಗಳ ಪ್ರತಿಯೊಬ್ಬ ವಿದ್ಯಾರ್ಥಿಯ ಸಂಪರ್ಕಿಸಿ ಪರೀಕ್ಷೆ ಬರೆಯಲು ವ್ಯವಸ್ಥೆ ಕೈಗೊಳ್ಳಬೇಕು. ಸಾಮಾಜಿಕ ಅಂತರದ ಜೊತೆಗೆ ಪ್ರತಿ ವಿದ್ಯಾರ್ಥಿಗೂ ಮಾಸ್ಕ್ ಹಾಗೂ ಸ್ಕ್ರೀನಿಂಗ್ ಕಡ್ಡಾಯಗೊಳಿಸಬೇಕು ಎಂದು ಸೂಚಿಸಿದರು.
ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದ ಎಸ್.ಒ.ಪಿ ಮಾನದಂಡದಂತೆ ಪರೀಕ್ಷೆ ನಡೆಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಒಂದು ಕೊಠಡಿಯಲ್ಲಿ ಕೇವಲ ೨೪ ವಿದ್ಯಾರ್ಥಿಗಳಿಗೆ ಮಾತ್ರ ಆಸನ ವ್ಯವಸ್ಥೆ ಮಾಡಬೇಕು, ಕೊಠಡಿ ಪ್ರವೇಶಕ್ಕೂ ಮುನ್ನ ಪ್ರತಿಯೊಬ್ಬರಿಗೂ ಜ್ವರ ತಪಾಸಣೆ ನಡೆಸಬೇಕು, ಸ್ಯಾನಿಟೈಜರ್‌ನಿಂದ ಕೈತೊಳೆಯಬೇಕು, ಪ್ರತಿ ವಿದ್ಯಾರ್ಥಿಯು ಮಾಸ್ಕ್ ಧರಿಸಿ ಪರೀಕ್ಷೆ ಬರೆಯಬೇಕು ಎಂದರು.
ವಿದ್ಯಾರ್ಥಿಗಳಿಗೆ ತಮ್ಮ ತಮ್ಮ ಹಳ್ಳಿಗಳಿಂದ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿ ಸುಗಮವಾಗಿ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ವಾಯುವ್ಯ ಸಾರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಮಾಡಿಕೊಂಡು ಬಸ್ ವ್ಯವಸ್ಥೆ ಕಲ್ಪಿಸಬೇಕು, ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಸ್ಕ್ರೀನಿಂಗ್ ಕಾರ್ಯಕ್ಕಾಗಿ ಪರೀಕ್ಷಾ ಕೇಂದ್ರಕ್ಕೆ ಬೆಳೆಗ್ಗೆ ೯ಗಂಟೆಗೆ ವಿದ್ಯಾರ್ಥಿಗಳು ಹಾಜರಾಗಲು ಸೂಚನೆ ನೀಡಬೇಕು, ಸ್ಕ್ರೀನಿಂಗ್, ಸಾಮಾಜಿಕ ಅಂತರ, ಸ್ಯಾನಿಟೈಜೇಶನ್, ಮಾಸ್ಕ್ ವಿತರಣೆಗೆ ವಿವಿಧ ಉಪನ್ಯಾಸಕರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಬೇಕು ಸೂಚನೆ ನೀಡಿದರು.
ದ್ವಿತೀಯ ಪಿ.ಯು.ಸಿ ಇಂಗ್ಲೀಷ್ ವಿಷಯದ ಪರೀಕ್ಷೆ ಜೂನ್ ೧೮ರ ಗುರುವಾರ ಬೆಳೆಗ್ಗೆ ೧೦.೧೫ ರಿಂದ ೧.೩೦ ರವರೆಗೆ ನಡೆಯಲಿದೆ. ಜಿಲ್ಲೆಯಲ್ಲಿ ೧೨೯ ಪದವಿ ಪೂರ್ವ ಕಾಲೇಜುಗಳಿದ್ದು ಹೊರ ಜಿಲ್ಲೆಯ ೯೦೨ ವಿದ್ಯಾರ್ಥಿಗಳು ಸೇರಿದಂತೆ ೧೩,೯೫೫ ವಿದ್ಯಾರ್ಥಿಗಳು ದ್ವಿತೀಯ ಪಿ.ಯು.ಸಿ ಇಂಗ್ಲಿಷ್ ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದಾರೆ. ಸವಣೂರ ೧, ಶಿಗ್ಗಾಂವ, ಬ್ಯಾಡಗಿ ತಲಾ ೨, ಹಾನಗಲ್ಲ ೩ ಹಾಗೂ ಹಾವೇರಿ, ಹಿರೇಕೆರೂರ ತಾಲೂಕಿನಲ್ಲಿ ತಲಾ ೪ ಮತ್ತು ರಾಣೆಬೆನ್ನೂರಿನಲ್ಲಿ ೭ ಒಳಗೊಂಡಂತೆ ಜಿಲ್ಲೆಯಲ್ಲಿ ೨೩ ಪರೀಕ್ಷಾ ಕೇಂದ್ರಗಳು ತೆರೆಯಲಾಗಿದೆ.
ಸಭೆಯಲ್ಲಿ ಹೆಚ್ಚುವರಿ ಪೋಲೀಸ್ ವರಿಷ್ಟಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಪರೀಕ್ಷಾ ಕಾರ್ಯಕ್ಕೆ ಪೋಲೀಸ್ ಬಂದೋಬಸ್ತ್ ಕುರಿತಂತೆ ಚರ್ಚಿಸಿದರು. ಸಭೆಯಲ್ಲಿ ವಿವಿಧ ಕಾಲೇಜ ಪ್ರಾಚಾರ್ಯರು, ಪರೀಕ್ಷಾ ಕೇಂದ್ರದ ಅಧಿಕ್ಷಕರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss