ಹಾವೇರಿ: ಸಾಂಸ್ಥಿಕ ಕ್ವಾರಂಟೈನ್ನಲ್ಲಿರುವವರನ್ನು ಅವರ ಆರೋಗ್ಯ, ವಯೋಮಾನಕ್ಕನುಗುಣವಾಗಿ ಪ್ರತ್ಯೇಕವಾಗಿಸಿ ನಿಗಾವಹಿಸಲು ರಾಜ್ಯ ಸಾರ್ವಜನಿಕ ಜಮೀನುಗಳ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್ ಅವರು ಸೂಚನೆ ನೀಡಿದರು. ಕೊರೋನಾ ವೈರಸ್ ಹರಡುವಿಕೆಯ ನಿಯಂತ್ರಣ ಕುರಿತಂತೆ ಕೋವಿಡ್ ನೋಡಲ್ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಸಭೆ ನಡೆಸಿದ ಅವರು ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯಿಂದ ಬರುವವರ ಸಂಖ್ಯೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ತೀವ್ರ ನಿಗಾವಹಿಸಬೇಕು. ಆರೋಗ್ಯ ಇಲಾಖೆ ಹಾಗೂ ಗ್ರಾಮ ಪಂಚಾಯತಿ ಮಟ್ಟದ ಅಧಿಕಾರಿಗಳು ಸಮನ್ವಯ ಹಾಗೂ ಚುರುಕಿನಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಕ್ವಾರಂಟೈನ್ನಲ್ಲಿರುವ ಪ್ರತಿಯೊಬ್ಬರ ಆರೋಗ್ಯ ಸ್ಥಿತಿ ಪರೀಕ್ಷೆಮಾಡಿ, ೫೫ ರಿಂದ ೬೦ ವರ್ಷಕ್ಕಿಂತ ಹೆಚ್ಚು ವಯಸ್ಸಾದವರು, ೧೦ ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು, ಬಿ.ಪಿ., ಶುಗರ್, ಹೃದಯ ಸಂಬಂಧಿ ಕಾಯಿಲೆಗಳು, ವಿವಿಧ ಶಸ್ತ್ರ ಚಿಕಿತ್ಸೆಗೆ ಒಳಗಾದವರನ್ನು ಕ್ವಾರಂಟೈನ್ ಕೇಂದ್ರದಲ್ಲಿ ಪ್ರತ್ಯೇಕಿಸಿ ಅವರ ಆರೋಗ್ಯ ತಪಾಸಣೆ ಸೇರಿದಂತೆ ತೀವ್ರ ಕಾಳಜಿ ವಹಿಸಬೇಕು. ಆರೋಗ್ಯವಂತರು, ಆರೋಗ್ಯ ಸಮಸ್ಯೆ ಇರುವವರನ್ನು ಒಟ್ಟಾಗಿ ಸೇರಿಸದೇ ಪ್ರತ್ಯೇಕಿಸಿ ಎಂದು ಸಲಹೆ ನೀಡಿದರು.
ಆರೋಗ್ಯ ಇಲಾಖೆಯ ಜಿಲ್ಲಾ ಶಸ್ತ್ರ ಚಿಕಿತ್ಸಕರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಸರ್ವಲೆನ್ಸ್ ಅಧಿಕಾರಿಗಳು ಹಾಗೂ ತಾಲೂಕಾ ಆರೋಗ್ಯಾಧಿಕಾರಿಗಳು ಪರಸ್ಪರ ಸಮನ್ವಯದಿಂದ ಮಾಹಿತಿಯನ್ನು ವಿನಮಯಮಾಡಿಕೊಳ್ಳಬೇಕು. ಪ್ರತಿದಿನದ ಪ್ರತಿಕ್ಷಣದ ಮಾಹಿತಿಗಳನ್ನು ಅಪ್ಡೆಟ್ ಮಾಡಿಕೊಳ್ಳಬೇಕು ಎಂದರು.
ಕ್ವಾರಂಟೈನ್ ಕೇಂದ್ರದಲ್ಲಿ ಕಾರ್ಯನಿರ್ವಹಿಸುವವರೊಂದಿಗೆ ಸಮನ್ವಯಹೊಂದಿ ಕ್ವಾರಂಟೈನ್ಗೆ ಒಳಗಾದವರು ಅವಧಿ ಪೂರ್ಣಗೊಳಿಸಿ ಬಿಡುಗಡೆಹೊಂದಿದವರು ಹೋಂ ಕ್ವಾರಂಟೈನ್ನಲ್ಲಿ ಇರುವವರ ದಿನದ ತಾಜಾ ಮಾಹಿತಿ ಇರಬೇಕು. ಯಾರೂ ಎಲ್ಲಿಂದ ಬಂದರು, ಅವರ ವಿವರಗಳು ಇರಬೇಕು ಎಂದು ತಿಳಿಸಿದರು.
ಟಿಬಿ ಹಾಗೂ ಎಚ್.ಐ.ವಿ. ಸೋಂಕಿತರ ಆರೋಗ್ಯದ ಬಗ್ಗೆ ತೀವ್ರ ನಿಗಾವಹಿಸಬೇಕು. ಅವರಿಗೆ ಅವಶ್ಯವಿರುವ ಔಷಧಿಗಳನ್ನು ಮುಂಚಿತವಾಗಿ ನೀಡಬೇಕು. ಎಚ್.ಐ.ವಿ. ಕೌನ್ಸಿಲರ್ಗಳು ಪ್ರತಿದಿನ ದೂರವಾಣಿ ಮೂಲಕ ಎಚ್.ವಿ. ಬಾಧಿತರೊಂದಿಗೆ ಸಮಾಲೋಚನೆ ನಡೆಸಬೇಕು. ಪ್ರತಿ ಕೌನ್ಸಿಲರ್ ಕನಿಷ್ಠ ೫೦ ಎಚ್.ಐ.ವಿ.ಬಾಧಿತರೊಂದಿಗೆ ಸಮಾಲೋಚನೆ ನಡೆಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಫಾಮರ್ಸಿಗಳ ಚಟುವಟಿಕೆಗಳ ಕುರಿತಂತೆ ದೈನಂದಿನ ಮಾಹಿತಿಯನ್ನು ಪಡೆಯಬೇಕು. ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ಫಾರ್ಮಾಸಿಸ್ಟ್ ಅವರು ಕೆಮ್ಮು, ಜ್ವರ, ನೆಗಡಿಗೆ ನಿರಂತರವಾಗಿ ಔಷಧಿ ಪಡೆದಿರುವ ಕುರಿತಂತೆ ಮಾಹಿತಿ ಪಡೆದು ಪರಿಶೀಲನೆ ನಡೆಸಬೇಕು ಎಂದು ಸೂಚನೆ ನೀಡಿದರು.
ಆಹಾರ ಕಿಟ್ಗಳ ವಿತರಣೆ, ವಲಸೆ ಕಾರ್ಮಿಕರ ಪ್ರಯಾಣದ ಮಾಹಿತಿ, ಕ್ವಾರಂಟೈನ್ಗಳ ಮಾಹಿತಿ, ಸಮುದಾಯ ಆರೋಗ್ಯ ತಪಾಸಣೆ, ಹೆಲ್ತ್ ವಾಚ್ ಸರ್ವೆ, ಕ್ವಾರಂಟೈನ್ ವಾಚ್ ಆಪ್, ಕಾಂಟ್ಯಾಕ್ಟ್ ಟ್ರೇಸಿಂಗ್ ಆಪ್ಗಳಿಗೆ ಮಾಹಿತಿ ಅಪ್ಡೆಟ್ ಮಾಹಿತಿ, ಕಂಟೆನ್ಮೆಂಟ್ ಹಾಗೂ ಬಫರ್ ಜೋನ್ಗಳಲ್ಲಿ ಕೈಗೊಂಡಿರುವ ಕ್ರಮಗಳ ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಸಭೆಯಲ್ಲಿ ಮಾಹಿತಿ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಉಪವಿಭಾಗಾಧಿಕಾರಿಗಳಾದ ಡಾ.ದಿಲೀಷ್ ಶಶಿ, ಅನ್ನಪೂರ್ಣ ಮುದಕಮ್ಮನವರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಚೈತ್ರ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಮಖಾನೆ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪಿ.ಕೆ.ಹಾವನೂರ, ಜಿಲ್ಲಾ ಆರ್.ಸಿ.ಎಚ್.ಅಧಿಕಾರಿ ಡಾ.ಜಯಾನಂದ, ತಾಲೂಕಾ ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ ಇತರರು ಉಪಸ್ಥಿತರಿದ್ದರು.