Tuesday, August 16, 2022

Latest Posts

ಹಾವೇರಿ| ಪೊಲೀಸ್ ಕಾನ್ಸಟೇಬಲ್ ಸೇರಿ ಮತ್ತಿಬ್ಬರಿಗೆ ಕೊರೋನಾ ಸೋಂಕು ದೃಢ

ಹಾವೇರಿ: ಪೊಲೀಸ್ ಕಾನ್ಸಟೇಬಲ್ ಸೇರಿ ಮತ್ತಿಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಈ ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಐದು ಪ್ರಕರಣಗಳು ಸಕ್ರಿಯವಾಗಿದ್ದು, ಈವರೆಗೆ ೨೬ ವ್ಯಕ್ತಿಗಳಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ ೨೧ ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದ್ದಾರೆ.
ಸೋಮವಾರ ೪೧ ವರ್ಷದ ಬ್ಯಾಡಗಿ ತಾಲೂಕಿನ ಕದರಮಂಡಲಗಿ ಗ್ರಾಮದ ಪಿ-೭೦೩೦ ವ್ಯಕ್ತಿಗೆ ಹಾಗೂ ಗುತ್ತಲದ ಒಂಭತ್ತು ವರ್ಷದ ಪಿ-೭೦೩೧ ಬಾಲಕನಿಗೆ ಸೋಂಕು ದೃಢಗೊಂಡಿದೆ.
ಈ ಬಾಲಕ ಪಿ-೫೦೦೪ರ ಪ್ರಾಥಮಿಕ ಸಂಪರ್ಕಿತನಾಗಿದ್ದಾನೆ. ಈ ಇಬ್ಬರನ್ನು ನಿಗಧಿತ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಪಿ-೭೦೩೦ ಪ್ರವಾಸ ಹಿನ್ನೆಲೆ
ಕದರಮಂಡಲಗಿ ಗ್ರಾಮದ ನಿವಾಸಿಯಾದ ಪಿ-೭೦೩೦ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಕಾನ್ಸಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ಜೂನ್ ೩ ಹಾಗೂ ೪ ರಂದು ಎರಡು ದಿವಸ ಕರ್ತವ್ಯಕ್ಕೆ ರಜೆ ಹಾಕಿ ದಾವಣಗೆರೆ ಜಿಲ್ಲೆ ಮಲೆಬೆನ್ನೂರಿನ ಪೊಲೀಸ್ ವಸತಿ ಗೃಹದಲ್ಲಿರುವ ಅಕ್ಕನ ಮನೆಯಲ್ಲಿ ಉಳಿದಿದ್ದ ತನ್ನ ಪತ್ನಿಯನ್ನು ಕರೆದುಕೊಂಡು ಬರಲು ಹೋಗಿದ್ದನು. ಈ ಸಂದರ್ಭದಲ್ಲಿ ಎರಡು ದಿವಸ ಅಕ್ಕನ ಮನೆಯಿಂದ ಹೊರಗಡೆ ಎಲ್ಲಿಯೂ ಹೋಗಿರುವುದಿಲ್ಲ. ಅಕ್ಕನ ಗಂಡ ಮಲೇಬೆನ್ನೂರು ಠಾಣೆಯ ಪಿ.ಎಸ್.ಐ. ಅವರ ಜೀಪ್ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ.
ಜೂನ್ ೫ ಸದರಿ ಸೋಂಕಿತ ಕಾನ್ಸಟೇಬಲ್ (ಪಿ-೭೦೩೦) ಹರಿಹರದ ಅಮೃತ ಕ್ಲಿನಿಕಲ್ ಲ್ಯಾಬೋಟರಿಯಲ್ಲಿ ಮಗನ ಜಾಂಡೀಸ್ ರಕ್ತ ತಪಾಸಣೆಗಾಗಿ ಹೋಗಿದ್ದನು ಹಾಗೂ ತಪಾಸಣೆಯ ನಂತರ ಲ್ಯಾಬೋಟರಿ ಹತ್ತಿರವಿರುವ ಆಯುರ್ವೇದ ಔಷಧಿ ನೀಡುವ ದಿ.ಮಿಲ್ಟ್ರಿ ಹನುಮಂತರಾವ್ ಅವರಲ್ಲಿ ಮಗನಿಗೆ ಔಷಧಿ ಪಡೆದುಕೊಂಡಿರುತ್ತಾನೆ. ನಂತರ ಕೋಡಿಯಾಲ್ ಹೊಸಪೇಟೆಯಲ್ಲಿರುವ ತನ್ನ ಅಣ್ಣನ ಹೆಂಡತಿಯ ಮನೆಗೆ ಹೋಗಿ ಚಹಾ ಕುಡಿದು ನಂತರ ತನ್ನ ಹೆಂಡತಿ ಹಾಗೂ ಮಗನೊಂದಿಗೆ ಕದರಮಂಡಲಗಿ ಗ್ರಾಮದಲ್ಲಿರುವ ತನ್ನ ಮನೆಗೆ ಆಗಮಿಸಿ ರಾತ್ರಿ ಬ್ಯಾಡಗಿ ಠಾಣೆಗೆ ಬಂದು ರಾತ್ರಿ ಪಹರೆ ಕರ್ತವ್ಯ ನಿರ್ವಹಿಸುತ್ತಾ ಮಾಹಿತಿ ಸಂಗ್ರಹಣೆಗಾಗಿ ನಗರದ ವಿವಿಧ ಸ್ಥಳಗಳಲ್ಲಿ ಸಂಚರಿಸಿರುತ್ತಾನೆ.
ಜೂನ್ ೮ ರಂದು ಬ್ಯಾಡಗಿಯ ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ ಬ್ಯಾಡಗಿ ಕೃಷಿ ಉತ್ಪನ್ನ ಸಂಸ್ಕರಣ ಘಟಕದ ಉಪಚುನಾವಣೆಯ ಸಂದರ್ಭದಲ್ಲಿ ಎಸ್.ಬಿ.ಕರ್ತವ್ಯ ನಿರ್ವಹಿಸಿರುತ್ತಾನೆ. ಅದೇ ದಿನ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪಿ.ಎಸ್.ಐ. ಅವರು ರಾತ್ರಿ ೮.೪೫ ಗಂಟೆಯಿಂದ ಹಾಜರಾತಿ ತೆಗೆದುಕೊಂಡಿದ್ದು ಆ ಸಮಯದಲ್ಲಿ ಠಾಣೆಯ ಎಲ್ಲಾ ಸಿಬ್ಬಂದಿಯೊಂದಿಗೆ ಸದರಿ ಕಾನ್ಸಟೇಬಲ್ ಸಹ ಅಲ್ಲಿಯೇ ಹಾಜರಿದ್ದರು. ಜೂನ್ ೧೧ ಹಾಗೂ ೧೨ ರಂದು ಎಂದಿನಂತೆ ದಿನವಿಡಿ ಎಸ್.ಬಿ.ಕರ್ತವ್ಯ ನಿರ್ವಹಿಸಿ ೨೦ ಗಂಟೆಗೆ ಇತರ ಸಿಬ್ಬಂದಿಗಳೊಂದಿಗೆ ಹಾಜರಿಗೆ ಹಾಜರಾಗಿರುತ್ತಾರೆ. ಜೂನ್ ೧೨ ರಂದು ಬೆಳಿಗ್ಗೆ ಮತ್ತೊಮ್ಮೆ ಮಗನೊಂದಿಗೆ ಔಷಧಿ ತರಲು ಹರಿಹರದಲ್ಲಿ ಆಯುರ್ವೇದ ಔಷಧಿ ನೀಡುವ ದಿ.ಮಿಲ್ಟ್ರಿ ಹನುಮಂತರಾವ್ ಅವರಲ್ಲಿಗೆ ಹೋಗಿ ತೋರಿಸಿಕೊಂಡು ಮರಳಿ ಕದರಮಂಡಲಗಿ ಬಂದಿದ್ದಾರೆ. ನಂತರ ಸರ್ಕಾರದ ಆದೇಶದಂತೆ ಪೊಲೀಸ್ ಸಿಬ್ಬಂದಿಗಳಿಗೆ ನಡೆಸುವ ನಿಯಮಿತ ಪರೀಕ್ಷೆ ಸಂದರ್ಭದಲ್ಲಿ ಇವರ ಗಂಟಲು ದ್ರವದ ಮಾದರಿಯನ್ನು ಜೂನ್ ೧೨ ರಂದು ಸ್ವಾಬ್ ಪರೀಕ್ಷೆಗೆ ಕಳುಹಿಸಲಾಗಿದ್ದು, ಜೂನ್ ೧೩ರ ರಾತ್ರಿ ಬಂದ ಲ್ಯಾಬ್ ವರದಿಯಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಕೂಡಲೇ ಇವರನ್ನು ಕೋವಿಡ್ ನಿಗಧಿತ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಸೋಂಕಿತ ಕಾನ್ಸಟೆಬಲ್‌ನ ಮನೆಯ ೧೯ ಸದಸ್ಯರು, ೪೫ ಆರಕ್ಷಕ ಸಿಬ್ಬಂದಿ ಹಾಗೂ ತಾಲೂಕು ಕಚೇರಿಯ ೧೦ ಜನ ಸೇರಿ ೭೪ ಜನರನ್ನು ಪ್ರಾಥಮಿಕ ಸಂಪರ್ಕಿತರೆಂದು ಗುರುತಿಸಿ ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಈವರೆಗೆ ನಾಲ್ಕು ಜನರನ್ನು ದ್ವಿತೀಯ ಸಂಪರ್ಕದಲ್ಲಿ ಗುರುತಿಸಲಾಗಿದ್ದು, ಪತ್ತೆ ಕಾರ್ಯ ಪ್ರಗತಿಯಲ್ಲಿದೆ.
ಬ್ಯಾಡಗಿ ಪೊಲೀಸ್ ಠಾಣೆ, ಬ್ಯಾಡಗಿ ಪೊಲೀಸ್ ವಸತಿ ಗೃಹವನ್ನು ಸೀಲ್‌ಡೌನ್ ಮಾಡಲಾಗಿದೆ. ಕಾಗಿನೆಲೆ ಉಪ ಠಾಣೆಯ ಅಧಿಕಾರಿಗೆ ಬ್ಯಾಡಗಿ ಪೊಲೀಸ್ ಠಾಣೆಯ ಪ್ರಭಾರ ವಹಿಸಿಕೊಡಲಾಗಿದೆ. ಸಾರ್ವಜನಿಕರು ತಮ್ಮ ದೂರುಗಳಿಗೆ ಕಾಗಿನೆಲೆ ಪೊಲೀಸ್ ಠಾಣೆ ಸಂಪರ್ಕಿಸಲು ಕೋರಲಾಗಿದೆ.
ಬ್ಯಾಡಗಿ ತಹಶೀಲ್ದಾರ ಹಾಗೂ ಸಿಬ್ಬಂದಿಯವರು ಸೋಂಕಿತ ಪ್ರಾಥಮಿಕ ಸಂಪರ್ಕಿತರೆಂದು ಗುರುತಿಸಲ್ಪಟ್ಟಿರುವುದರಿಂದ ಬ್ಯಾಡಗಿ ತಾಲೂಕು ಕಚೇರಿಯನ್ನು ಸೀಲ್‌ಡೌನ್ ಮಾಡಲಾಗಿದೆ. ತಾಲೂಕು ಕಚೇರಿಯ ಪ್ರಾಥಮಿಕ ಸಂಪರ್ಕಿತರನ್ನು ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ತಾಲೂಕು ಕಚೇರಿಯ ಎಲ್ಲ ಸಿಬ್ಬಂದಿ ವರ್ಗದವರಿಗೆ ದ್ವಿತೀಯ ಸಂಪರ್ಕಿತರಾಗಿರುವುದರಿಂದ ತಾಲೂಕಾ ಕಚೇರಿಯ ಸಿಬ್ಬಂದಿ ವರ್ಗದವರಿಗೆ ಹೋಂ ಕ್ವಾರಂಟೈನ್‌ನಲ್ಲಿ ಇರಿಸಿ ರಜೆ ನೀಡಲು ತಿಳಿಸಲಾಗಿದೆ. ಬ್ಯಾಡಗಿ ತಾಲೂಕಿನ ತಹಶೀಲ್ದಾರ ಪ್ರಭಾರವನ್ನು ಹಾವೇರಿ ತಹಶೀಲ್ದಾರ ಅವರಿಗೆ ವಹಿಸಿ ಆದೇಶಿಸಲಾಗಿದೆ. ಪ್ರತಿದಿನ ಮಧ್ಯಾಹ್ನ ೩ ಗಂಟೆಗೆ ಬ್ಯಾಡಗಿ ಪ್ರವಾಸಿ ಮಂದಿರದಲ್ಲಿ ಬ್ಯಾಡಗಿ ತಾಲೂಕಿನ ಜನರ ಅಹವಾಲು ಸ್ವೀಕರಿಸಿ ನಿಯಮಾನುಸಾರ ಕ್ರಮ ವಹಿಸಲು ಹಾವೇರಿ ತಹಶೀಲ್ದಾರ ಅವರಿಗೆ ಸೂಚನೆ ನೀಡಲಾಗಿದೆ.
ಸದರಿ ಸೋಂಕಿತ ಕಾನ್ಸಟೇಬಲ್ ಪಿ-೭೦೩೦ ಸಂಪರ್ಕಿತ ಯಾವುದೇ ಅಧಿಕಾರಿಗಳಾಗಲಿ, ಸಾರ್ವಜನಿಕರಾಗಲಿ ಬಂದಿದ್ದಲ್ಲಿ ಹಾವೇರಿ ಜಿಲ್ಲಾ ಆಸ್ಪತ್ರೆ ಪಕ್ಕದಲ್ಲಿರುವ ಕೆ.ಇ.ಬಿ.ಸಂಕೀರ್ಣದ ಸಭಾಂಗಣದಲ್ಲಿ ಸ್ಥಾಪಿಸಲಾದ ಫಿವರ್ ಕ್ಲಿನಿಕ್‌ನಲ್ಲಿ ಸ್ವಾಬ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಕೋರಲಾಗಿದೆ.
ಬ್ಯಾಡಗಿ ನಗರದ ತಾಲೂಕು ಕಚೇರಿ, ಪೊಲೀಸ್ ಠಾಣೆ ಹಾಗೂ ಪೊಲೀಸ್ ವಸತಿ ಗೃಹ ಒಳಗೊಂಡ ೧೦೦ ಮೀಟರ್ ಪ್ರದೇಶವನ್ನು ಕಂಟೇನ್ಮೆಂಟ್ ವಲಯವಾಗಿ ಪರಿವರ್ತಿಸಲಾಗಿದೆ. ೨೦೦ ಮೀ.ವಲಯವನ್ನು ಬಫರ್ ಜೋನ್ ಆಗಿ ಪರಿವರ್ತಿಸಲಾಗಿದೆ. ಇನ್ಸಿಡೆಂಟಲ್ ಕಮಾಂಡರ್ ಆಗಿ ಹಾವೇರಿ ಉಪವಿಭಾಗಾಧಿಕಾರಿಗಳನ್ನು ನೇಮಕಮಾಡಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಆದೇಶ ಹೊರಡಿಸಲಾಗಿದೆ.
ಪಿ-೭೦೩೧ ಪ್ರವಾಸ ಹಿನ್ನೆಲೆ
ಸೋಂಕಿತ ಬಾಲಕ ತಂದೆ-ತಾಯಿಯೊಂದಿಗೆ ಗುತ್ತಲ ನಗರದ ಆಂಗ್ಲಾಪುರ ಓಣಿಯ ವಾಲ್ಮೀಕಿ ನಗರದಲ್ಲಿ ವಾಸವಾಗಿದ್ದು, ಬಾಲಕ ಮತ್ತು ಆತನ ಕುಟುಂಬದವರು ಖಲಾಲ್ ಪ್ಲಾಟ್ ಕಂಟೈನ್‌ಮೆಂಟ್ ಜೋನ್‌ನಲ್ಲಿರುವ ಆತನ ದೊಡ್ಡಪ್ಪನ ಮನೆಗೆ ಕಾರ ಹುಣ್ಣಿಮೆ ನಿಮಿತ್ತ ಜೂ.೫ ರಂದು ಹೋಗಿ ರಾತ್ರಿ ಊಟಮಾಡಿ ಮರಳಿ ಮನೆಗೆ ಬಂದಿರುತ್ತಾನೆ. ದೊಡ್ಡಪ್ಪನ ಮನೆ ಪಿ-೫೦೦೪ ಸೋಂಕಿತಳ ಮನೆಯ ಸಮೀಪ ಇರುವುದರಿಂದ ಈ ಬಾಲಕ ದ್ವಿತೀಯ ಸಂಪರ್ಕಿತನೆಂದು ಗುರುತಿಸಿ ಈತನ ಗಂಟಲು ದ್ರವ ಮಾದರಿಯನ್ನು ಜೂ.೧೨ ರಂದು ಸ್ವಾಬ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಜೂ.೧೩ ರಂದು ರಾತ್ರಿ ಲ್ಯಾಬ್‌ನಿಂದ ಪಾಸಿಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಕೂಡಲೇ ನಿಗಧಿತ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕನ ನಿವಾಸವಿರುವ ಗುತ್ತಲ ನಗರದ ಆಂಗ್ಲಪುರ ಓಣಿಯ ವಾಲ್ಮೀಕಿ ನಗರದ ೧೦೦ ಒಳಗಿನ ಪ್ರದೇಶವನ್ನು ಕಂಟೇನ್ಮೆಂಟ್ ವಲಯವಾಗಿ ಪರಿವರ್ತಿಸಲಾಗಿದೆ. ೨೦೦ ಮೀ.ವಲಯವನ್ನು ಬಫರ್ ಜೋನ್ ಆಗಿ ಪರಿವರ್ತಿಸಲಾಗಿದೆ. ಇನ್ಸಿಡೆಂಟಲ್ ಕಮಾಂಡರ್ ಆಗಿ ಹಾವೇರಿ ಉಪವಿಭಾಗಾಧಿಕಾರಿ ಇವರನ್ನು ನೇಮಕಮಾಡಿ ಆದೇಶ ಹೊರಡಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!