ಹಾಸನ: ಜಿಲ್ಲೆಯಲ್ಲಿ ಎಸ್ಸೆಸೆಲ್ಸಿ ವಿದ್ಯಾರ್ಥಿ ಸೇರಿದಂತೆ 14 ಹೊಸ ಕೋವಿಡ್ ಪಾಸಿಟಿವ್ ವರದಿಯಾಗುವ ಮೂಲಕ ಸೋಂಕಿತರ ಸಂಖ್ಯೆ 329ಕ್ಕೆ ಏರಿದೆ. ಎಸ್ಸೆಸೆಲ್ಸಿ ವಿದ್ಯಾರ್ಥಿಗೆ ಕೋವಿಡ್ ಹಿನ್ನೆಲೆ ಪೋಷಕರ ವಲಯದಲ್ಲಿ ತೀವ್ರ ಆತಂಕ ಎಡೆ ಮಾಡಿಕೊಟ್ಟಿದೆ.
ಜಿಲ್ಲೆಯ ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿ ಶನಿವಾರ ಪರೀಕ್ಷೆ ಬರೆಯುವ ವೇಳೆಯೇ ಕೊರೋನಾ ಪಾಸಿಟಿವ್ ಇರುವ ವಿಷಯ ತಿಳಿದು ಬಂದಿದ್ದು, ಕೇಂದ್ರದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಪೋಷಕರು ಆತಂಕಕ್ಕೆ ಸಿಲುಕುವಂತಾಗಿದೆ.
ವಿದ್ಯಾರ್ಥಿಗೆ ಕೆಲ ದಿನಗಳ ಹಿಂದೆ ಡೆಂಗ್ಯೂ ಬಂದಿದ್ದು ಇತ್ತೀಚೆಗಷ್ಟೆ ಚೇತರಿಸಿಕೊಂಡಿದ್ದ ಎಂದೇಳಲಾಗಿದ್ದು,ಮತ್ತೇ ಜ್ವರ ಕಾಣಿಸಿಕೊಂಡಿದ್ದರಿಂದ ಎರಡು ದಿನಗಳ ಹಿಂದೆ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು.
ಇದೀಗ ವಿದ್ಯಾರ್ಥಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತನ ಗ್ರಾಮಸ್ಥರು ಹಾಗೂ ಆತನೊಟ್ಟಿಗೆ ಪರೀಕ್ಷಾ ಕೇಂದ್ರ ಪ್ರವೇಶಿಸಿದ ವಿದ್ಯಾರ್ಥಿಗಳಲ್ಲಿ ಭಯ ಕಾಡ ತೊಡಗಿದೆ.
ಶನಿವಾರ ಸೋಂಕು ಪತ್ತೆಯಾದ ಬಹುತೇಕರಿಗೆ ಯಾವುದೇ ಪ್ರಯಾಣದ ಹಿನ್ನಲೆ ಇಲ್ಲದಿದ್ದರೂ ಕೂಡ ಕೋವಿಡ್ ವಕ್ಕರಿಸಿದ್ದು, ಜಿಲ್ಲೆಯಲ್ಲಿ ಸೋಂಕು ಸಮುದಾಯಕ್ಕೆ ಹರಡುತ್ತಿರೋ ಶಂಕೆ ವ್ಯಕ್ತವಾಗಿದೆ. ಪಿ.9745 ಅರಸೀಕೆರೆ ಮೂಲದ ಬಿಎಂಟಿಸಿ ಬಸ್ ಚಾಲಕನಿಂದ ನಾಲ್ವರಿಗೆ,ಇತ್ತೀಚೆಗೆ ಸೋಂಕು ಪತ್ತೆಯಾಗಿದ್ದ ನಗರದ ಬಡಾವಣೆ ಠಾಣೆಯ ಕಾನ್ಟೇಬಲ್ ತಂದೆ-ತಾಯಿಗೂ ಇಂದು ಸೋಂಕು ದೃಢಪಟ್ಟಿದೆ.