Saturday, July 2, 2022

Latest Posts

ಹಾವೇರಿ ನಗರಸಭೆ ಕೈ ವಶಕ್ಕೆ: ಸಂಜೀವಕುಮಾರ ನೀರಲಗಿ ಅಧ್ಯಕ್ಷರಾಗಿ ಆಯ್ಕೆ

ಹಾವೇರಿ: ಹಾವೇರಿ ನಗರಸಭೆಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಸದಸ್ಯ ಸಂಜೀವಕುಮಾರ ನೀರಲಗಿ ಅಧ್ಯಕ್ಷರಾಗಿ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಜಾಹೀದಾಬಾನು ಜಮಾದಾರ ಅವರು ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಸಂಬಂಧ ಶನಿವಾರ ನಗರಸಭೆ ಕಾರ್ಯಾಲಯದಲ್ಲಿ ನಡೆದ ಚುನಾವಣೆಯಲ್ಲಿ ನಾಲ್ಕು ಜನ ಪಕ್ಷೇತರ ಅಭ್ಯರ್ಥಿಗಳ ಬೆಂಬಲದಿಂದ ೧೯ ಜನ ಸದಸ್ಯರ ಬಲದೊಂದಿಗೆ ನಗರಸಭೆಯಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿತು.
ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸಂಜೀವಕುಮಾರ ನೀರಲಗಿ ನಾಮಪತ್ರ ಸಲ್ಲಿಕೆ ಮಾಡಿದರು, ಉಪಾಧ್ಯಕ್ಷ ಸ್ಥಾನಕ್ಕೆ ಜಾಹೀದಾಬಾನು ಜಮಾದಾರ ನಾಮ ಪತ್ರ ಸಲ್ಲಿಕೆ ಮಾಡಿದರೆ. ಬಿಜೆಪಿ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಬಸವರಾಜ ಬೆಳವಡಿ ಅವರು ನಾಮ ಪತ್ರ ಸಲ್ಲಿಕೆ ಮಾಡಿದ್ದರು. ಆದರೆ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಪಕ್ಷ ಒಟ್ಟು ಮೂವರಿಗೆ ಅವಕಾಶವನ್ನು ಕಲ್ಪಿಸಿಕೊಟ್ಟಿತ್ತು. ಆದರೆ ಕೊನೆಗೆ ಮಲ್ಲಮ್ಮ ಗೌರಮ್ಮನವರ ನಾಮಪತ್ರ ಸಲ್ಲಿಸುವಕ್ಕೆ ನಗರಸಭೆಗೆ ಆಗಮಿಸಿದರಾದರೂ ನಾಮ ಪತ್ರ ಸಲ್ಲಿಸುವುದಕ್ಕೆ ಸಮಯ ಮೀರಿದ್ದರಿಂದ ನಾಮಪತ್ರ ಸಲ್ಲಿಕೆ ಸಾಧ್ಯವಾಗಲಿಲ್ಲ. ಉಪಾಧ್ಯಕ್ಷರಾಗಿ ಜಾಹಿದಾಬಾನು ಜಮಾದಾರ ಅವರು ಅವಿರೋಧವಾಗಿ ಆಯ್ಕೆ ಆದರು.
ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದ ಬಸವರಾಜ ಬೆಳವಡಿ ಅವರು ಕೊನೆಗಳಿಗೆಯಲ್ಲಿ ನಾಮ ಪತ್ರ ಹಿಂಪಡೆದಿದ್ದರಿಂದ ಕಾಂಗ್ರೆಸ್ಸಿನಿಂದ ನಾಮಪತ್ರ ಸಲ್ಲಿಸಿದ್ದ ಸಂಜೀವಕುಮಾರ ನೀರಲಗಿ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಆದರು.
ಕಳೆದ ಎರಡು ವರ್ಷಗಳ ಹಿಂದೆ ಜರುಗಿದ ಚುನಾವಣೆಯಲ್ಲಿ ನಗರಸಭೆ 31 ಸದಸ್ಯಬಲದಲ್ಲಿ ಕಾಂಗ್ರೆಸ್ 15, ಬಿಜೆಪಿಯಿಂದ 9 ಹಾಗೂ 7 ಜನ ಪಕ್ಷೇತರರಾಗಿ ಆಯ್ಕೆಯಾಗಿದ್ದರು. ಬಹುಮತಕ್ಕೆ 16 ಸದಸ್ಯ ಬಲಬೇಕಾಗಿತ್ತು. ಕಾಂಗ್ರಸ್ಸಿಗೆ ಓರ್ವ ಸದಸ್ಯರ ಬೆಂಬಲ ಬೇಕಾಗಿತ್ತು ಆದರೂ ನಾಲ್ವರ ಪಕ್ಷೇತರರ ಬೆಂಬಲವನ್ನು ಪಡೆದುಕೊಳ್ಳುವಲ್ಲಿ ಕೈ ಮೇಲುಗೈ ಸಾಧಿಸಿತು.
ಬಿಜೆಪಿಯ 9 ಸದಸ್ಯರು, ಓರ್ವ ಸಂಸದ ಓರ್ವ ಶಾಸಕ ಹಾಗೂ ಮೂವರು ಪಕ್ಷೇತರರು ಸೇರಿ ಒಟ್ಟು 14 ಸದಸ್ಯ ಬಲವಾಗುವ ಮೂಲಕ ಬಹುಮತ ಸಾಬೀತಿಗೆ ಬೇಕಾದ ಸಂಖ್ಯಾ ಬದಲ ಕೊರತೆ ಆಗುತ್ತಿತ್ತು ಇದರಿಂದ ಬಿಜೆಪಿಯಿಂದ ನಾಮ ಪತ್ರ ಸಲ್ಲಿಸಿದ್ದ ಬಸವರಾಜ ಬೆಳವಡಿ ಅವರು ನಾಮಪತ್ರ ಹಿಂಪಡೆಯುವಂತಾಯಿತು. ಓರ್ವ ಬಿಜೆಪಿ ಮಹಿಳಾ ಸದಸ್ಯೆ ಅಣಾರೋಗ್ಯದ ಕಾರಣಕ್ಕೆ ಮತದಾನಕ್ಕೆ ಬರುವದಕ್ಕೆ ಸಾಧ್ಯವಾಗಲಿಲ್ಲ. ಓರ್ವ ಪಕ್ಷೇತರ ಅಭ್ಯರ್ಥಿ ಪ್ರಸನ್ ಧಾರವಾಡಕರ ಅವರು ಸಹ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಪ್ರಕ್ರೀಯೆಯಲ್ಲಿ ಭಾಗವಹಿಸದೇ ಮತದಾನದಿಂದ ಹೊರಗುಳಿದಿದ್ದರು. ಚುನಾವಣಾ ಪ್ರಕ್ರೀಯೆಯಲ್ಲಿ 29 ಸದಸ್ಯರು, ಓರ್ವ ಸಂಸದ ಹಾಗೂ ಓರ್ವ ಶಾಸಕ ಸೇರಿ ಒಟ್ಟು 31 ಜನರು ಪಾಲ್ಗೊಂಡಿದ್ದರು. ಇಬ್ಬರು ಸದಸ್ಯರು ಗೈರು ಹಾಜರಾಗಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss