Tuesday, June 28, 2022

Latest Posts

ಹಾವೇರಿ| ಮನೆಹಾನಿ ಸರ್ವೇ, ಜಿಲ್ಲಾ ಕೋವಿಡ್ ಆಸ್ಪತ್ರೆ ಕಾರ್ಯವೈಖರಿ ಬಗ್ಗೆ ಗೃಹ ಸಚಿವರ ತೀವ್ರ ಅಸಮಾಧಾನ

ಹಾವೇರಿ: ಜಿಲ್ಲಾ ಕೋವಿಡ್ ಆಸ್ಪತ್ರೆ ಹಾಗೂ ತಾಲೂಕುಗಳ ಕೋವಿಡ್ ಆಸ್ಪತ್ರೆಗಳಲ್ಲಿ ಪಾಸಿಟಿವ್ ವ್ಯಕ್ತಿಗಳ ದಾಖಲಾತಿ, ಚಿಕಿತ್ಸೆ, ವೈದ್ಯರ ಹಾಜರಾತಿ ಸೇರಿದಂತೆ ಸಮಗ್ರ ಕಾರ್ಯಚಟುವಟಿಕೆಗಳ ಮೇಲ್ವಿಚಾರಣೆಗೆ ಉಪವಿಭಾಗಾಧಿಕಾರಿಗಳನ್ನು ನೇಮಕಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.
ಕೋವಿಡ್ ನಿರ್ವಹಣೆ ಹಾಗೂ ಮಳೆಹಾನಿ, ನೆರೆ ಪರಿಸ್ಥಿತಿ ಕುರಿತಂತೆ ಜಿಲ್ಲಾಡಳಿತದೊಂದಿಗೆ ಗುರುವಾರ ಸಂಜೆ ವಿಡಿಯೋ ಸಂವಾದ ನಡೆಸಿದ ಅವರು, ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಕಾರ್ಯವೈಖರಿ ಹಾಗೂ ಅತಿವೃಷ್ಟಿಯಿಂದ ಹಾನಿಯಾಗಿರುವ ಮನೆ ಸರ್ವೇ ಕುರಿತಂತೆ ಮಾಹಿತಿ ಪಡೆದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಆಸ್ಪತ್ತೆಯಲ್ಲಿ ಕೋವಿಡ್ ಪಾಸಿಟಿವ್ ವ್ಯಕ್ತಿಗಳ ಚಿಕಿತ್ಸೆಗೆ ಬೆಡ್ ಖಾಲಿ ಇದ್ದರೂ ಬೆಡ್‌ಗಳು ಇಲ್ಲ ಎಂದು ರೋಗಿಗಳನ್ನು ದಾಖಲು ಮಾಡಿಕೊಳ್ಳದೆ ವಾಪಸ್ ಕಳುಹಿಸುತ್ತಿರುವ ದೂರುಗಳು ಬಂದಿವೆ. ಇಂತಹ ಘಟನೆಗಳು ಮರುಕಳಿಸಬಾರದು. ಜಿಲ್ಲೆಯಲ್ಲಿ ಯಾರೇ ಪಾಸಿಟಿವ್ ವ್ಯಕ್ತಿಗಳನ್ನು ಬೆಡ್‌ಗಳು ಇಲ್ಲ ಎಂದು ಚಿಕಿತ್ಸೆ ನಿರಾಕರಿಸಿ ವಾಪಸ್ ಕಳುಹಿಸಿದರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕರ ಮೇಲೆ ಗಂಭೀರ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕೋವಿಡ್ ಪಾಸಿಟಿವ್ ವ್ಯಕ್ತಿಗಳ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಯ ವೈದ್ಯರು ಆಸಕ್ತಿ ತೋರುತ್ತಿಲ್ಲ. ಸರ್ಕಾರಿ ಸೇವೆಗಿಂತ ಖಾಸಗಿ ಸೇವೆಯಲ್ಲಿ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಬರುವುದಿಲ್ಲ. ನರ್ಸ್‌ಗಳ ಮೇಲೆ ಚಿಕಿತ್ಸೆಯ ಹೊಣೆಗಾರಿಕೆ ನೀಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಎಲ್ಲ ವೈದ್ಯಕೀಯ ಸೌಲಭ್ಯಗಳು ಇದ್ದಾಗ್ಯೂ ಇಂತಹ ದೂರುಗಳು ಬರುತ್ತಿರುವ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕೋವಿಡ್ ಚಿಕಿತ್ಸೆ ನಿರಾಕರಣೆ, ನಿರ್ಲಕ್ಷ್ಯ, ಪ್ರವೇಶ ನೀಡದೇ ನೆಪಹೇಳಿ ಮನೆಗೆ ಕಳುಹಿಸುವ ಘಟನೆಗಳು ಜಿಲ್ಲೆಯಲ್ಲಿ ಮರುಕಳುಹಿಸಬಾರದು. ಯಾವುದೇ ರೋಗಿಯು ಚಿಕಿತ್ಸೆ ಇಲ್ಲದೆ ಹಿಂತಿರುಗಬಾರದು. ಇದರಿಂದ ಜಿಲ್ಲೆಗೆ ಕೆಟ್ಟ ಹೆಸರು ಬರುತ್ತದೆ. ಇದಕ್ಕೆ ನೀವೇ ಕಾರಣರಾಗುತ್ತಿರಿ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿ ತಕ್ಷಣವೇ ವ್ಯವಸ್ಥೆ ಸುಧಾರಿಸಬೇಕು. ಜಿಲ್ಲಾ ಆಸ್ಪತ್ರೆಗೆ ಹಾವೇರಿ ಉಪವಿಭಾಗಾಧಿಕಾರಿಗಳನ್ನು ನಿಯೋಜಿಸಿ ಜಿಲ್ಲಾ ಕೋವಿಡ್ ಆಸ್ಪತ್ರೆಯ ಎಲ್ಲ ಚಲನವಲನಗಳ ಬಗ್ಗೆ ನಿಗಾವಹಿಸಿ ಪ್ರತಿ ವರದಿ ಮಾಡುವಂತೆ ಸೂಚನೆ ನೀಡಿದರು.
ಇದೇ ಮಾದರಿಯಲ್ಲಿ ತಾಲೂಕಾ ಕೋವಿಡ್ ಆಸ್ಪತ್ರೆಗಳ ಉಸ್ತುವಾರಿಗೆ ಸವಣೂರ ಹಾಗೂ ಹಾವೇರಿ ಉಪವಿಭಾಗಾಧಿಕಾರಿಗಳು ಆಯಾ ತಾಲೂಕಾ ವ್ಯಾಪ್ತಿಯ ಆಸ್ಪತ್ರೆಗಳ ಮೇಲೆ ನಿಗಾವಹಿಸುವಂತೆ ಸೂಚನೆ ನೀಡಿದರು.
ವಾರದಲ್ಲಿ ವ್ಯವಸ್ಥೆ
ಬ್ಯಾಡಗಿಯಲ್ಲಿ ತ್ವರಿತವಾಗಿ ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಬೇಕು. ಸವಣೂರು, ಹಾನಗಲ್, ರಾಣೇಬೆನ್ನೂರ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬೆಡ್ ವ್ಯವಸ್ಥೆಗಳ ಹೆಚ್ಚಳ ಮಾಡಬೇಕು. ಬಂಕಾಪುರದಲ್ಲಿ ೩೦ ಹಾಸಿಗೆಗಳ ಆಕ್ಸಿಜನ್ ಪೂರೈಕೆ ವ್ಯವಸ್ಥೆಯನ್ನು ವಾರದಲ್ಲಿ ಸಿದ್ಧಪಡಿಸಬೇಕು. ಅಗತ್ಯ ಔಷಧಿ ಖರೀದಿ, ಆಕ್ಸಿಜನ್ ಟ್ಯಾಂಕ್‌ಗಳ ಖರೀದಿಗೆ ತುರ್ತು ಕ್ರಮವಹಿಸಿ ಕೋವಿಡ್ ಸೋಂಕಿನಿಂದ ಮರಣಹೊಂದುವವರ ಪ್ರಮಾಣವನ್ನು ಇಳಿಮುಖಗೊಳಿಸಲು ತೀವ್ರತರ ಕ್ರಮಕೈಗೊಳ್ಳುವಂತೆ ತಾಕೀತು ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು, ಜಿ. ಪಂ ಸಿಇಓ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ, ಎಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ, ಉಪವಿಭಾಗಾಧಿಕಾರಿಗಳಾದ ಡಾ.ದಿಲೀಷ್ ಶಶಿ, ಅನ್ನಪೂರ್ಣ ಮುದಕಮ್ಮನವರ, ಡಿಹೆಚ್‌ಓ ಡಾ.ರಾಜೇಂದ್ರ ದೊಡ್ಮನಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಆರ್.ಹಾವನೂರ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss