ಹಾಸನ: ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಾಂತಿಗ್ರಾಮ ತಾಲೂಕಿನಲ್ಲಿ ಭಾನುವಾರ ನಡೆದಿದೆ.
ಹದಿನೇಳು ವರ್ಷದ ಮನೆಯಲ್ಲಿಯೇ ಬಾಲಕಿ ಸೀರೆಯಿಂದ ನೇಣು ಬಿಗಿದುಕೊಂಡಿದ್ದು, ಗ್ರಾಮದ ಯುವಕನೋರ್ವನಿಂದ ಅತ್ಯಾಚಾರಕ್ಕೊಳಗಾಗಿ ನೇಣಿಗೆ ಶರಣಾಗಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಶಾಂತಿಗ್ರಾಮ ಠಾಣೆಗೆ ಯುವಕನ ವಿರುದ್ಧ ದೂರು ನೀಡಿದ್ದಾರೆ.
ಅತ್ಯಾಚಾರ ನಡೆದಿರುವ ವಿಷಯವನ್ನು ಬಾಲಕಿಯು ಸಾವಿಗೂ ಮುನ್ನ ಸಂಬಂಧಿಯೋರ್ವನಿಗೆ ಕರೆ ಮಾಡಿ ತಿಳಿಸಿದ್ದು, ಆತ ಬಾಲಕಿಯ ಕುಟುಂಬಸ್ಥರಿಗೆ ಈ ವಿಷಯ ತಿಳಿಸಿದ್ದಾನೆ ಎನ್ನಲಾಗಿದೆ. ಆದರೆ ಇದೀಗ ಆತನೂ ಏಕಾಏಕಿ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಶಾಂತಿಗ್ರಾಮ ಪೊಲೀಸರು ತನಿಖೆ ಆರಂಭಿಸಿದ್ದಾರೆ.