ಹಾಸನ: ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡಿ ನೇರ ಖರೀದಿ ಮಾಡುವಂತೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಸರ್ಕಾರವನ್ನು ಒತ್ತಾಯಿಸಿದರು.
ನಗರದ ಹಾಲಿನ ಡೇರಿ ಸಭಾಂಗಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು , ರೈತರನ್ನು ದಲ್ಲಾಳಿಗಳು ಶೋಷಣೆ ಮಾಡುತ್ತಿದ್ದು ಇದನ್ನು ತಪ್ಪಿಸಲು ಮೆಕ್ಕೆಜೋಳವನ್ನು ಸರ್ಕಾರ ನೇರವಾಗಿ ರೈತರಿಂದ ಖರೀದಿ ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ರೈತರು ೬ ಲಕ್ಷ ಟನ್ ಮೆಕ್ಕೆ ಜೋಳವನ್ನು ಬೆಳೆದಿದ್ದು , ರೈತರ ಹಿತದೃಷ್ಟಿಯಿಂದ ಇದನ್ನು ಖರೀದಿಸಿ ರೈತರ ಕೈ ಬಲಪಡಿಸಬೇಕು ಎಂದ ಅವರು ಕೊರೋನಾ ಲಾಕ್ ಡೌನ್ ಅವಧಿಯಲ್ಲಿ ಜಿಲ್ಲೆಯಲ್ಲಿ ವಿವಿಧ ತರಕಾರಿ ಬೆಳೆಗಳ ಒಟ್ಟು ಅಂದಾಜು ನಷ್ಟವು ೫೬೪೪,೦೮ಲಕ್ಣ ಹಾಗೂ ವಿವಿಧ ಹಣ್ಣಿನ ಬೆಳೆಗಳ ಒಟ್ಟು ಅಂದಾಜು ನಷ್ಟವು ೧೦೪,೯೫ ಲಕ್ಷಗಳು ಹಾಗೂ ಹೂವಿನ ಬೆಳೆಗಳ ಒಟ್ಟು ಅಂದಾಜು ನಷ್ಟವು ರೂ ೬೩೧,೧೩ ಲಕ್ಷ ನಷ್ಟವಾಗಿದೆ ತರಕಾರಿ,ಹಣ್ಣು ಮತ್ತು ಹೂ ಬೆಳೆ ಉತ್ಪನ್ನ ಒಟ್ಟು ಅಂದಾಜು ರೂ.೭೩೧೮.೧೬ ಲಕ್ಷ ನಷ್ಟವಾಗಿದೆ ಎಂದು ಮಾಹಿತಿ ನೀಡಿದರು.
ಸುಮಾರು ೧೮ ಕೋಟಿ ಯಷ್ಟು ಕಾಫಿ ಬೆಳೆ ನಷ್ಟವಾಗಿದ್ದು ಬೆಳೆಗಾರರು ಕಂಗಲಾಗಿದ್ದಾರೆ. ತೋಟಗಾರಿಕೆ ಬೆಳೆಯಲ್ಲೂ ಕೋಟ್ಯಾಂತರ ನಷ್ಟವಾಗಿದ್ದು ಇದಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.ರೈತರಿಗೆ ಇದುವರೆಗೆ ಸೂಕ್ತವಾದ ನ್ಯಾಯಯುತ ಪರಿಹಾರ ತಲುಪಿಲ್ಲ . ಈ ಬಗ್ಗೆ ಸರ್ಕಾರ ಗಮನಹರಿಸಿ ರೈತರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.