Wednesday, August 17, 2022

Latest Posts

ಹಾಸನ| ಸೀಲ್ ಡೌನ್ ಮಾಡಿದ್ದ ಮನೆಯಲ್ಲಿ ಕಳ್ಳತನ: ಆರೋಪಿ ಬಂಧನ, ಚಿನ್ನಾಭರಣ ವಶ

ಹಾಸನ: ಕೊರೊನಾ ಸಾವು ಸಂಭವಿಸಿದ ಮನೆಯಲ್ಲಿ ಸೀಲ್ ಡೌನ್ ಮಾಡಿದ್ದ ವೇಳೆ ನಗ-ನಾಣ್ಯ ದೋಚಿಸಿದ್ದ ಖದೀಮ
ವಾರದ ಅಂತರದಲ್ಲೇ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಅರಕಲಗೂಡು ತಾಲೂಕು ಹಾನಗಲ್ ಗ್ರಾಮದ ಹೆಚ್.ಆರ್.ವೆಂಕಟೇಶ್ ಬಂಧಿತ ಆರೋಪಿ.
ಅದೇ ಗ್ರಾಮದ ಲವ ಕುಮಾರ್ ಎಂಬವರು ಕೆಲ ದಿನಗಳ ಹಿಂದೆ ಕೊರೊನಾದಿಂದ ಮೃತಪಟ್ಟಿದ್ದರು. ನಂತರ ಮೃತರ ಮನೆ ಹಾಗೂ ಆ ಬೀದಿಯನ್ನು 14 ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿತ್ತು.
ಈ ಸಮಯವನ್ನೇ ಕಾದಿದ್ದ ವೆಂಕಟೇಶ್, ಆಗಸ್ಟ್ ೨೩ ರ ರಾತ್ರಿ ಹಿಂಬದಿಯಿಂದ ಮನೆ ಬಾಗಿಲು ಮುರಿದು ಒಳ ನುಗ್ಗಿ ೫೩೩ ಗ್ರಾಂ ತೂಕದ ಚಿನ್ನಾಭರಣ, ೨.೭೫೦ ಗ್ರಾಂ ಬೆಳ್ಳಿ ಆಭರಣ ಮತ್ತು ೬೦ ಸಾವಿರ ನಗದು ದೋಚಿ ಪರಾರಿಯಾಗಿದ್ದ. ಈ ಸಂಬಂಧ ಕೊಣನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಳುವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಆರ್. ಶ್ರೀನಿವಾಸ್ ಗೌಡ, ಹೊಳೆನರಸೀಪುರ ಡಿವೈಎಸ್ಪಿ ಲಕ್ಷ್ಮೇಗೌಡ, ಅರಕಲಗೂಡು ಸಿಪಿಐ ದೀಪಕ್ ಮತ್ತು ಕೊಣನೂರು ಪಿಎಸ್‌ಐ ಸಾಗರ್ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿದ್ದರು.
ಖಚಿತ ಸುಳಿವಿನ ಮೇರೆಗೆ ಆ.೩೦ ರಂದು ಸಂಜೆ ೪.೩೦ ಸುಮಾರಿಗೆ ಬಸವಾಪಟ್ಟಣದ ಬಸ್‌ಸ್ಟ್ಯಾಂಡ್ ನಲ್ಲಿ ನಿಂತಿದ್ದ ವೆಂಕಟೇಶನನ್ನು ವಶಕ್ಕೆ ಪಡೆದು ಕೊಣನೂರು ಪೊಲೀಸ್ ಠಾಣೆಗೆ ಕರೆತಂದು
ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಯಿತು. ಈ ವೇಳೆ ತಾನೇ ಕಳುವು ಮಾಡಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.
ಅಲ್ಲೇ ಕೆಲಸ ಮಾಡಿದ್ದ
ಆರೋಪಿ ವೆಂಕಟೇಶ್ ಬೇರೆ ಯಾರೂ ಅಲ್ಲ. ಕೆಲ ದಿನಗಳಿಂದ ಲವಕುಮಾರ್ ಎಂಬುವರ ಮನೆಯಲ್ಲೇ ಕೂಲಿ ಕೆಲಸ ಮಾಡಿಕೊಂಡಿದ್ದ. ಹೀಗಾಗಿ ಆತನಿಗೆ ಮನೆಯ ಎಲ್ಲಾ ಆಗು ಹೋಗು ತಿಳಿದಿತ್ತು. ಮನೆಯ ಮಾಲೀಕ ಕೊರೊನಾಗೆ ಬಲಿಯಾಗಿದ್ದನ್ನೇ ತನ್ನ ದುರುದ್ದೇಶಕ್ಕೆ ಬಳಸಿಕೊಂಡ ಖದೀಮ, ಸೂತಕದ ಮನೆಯನ್ನೇ ದೋಚಿದ್ದ.
ಇದೀಗ ಆರೋಪಿಯಿಂದ ೪೧೦ ಗ್ರಾಂ ಚಿನ್ನ, ೨.೭೫೦ ಗ್ರಾಂ ಬೆಳ್ಳಿ ಮತ್ತು ೨೦ ಸಾವಿರ ನಗದು ಸೇರಿ ಒಟ್ಟಾರೆ ೨೦ ಲಕ್ಷರೂ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು. ಬಹುಮುಖ್ಯ ಪ್ರಕರಣವನ್ನು ಕಡಿಮೆ ಅವಧಿಯಲ್ಲಿ ಬೇಧಿಸುವಲ್ಲಿ ಯಶಸ್ವಿಯಾಗಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಶ್ರೀನಿವಾಸ್ ಗೌಡ ಅಭಿನಂದಿಸಿದರು.
ಸುದ್ದಿಗೋಷ್ಟಿಯಲ್ಲಿ ಎಎಸ್ಪಿ ಬಿ.ಎನ್.ನಂದಿನಿ, ಹೊಳೆನರಸೀಪುರ ಡಿವೈಎಸ್ಪಿ ಲಕ್ಷ್ಮೇಗೌಡ ಮೊದಲಾದವರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!