ಹಾವೇರಿ: ಮಲೆನಾಡು ಪ್ರದೇಶಕ್ಕೆ ಹೊಂದಿಕೊಂಡಿರುವ ಜಿಲ್ಲೆಯ ಹಿರೇಕೆರೂರ ತಾಲೂಕಿನಲ್ಲಿ ಆಗುತ್ತಿರುವ ಅಧಿಕ ಮಳೆಯಿಂದ ಕುಟುಂಬವೊಂದು ಮನೆಯನ್ನು ಕಳೆದುಕೊಂಡು ಬೀದಿಗೆ ಬಿದ್ದ ಘಟನೆ ತಾಲೂಕಿನ ಯತ್ತಿನಹಳ್ಳಿ ಗ್ರಾಮದಲ್ಲಿ ಜರುಗಿದೆ.
ಕಳೆದ ಹಲವು ದಿನಗಳಿಂದ ಆಗುತ್ತಿರುವ ಮಳೆಯಿಂದ ಗ್ರಾಮದ ಶಿವಪ್ಪ ಹೂವಪ್ಪ ಸೋಮನಹಳ್ಳಿ ಎಂಬುವವರಿಗೆ ಸೇರಿದ ಮನೆ ಮಾಳಿಗೆ ಸಂಪೂರ್ಣ ಕುಸಿದು ಬಿದ್ದಿದೆ. ಇದರಿಂದ ಕುಟುಂಬಸ್ತರಿಗೆ ದಿಕ್ಕೇ ತೋಚದಂತಾಗಿದೆ. ಮನೆ ಮಾಲೀಕ ಶಿವಪ್ಪನಿಗೆ ಎರಡು ವರ್ಷದ ಹಿಂದೆ ಪಾರ್ಶವಾಯು ಆಗಿದ್ದು, ಕೆಲಸ ಮಾಡದಂತ ಪರಿಸ್ಥಿತಿಯಲ್ಲಿ ಇದ್ದಾರೆ. ಈ ಸಮಯದಲ್ಲಿ ಇದ್ದ ಮನೆಯು ಸಂಪೂರ್ಣ ನೆಲಸಮಗೊಂಡಿರುವ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.
ಈ ಕುರಿತ ಮನೆಯ ಯಜಮಾನಿ ಮಾತನಾಡಿ, ಕಳೆದ ಒಂದು ವಾರದಿಂದ ನಿರಂತರ ಮಳೆಯಾದ ಪರಿಣಾಮ, ಮನೆಯು ಸಂಪೂರ್ಣ ಬಿದ್ದುಹೋಗಿದೆ. ಇಲ್ಲಿಯವರೆಗೆ ನಮ್ಮ ಕಷ್ಟವನ್ನು ಕೇಳಲು ಯಾರು ಬಂದಿಲ್ಲ. ಮನೆಯ ಯಜಮಾನರಿಗೆ ಪ್ಯಾರಲೈಸಸ್ ಅಟ್ಯಾಕ್ ಆಗಿದೆ. ೨ ಹೆಣ್ಣು ಮಕ್ಕಳು, ೧ ಗಂಡು ಮಗ ಇದ್ದು, ಹೇಗೆ ಜೀವನ ಮಾಡಬೇಕು ಎಂಬ ಚಿಂತಿಯಾಗಿದೆ ಎಂದು ಪತ್ರಿಕೆಯೊಂದಿಗೆ ತಮ್ಮ ಅಳಲನ್ನೂ ನೋಡಿಕೊಂಡರು.
ಆರ್ಥಿಕವಾಗಿ ಕಷ್ಟದಲ್ಲಿರುವ ಕುಟುಂಬಕ್ಕೆ ವಾಸವಿದ್ದ ಮನೆಯೂ ಹಾನಿಯಾಗಿರುವುದು ಕುಟುಂಬಕ್ಕೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಗಳು ಮನೆ ಕಳೆದುಕೊಂಡು ಬೀದಿಗೆ ಬಿದ್ದಿರುವ ಕುಟುಂಬಕ್ಕೆ ನೇರವು ನೀಡುವುದಕ್ಕೆ ಮುಂದೆ ಬರಬೇಕಾಗಿದೆ.