ಹಾವೇರಿ: ಜಿಲ್ಲೆಯ ಒಂದು ಮಗುವೂ ಸೇರಿ ಮೂವರು ಕೋವಿಡ್ ಸೋಂಕಿನಿಂದ ಮುಕ್ತಿಹೊಂದುವ ಮೂಲಕ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.
ಜಿಲ್ಲೆಯ ರಾಣೇಬೆನ್ನೂರ ತಾಲೂಕಿನ ತುಮ್ಮಿನಕಟ್ಟೆ ಗ್ರಾಮದವರಾದ ಎರಡು ವರ್ಷದ ಮಗು ಪಿ-೨೪೯೪, ೨೮ ವರ್ಷದ ಮಹಿಳೆ ಪಿ-೨೪೯೬ ಮತ್ತು ೨೨ ವರ್ಷದ ಪುರುಷ ಪಿ-೨೪೯೭ ಬುಧವಾರ ಜಿಲ್ಲಾ ಆಸ್ಪತ್ರೆಯ ಕೋವಿಡ್ ಘಟಕದಿಂದ ಮುಕ್ತಿ ಹೊಂದಿದವರು. ಇವರು ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ.
ಇವರು ಮಹಾರಾಷ್ಟ್ರ ರಾಜ್ಯ ಥಾಣೆ ಜಿಲ್ಲೆಯ ಪಾಂಡಪಾಡ್ವಾದ ಕಲ್ವಾದಲ್ಲಿ ಬೀದಿ ವ್ಯಾಪಾರ ಮಾಡಿಕೊಂಡಿದ್ದ ಇವರು ಸೇವಾ ಸಿಂಧು ಪಾಸ್ ಪಡೆದು ಜಿಲ್ಲೆಗೆ ಮೇ.೧೭ ರಂದು ಆಗಮಿಸಿದ್ದರು. ಇವರಿಗೆ ಮೇ.೨೮ ರಂದು ಕೊರೋನಾ ಸೋಂಕಿರುವುದು ದೃಢಪಟ್ಟಿತ್ತು.
ಇವರನ್ನು ಜಿಲ್ಲಾ ಆಸ್ಪತ್ರೆಯ ಪ್ರಭಾರ ಶಸ್ತ್ರ ಚಿಕಿತ್ಸಕ ಡಾ. ಸುರೇಶ ಪೂಜಾರ, ಡಾ. ನಿರಂಜನ, ಡಾ. ಲೀಲಾ ಸೇರಿದಂತೆ ಇತರೆ ಸಿಬ್ಬಂಧಿಗಳು ಹೂ ನೀಡಿ ಬೀಳ್ಕೊಟ್ಟರು.
ಜಿಲ್ಲೆಯಲ್ಲಿ ಇವರೆಗೆ ೨೧ ಕೋವಿಡ್ ಪ್ರಕರಣಗಳು ಕಂಡು ಬಂದಿದ್ದು ಇವರೆಗೆ ೧೪ ಜನರು ಗುಣಮುಖರಾಗಿ ಕೋವಿಡ್ ಘಟಕದಿಂದ ಮನೆಗೆ ತೆರಳಿದಂತಾಗಿದೆ. ಇನ್ನು ೭ ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇವರೆಗೆ ಕೋವಿಡ್ ಘಟಕದಲ್ಲಿ ದಾಖಲಾದವರೆಲ್ಲರೂ ಕೋವಿಡ್(ಎ) ಗುಣಲಕ್ಷಣಗಳು ಕಂಡುಬಾರದವರಾಗಿದ್ದರಿಂದ ಇವರು ಬೇಗನೆ ಚೇತರಿಸಿಕೊಂಡಿದ್ದಾರೆ ಇನ್ನುಳಿದವರು ಸಹ ಗುಣಮುಖ ಆಗುತ್ತಿದ್ದಾರೆ ಎಂದು ಡಾ. ಸುರೇಶ ಪೂಜಾರ ತಿಳಿಸಿದರು.