Wednesday, August 10, 2022

Latest Posts

ಹಾವೇರಿ| ಮಳೆಹಾನಿ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬೊಮ್ಮಾಯಿ ಸೂಚನೆ

ಹಾವೇರಿ: ಜಿಲ್ಲೆಯಲ್ಲಿ ಸುರಿಯುತ್ತಿರುವ ಅಧಿಕ ಮಳೆಯಿಂದ ಉಂಟಾಗುವ ತುರ್ತು ಪರಿಸ್ಥಿತಿಯನ್ನು ಎದುರಿಸಲು ಪ್ರತಿ ತಾಲೂಕಿಗೆ ಓರ್ವರಂತೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಿ ತಾಲೂಕಾ ಕೇಂದ್ರದಲ್ಲಿ ಉಳಿದು ಉಸ್ತುವಾರಿ ವಹಿಸಬೇಕು ಎಂದು ಜಿಲ್ಲಾಡಳಿತಕ್ಕೆ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸೂಚಿಸಿದರು.
ಬೆಂಗಳೂರು ವಿಕಾಸಸೌಧದಿಂದ ಹಾವೇರಿ ಹಾಗೂ ಉಡುಪಿ ಜಿಲ್ಲಾಡಳಿತದೊಂದಿಗೆ ಗುರುವಾರ ವಿಡಿಯೋ ಸಂವಾದ ನಡೆಸಿ ಮಳೆಹಾನಿ ವಿವರ, ಕೋವಿಡ್ ನಿಯಂತ್ರಣ ಹಾಗೂ ಪರಿಹಾರ ಕಾರ್ಯಗಳು, ಮುನ್ನೆಚ್ಚರಿಕೆ ಕ್ರಮಗಳ ಕುರಿತಂತೆ ಸಮಾಲೋಚನೆ ನಡೆಸಿದರು.
ಮಳೆಯಿಂದ ತೊಂದರೆಗೊಳಗಾದ ಕುಟುಂಬಗಳಿಗೆ ತತಕ್ಷಣ ಪರಿಹಾರ ವಿತರಣೆಗೆ ತುರ್ತು ಕ್ರಮ ವಹಿಸಬೇಕು. ಸ್ಥಳಾಂತರಕ್ಕೆ ಕಾಳಜಿ ಕೇಂದ್ರಗಳ ಸ್ಥಾಪನೆ ಸೇರಿದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ತಿಳಿಸಿದರು.
ವರದಾ ನದಿ ಪಾತ್ರದಲ್ಲಿ ಮುಳಗಡೆ ಭೀತಿ ಎದುರಿಸುವ ಹಳ್ಳಿಗಳಿಗೆ ಖುದ್ದಾಗಿ ಅಧಿಕಾರಿಗಳು ಭೇಟಿ ನೀಡಬೇಕು. ಪ್ರವಾಹ ತೊಂದರೆಗಳಿಗೆ ಒಳಗಾಗುವ ಹಳ್ಳಿಗಳಲ್ಲಿ ಮಾರ್ಕಿಂಗ್ ಮಾಡಿ ನೀರು ನುಗ್ಗುವ ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕುರಿತಂತೆ ಕಾಳಜಿ ಕೇಂದ್ರಗಳ ತೆರೆಯಲು ಈಗಿನಿಂದಲೇ ಸ್ಥಳಗಳನ್ನು ಗುರುತಿಸಿಕೊಳ್ಳಬೇಕು ಎಂದರು.
ಮಳೆಯಿಂದ ತೊಂದರೆಗೊಳಗಾಗುವ ನದಿ, ಹಳ್ಳ ಹಾಗೂ ಕೆರೆ ದಡಗಳ ಗ್ರಾಮಗಳ ಜನರಿಗೆ ಎಲ್ಲ ಮುನ್ನೆಚ್ಚರಿಕೆ ನೀಡಬೇಕು. ತಹಶೀಲ್ದಾರ, ಉಪವಿಭಾಗಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಪರಿಸ್ಥಿತಿಯನ್ನು ಪರಿಶೀಲನೆ ನಡೆಸುವಂತೆ ಸೂಚಿಸಿದರು.
ವರದಾ ನದಿ ಪಾತ್ರದ ಶಿಗ್ಗಾಂವ, ಸವಣೂರ, ಹಾನಗಲ್, ಹಾವೇರಿ ಭಾಗದ ಗ್ರಾಮಗಳಲ್ಲಿ ಕಳೆದ ನೆರೆಯ ಸಂದರ್ಭದ ಅನುಭವದ ಆಧಾರದ ಮೇಲೆ ಆ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ವಹಿಸಬೇಕು ಜಿಲ್ಲೆಯ ವಿವಿಧ ಕೆರೆಗಳು, ಧರ್ಮಾ ಹಾಗೂ ವರದಾ ನದಿಗಳ ಕಾಲುವೆ ಒಡೆಯದಂತೆ ಕ್ರಮವಹಿಸಬೇಕು. ಇಂದಿನಿಂದಲೇ ಕೆರೆಗಳ ದಂಡೆಗಳ ಭದ್ರತೆ ಕುರಿತಂತೆ ಅಧಿಕಾರಿಗಳ ತಂಡ ನೇಮಿಸಿ ಪರಿಶೀಲನೆ ನಡೆಸಬೇಕು. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗುವ ಸಂಭವವಿದ್ದರೆ ಮುನ್ನೆಚ್ಚರಿಕೆ ಕ್ರಮವಾಗಿ ಸುರಕ್ಷತೆಗಳನ್ನು ಕೈಗೊಳ್ಳುವಂತೆ ತಿಳಿಸಿದರು.
ಯೂರಿಯಾ ಸಮಸ್ಯೆ ಪರಿಹರಿಸಿ
ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಯೂರಿಯಾ ಗೊಬ್ಬರದ ಕೊರೆತ ಉಂಟಾಗಿದೆ. ಯೂರಿಯಾ ಗೊಬ್ಬರದ ಕೊರತೆಯನ್ನು ತಕ್ಷಣವೇ ಪರಿಹರಿಸಬೇಕು. ಜಿಲ್ಲಾಧಿಕಾರಿಗಳು ವಯಕ್ತಿಕ ಗಮನಹರಿಸಿ ಸಮಸ್ಯೆ ನಿವಾರಣೆಮಾಡಬೇಕು. ಗೊಬ್ಬರದ ಪೂರೈಕೆಗೆ ಸಮಂಬಂಧಿಸಿದ ರಾಜ್ಯ ಮಟ್ಟದ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ನಿವಾರಿಸುವುದಾಗಿ ತಿಳಿಸಿದರು.
ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ಮಾಹಿತಿ ನೀಡಿ, ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಸುರಿದ ಮಳೆಯ ಪ್ರಮಾಣ. ವರದಾ ನದಿಯ ಕೂಡಲ ಸೇತುವೆಯಲ್ಲಿ ನೀರು ಓವರ್ ಫ್ಲೋ ಆಗಿದೆ. ಅಪಾಯ ಮಟ್ಟ ಮೀರಿಲ್ಲ. ವರದಾ ನದಿ ಪಾತ್ರದ ೧೨೧ ಹಳ್ಳಿಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ ಎರಡು ದಿನದ ೭೪ ಮನೆಗಳು ಭಾಗಶಃ ಹಾನಿಯಾಗಿವೆ ಎಂದು ವಿವರಿಸಿದರು.
ವಿಡಿಯೋ ಸಂವಾದದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ, ಜಿ.ಪಂ ಸಿಇಓ ರಮೇಶ ದೇಸಾಯಿ, ಕೃಷಿ ಜಂಟಿ ನಿರ್ದೇಶಕ ಮಂಜುನಾಥ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಸೇರಿದಂತೆ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss