ಮೈಸೂರು: ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಕಾಂಗ್ರೆಸ್ ಮುಖಂಡರು ಸರಕಾರಕ್ಕೆ ಸಹಕಾರ ನೀಡುತ್ತಿಲ್ಲ, ಹಾಸಿಗೆ ದಿಂಬನ್ನ ನಾವು ಇನ್ನೂ ಖರೀದಿಯೇ ಮಾಡಿಲ್ಲ. ಇನ್ನೂ ಅವ್ಯವಹಾರ ಎಲ್ಲಿ ಬಂತು ಎಂದು ಕಂದಾಯ ಸಚಿವ ಆರ್.ಅಶೋಕ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಕ್ಕೆ ತಿರುಗೇಟು ನೀಡಿದರು.
ಬುಧವಾರ ಮೈಸೂರಿನ ಸರಕಾರಿ ಅತಿಥಿಗೃಹದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಕಾಂಗ್ರೆಸ್ ಅನಗತ್ಯ ರಾಜಕೀಯ ಮಾಡುತ್ತಿದೆ. ಕೋವಿಡ್ ನಿಯಂತ್ರಣದಲ್ಲಿ ಕಾಂಗ್ರೆಸ್ ನೂರಕ್ಕೆ ನೂರರಷ್ಟು ಸಹಕಾರ ಕೊಡುತ್ತಿಲ್ಲ. ಕಾಂಗ್ರೆಸ್ನಿoದ ನಾವು ಈ ರೀತಿಯ ನಡವಳಿಕೆಯನ್ನ ನಿರೀಕ್ಷಿಸಿರಲಿಲ್ಲ ಎಂದರು.
ಕೊರೋನಾ ಕಿಟ್ ಖರೀದಿಯ ಲೆಕ್ಕಕೊಡಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯನವರು ಕೇಳಬೇಕಿಲ್ಲ. ಕೋವಿಡ್ ಲೆಕ್ಕವನ್ನ ನಾವೇ ಸಿದ್ದರಾಮಯ್ಯನವರ ಮನೆ ಬಾಗಿಲಿಗೆ ತಲುಪಿಸ್ತೀವಿ. ಪ್ರತಿಯೊಬ್ಬ ಸಾರ್ವಜನಿಕರಿಗೂ ಲೆಕ್ಕ ಸಿಗುತ್ತೆ. ಕೊವಿಡ್ ಲೆಕ್ಕದಲ್ಲಿ ಯಾವುದೇ ಅವ್ಯವಹಾರ ನಡೆಸಿಲ್ಲ ಎಂದರು. ರಾಜ್ಯದಲ್ಲಿ ಈವರೆಗೆ ೪೦೦ ರಿಂದ ೫೦೦ ಕೋಟಿ ಮಾತ್ರ ಖರ್ಚಾಗಿದೆ. ೨ ಸಾವಿರ ಕೋಟಿ ಭ್ರಷ್ಟಾಚಾರ ನಡೆಯಲು ಹೇಗೆ ಸಾಧ್ಯ. ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಪ್ರಶ್ನಿಸಿದರು.
ಭ್ರಷ್ಟಾಚಾರ ನಡೆಯೋದಕ್ಕೆ ಇದು ಕಾಂಗ್ರೆಸ್ ಸರ್ಕಾರ ಅಲ್ಲ. ಕಾಂಗ್ರೆಸ್ ಸರ್ಕಾರ ಇದ್ದಾಗ ಎಷ್ಟು ಭ್ರಷ್ಟಾಚಾರ ನಡೆದಿದೆ ಅಂತ ಇಡೀ ದೇಶಕ್ಕೆ ಗೊತ್ತು. ಕಳೆದ ಆರು ವರ್ಷಗಳಲ್ಲಿ ಪ್ರಧಾನಿ ಮೋದಿ ಯಾವುದೇ ಕಳಂಕ ಇಲ್ಲದೆ ಅಧಿಕಾರ ನಡೆಸುತ್ತಿದ್ದಾರೆ.
ಕೋವಿಡ್ ಸಮರದಲ್ಲಿ ವಿಪಕ್ಷಗಳು ಸಹಕಾರ ಕೊಡುತ್ತಿಲ್ಲ ಅಸಮಾಧಾನ ವ್ಯಕ್ತಪಡಿಸಿದರು.