Thursday, July 7, 2022

Latest Posts

ಹಾವೇರಿ| ವಸತಿ ಯೋಜನೆಯಲ್ಲಿ ಒಂದುಕೋಟಿಗೂ ಅಧಿಕ ವಂಚನೆ: ಫಲಾನುಭವಿಗಳಿಗೆ ನೋಟೀಸ್ ಜಾರಿ?

ಹಾವೇರಿ: ತಾಲೂಕಿನ ಕೂರಗುಂದ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂರಗುಂದ ಹಾಗೂ ಭರಡಿ ಗ್ರಾಮಗಳಲ್ಲಿ ಜರುಗಿದ್ದ ಸರಕಾರದ ವಿವಿಧ ಯೋಜನೆಗಳಲ್ಲಿ ಕಾನೂನು ಬಾಹೀರವಾಗಿ ಹಂಚಲಾಗಿದ್ದ ಮನೆಗಳಲ್ಲಿ ಒಂದು ಕೋಟಿಗೂ ಅಧಿಕ ಅವ್ಯವಹಾರ ಜರುಗಿದೆ.
ಈ ಗ್ರಾಮಗಳಲ್ಲಿ ೨೦೧೬-೧೭ನೇ ಸಾಲಿನಲ್ಲಿ ಪಿಎಂಎವಾಯ್(ಜಿ) ಹಾಗೂ ಡಾ. ಬಿ.ಆರ್.ಅಂಬೇಡ್ಕರ ನಿವಾಸ್ ಯೋಜನೆಗಳಲ್ಲಿ ಹಲವು ಮನೆಗಳನ್ನು ಮಂಜೂರ ಮಾಡಿತ್ತು. ಈ ಮನೆಗಳಲ್ಲಿ ಪ.ಜಾ ಮತ್ತು ಪ.ಪಂ ವರ್ಗಕ್ಕೆ ಪಿಎಂಎವಾಯ್(ಜಿ) ೮೭ ಮತ್ತು ಡಾ. ಬಿ.ಆರ್.ಅಂಬೇಡ್ಕರ ನಿವಾಸ್ ಯೋಜನೆಯಲ್ಲಿ ೨೧ ಮನೆಗಳನ್ನು ಮೀಸಲಿಡಲಾಗಿತ್ತು.
ಆದರೆ, ಈ ವರ್ಗದ ಕುಟುಂಬಗಳಿಗೆ ಮನೆಗಳನ್ನು ನೀಡದೇ ಸಾಮಾನ್ಯ ವರ್ಗದ ಜನರಿಗೆ ನೀಡುವ ಮೂಲಕ ಈ ಎರಡೂ ಯೋಜನೆಗಳಿಂದ ೧೦೮ ಫಲಾನುಭವಿಗಳಿಗೆ ಈವರೆಗೆ ಒಟ್ಟು ೧೨೬೧೬೭೦೦.೦೦ ರೂಗಳನ್ನು ನೀಡುವ ಮೂಲಕ ವಸತಿ ನಿಗಮಕ್ಕೆ ವಂಚನೆ ಮಾಡಿದಂತಾಗಿದೆ.
ಕೂರಗುಂದ ಗ್ರಾಮದಲ್ಲಿ ೫೫ ಹಾಗೂ ಭರಡಿ ಗ್ರಾಮದ ೫೩ ಫಲಾನುಭವಿಗಳು ಸೇರಿ ಒಟ್ಟು ೧೦೮ ಜನರಲ್ಲಿ ಇಬ್ಬರು ಕೂರಗುಂದ ಹಾಗೂ ಇಬ್ಬರು ಭರಡಿ ಗ್ರಾಮದ ಫಲಾನುಭವಿಗಳು ಹೊರತುಪಡಿಸಿ ಈ ಯೋಜನೆಗಳಲ್ಲಿ ಮಂಜೂರಾದ ಹಣದಲ್ಲಿ ಬಹುತೇಕ ಫಲಾನುಭವಿಗಳು ಮನೆಗಳನ್ನು ನಿರ್ಮಿಸಿಕೊಂಡು ಪೂರ್ಣಗೊಳಿಸಿದ್ದರೆ ಇನ್ನು ಕೆಲ ಫಲಾನುಭವಿಗಳು ಮನೆ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸುವ ಹಂತಕ್ಕೆ ತಲುಪಿದ್ದರು.
ಪಿಎಂಎವಾಯ್(ಜಿ) ಮತ್ತು ಡಾ. ಬಿ.ಆರ್.ಅಂಬೇಡ್ಕರ ನಿವಾಸ್ ಯೋಜನೆಗಳಲ್ಲಿ ಪ.ಜಾ ಮತ್ತು ಪ.ಪಂ ಜನಾಂಗಕ್ಕೆ ಮೀಸಲಿದ್ದ ಮನೆಗಳನ್ನು ಯಾವುದೇ ಕಾರಣಕ್ಕೂ ಸಾಮಾನ್ಯ ವರ್ಗದ ಜನಾಂಗದ ಫಲಾನುಭವಿಗಳಿಗೆ ನೀಡುವುದಕ್ಕೆ ಬರುವುದಿಲ್ಲ. ಆದರೂ ಅಂದಿನ ಗ್ರಾ.ಪಂ ಪಿಡಿಓ, ವಸತಿ ಯೋಜನೆಯ ನೂಡಲ್ ಅಧಿಕಾರಿ, ತಾ.ಪಂ ಇ.ಓ ಹಾಗೂ ಗ್ರಾ.ಪಂ ಅಧ್ಯಕ್ಷ ಸೇರಿ ಸಾಮಾನ್ಯ ವರ್ಗದ ಜನಾಂಗಕ್ಕೆ ನೀಡುವ ಮೂಲಕ ಸರ್ಕಾರದ ನಿಯಮಾವಳಿಗಳನ್ನು ಪಾಲಿಸದೇ ಸರಕಾರಕ್ಕೆ ಅಲ್ಲದೆ ಪ.ಜಾ ಮತ್ತು ಪ.ಪಂ ಜನಾಂಗ ಜನತೆ ಮನೆಗಳಿಂದ ವಂಚಿತರಾಗುವಂತೆ ಮಾಡಿದ್ದಾರೆ.
ರಾಜೀವಗಾಂಧಿ ವಸತಿ ಯೋಜನೆ ನಿಯಮದನ್ವಯ ವಸತಿ ಯೋಜನೆಯಲ್ಲಿ ಯಾವುದಾದರೂ ಮೋಸ ಇಲ್ಲವೆ ಅವ್ಯವಹಾರ ಜರುಗಿದ್ದರೆ ಫಲಾನುಭವಿಯಿಂದಲೇ ಹಣವನ್ನು ವಸೂಲ ಮಾಡಬೇಕು ಎಂದು ಸ್ಪಷ್ಟವಾದ ಉಲ್ಲೇಖವಿದೆ.
ಪ್ರಸಕ್ತ ಪ.ಜಾ ಮತ್ತು ಪ.ಪಂ ಜನಾಂಗಕ್ಕೆ ಮಂಜೂರಾದ ಮನೆಗಳನ್ನು ಸಾಮಾನ್ಯ ವರ್ಗದ ಜನಾಂಗಕ್ಕೆ ನೀಡಿರುವುದು ವಸತಿ ನಿಗಮದ ನಿಯಮಗಳನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ.
ಇಂತಹ ತಪ್ಪಾಗುವುದಕ್ಕೆ ಫಲಾನುಭವಿಗಳ ತ್ಪಪ್ಪಂತೂ ಇಲ್ಲವೇ ಇಲ್ಲ. ಇದರಲ್ಲಿ ಪಿಡಿಓ, ಗ್ರಾ.ಪಂ ಅಧ್ಯಕ್ಷ, ವಸತಿ ನಿಗಮ ನಿಯೋಜನೆ ಮಾಡಿದ್ದ ನೂಡಲ್ ಅಧಿಕಾರಿ ಮತ್ತು ತಾ.ಪಂ ಇಓ ಇವರುಗಳೇ ಮೇಲ್ನೋಟಕ್ಕೆ ಹೋಣೆಗಾರರಾಗಿ ಕಂಡುಬರುತ್ತಾರೆ.
ಪ್ರಸಕ್ತ ಈ ಯೋಜನೆಗಳಲ್ಲಿ ಫಲಾನುಭವಿಗಲಾದವರಲ್ಲಿ ಯಾವುದೇ ತಪ್ಪು ಇರದಿದ್ದರೂ ಅವರು ನಿಗಮದಿಂದ ಪಡೆದುಕೊಂಡಿರುವ ಹಣವನ್ನು ಶೇ.೧೧ ಬಡ್ಡಿದರದಲ್ಲಿ ಒಂದೇ ಬಾರಿಗೆ ಮರುಪಾವತಿಸುವಂತೆ ಗ್ರಾ.ಪಂ ದಿಂದ ನೋಟೀಸ್ ನೀಡುವುದಕ್ಕೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೊಸದಿಗಂತಕ್ಕೆ ತಿಳಿಸಿದರು.
ಸಧ್ಯದಲ್ಲೇ ನೋಟೀಸ್
ಎರಡೂ ಗ್ರಾಮಗಳಲ್ಲಿನ ೧೦೮ ಫಲಾನುಭವಿಗಳಲ್ಲಿ ಹಣವನ್ನು ಪಡೆದುಕೊಂಡಿರುವ ಫಲಾನುಭವಿಗಳಿಗೆ ಗ್ರಾ.ಪಂ ಸಧ್ಯದಲ್ಲೇ ನೋಟೀಸ್ ನೀಡಲಿದೆ ಒಟ್ಟು ಮೂರು ನೋಟೀಸ್ ನೀಡಲಾಗುವುದು.
 ಡಾ. ಬಸವರಾಜ. ಡಿ.ಸಿ., ತಾ.ಪಂ ಇಓ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss