ಹಾಸನ: ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಮತ್ತೊಂದು ಅತ್ಯಾಧುನಿಕ ಸೌಲಭ್ಯಗಳುಳ್ಳ ಕೋವಿಡ್ ಕೇರ್ ಸೆಂಟರ್ ಅನ್ನು ಜಿಲ್ಲಾಡಳಿತ ಪ್ರಾರಂಭಿಸಿದೆ.
ಯಾವುದೇ ರೋಗ ಲಕ್ಷಣಗಳಿಲ್ಲದೆ ಇರುವ ಕೋವಿಡ್ ಸೋಂಕಿತರನ್ನು ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡುವ ಸಲುವಾಗಿ ಧರ್ಮಸ್ಥಳ ಆಯುರ್ವೇದ ಕಾಲೇಜಿನಲ್ಲಿ ಪ್ರತ್ಯೇಕಿತ ಕಟ್ಟಡವೊಂದರಲ್ಲಿ ಸುಮಾರು 300 ಹಾಸಿಗೆಯುಳ್ಳ ಕೋವಿಡ್ ಕೇರ್ ಕೇಂದ್ರವನ್ನು ಪ್ರಾರಂಭಿಸಲಾಗಿದೆ.
ಪ್ರತ್ಯೇಕ ಕೊಠಡಿಗಳು ವ್ಯವಸ್ಥಿತ ನೈಜ ಶೌಚಾಲಯಗಳು ವೈದ್ಯರ ವಿಶ್ರಾಂತಿ ಕೊಠಡಿ, ಧ್ವನಿ ವರ್ಧಕ ವ್ಯವಸ್ಥೆ ಈ ಕಟ್ಟಡದಲ್ಲಿ ಲಭ್ಯವಿದೆ.ಧರ್ಮಸ್ಥಳ ಆಯುರ್ವೇದ ಕಾಲೇಜು ಸಂಸ್ಥೆ ತನ್ನ ವೈದ್ಯಕೀಯ ವಿದ್ಯಾರ್ಥಿಗಳ ಹಾಸ್ಟೆಲ್ನ್ನು ಈ ಸೌಲಭ್ಯಕ್ಕಾಗಿ ಜಿಲ್ಲಾಡಳಿತಕ್ಕೆ ಬಿಟ್ಟುಕೊಟ್ಟಿದೆ.
ಜಿಲ್ಲೆಯ ಶ್ರೀ ಧರ್ಮಸ್ಥಳ ವೈದ್ಯಕೀಯ ಆಸ್ಪತ್ರೆಯಲ್ಲಿ ಹೊಸದಾಗಿ ಸ್ಥಾಪಿಸಿರುವ ಕೋವಿಡ್-19 ಕೇರ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಕೋವಿಡ್-19 ಸೋಂಕಿತರಿಗಾಗಿ ಮಾಡಿರುವ ಪ್ರತೇಕ ಕೊಠಡಿಗಳು,ವೈದ್ಯಕೀಯ ಸಿಬ್ಬಂಧಿಗಳಿಗಾಗಿ ಮಾಡಿರುವ ಪ್ರತ್ಯೇಕ ಕೊಠಡಿಗಳು, ಶೌಚಾಲಯದ ವ್ಯವಸ್ಥೆ, ಊಟೋಪಚಾರದ ವ್ಯವಸ್ಥೆ ಹಾಗೂ ಇನ್ನಿತರ ಸೌಲಭ್ಯ ವೀಕ್ಷಿಸಿದ್ದಾರೆ.