Monday, July 4, 2022

Latest Posts

ಹಿಂದುಳಿದ ವರ್ಗಗಳ ಸಮುದಾಯ- ಸರ್ಕಾರದ ನಡುವೆ ಬಿಜೆಪಿ ಒಬಿಸಿ ಮೋರ್ಚಾ ಸಂಪರ್ಕ ಸೇತುವೆ: ನೆ.ಲ.ನರೇಂದ್ರ ಬಾಬು

ಹೊಸದಿಗಂತ ವರದಿ, ಚಿಕ್ಕಮಗಳೂರು:

ಹಿಂದುಳಿದ ವರ್ಗಗಳ ಸಮುದಾಯ ಹಾಗೂ ಸರ್ಕಾರದ ನಡುವೆ ಬಿಜೆಪಿ ಒಬಿಸಿ ಮೋರ್ಚಾ ಸಂಪರ್ಕ ಸೇತುವೆಯಾಗಿ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲಿದೆ ಎಂದು ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ನೆ.ಲ.ನರೇಂದ್ರ ಬಾಬು ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜನಸಂಖ್ಯೆಯಲ್ಲಿ ಶೇ.60 ಕ್ಕೂ ಹೆಚ್ಚು ಒಬಿಸಿ ಸಮುದಾಯಕ್ಕೆ ಸೇರಿದ ಜನರಿದ್ದಾರೆ. ತಳಮಟ್ಟದಿಂದ ಈ ಸಮುದಾಯವನ್ನು ಪಕ್ಷದ ಜೊತೆ ಜೋಡಿಸುವ ಜೊತೆಗೆ ಸರ್ಕಾದ ಸವಲತ್ತುಗಳನ್ನು ಅವರಿಗೆ ದೊರಕಿಸಿಕೊಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಿಂದುಳಿದ ವರ್ಗಗಳ ಸಮುದಾಯದ ಹಿತದೃಷ್ಠಿಯಿಂದ ಹಲವು ಕಾರ್ಯಕ್ರಮಗಳನ್ನು ರೂಪಿಸಿವೆ. ಪರಿಶಿಷ್ಠ ಜಾತಿ, ವರ್ಗಗಳ ಆಯೋಗಕ್ಕೆ ನೀಡಲಾಗಿದ್ದ ಸಾಂವಿಧಾನಿಕ ನೆಲೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಒಬಿಸಿ ಆಯೋಗಕ್ಕೂ ಕಲ್ಪಿಸಿಕೊಟ್ಟಿದ್ದಾರೆ. ಈಗ ಆರ್ಟಿಕಲ್ 340 ರ ಮೂಲಕ ಹಲವು ಸೌಲತ್ತುಗಳನ್ನು ನೀಡುವ ಜೊತೆಗೆ ಹಿಂದುಳಿದ ವರ್ಗದವರನ್ನು ಮುಖ್ಯವಾಹಿನಿಗೆ ತರಲು ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು.
ಒಬಿಸಿ ಅಭ್ಯರ್ಥಿಗಳಿಗೆ ಈ ಹಿಂದೆ 3 ಬಾರಿ ಮಾತ್ರ ಯುಪಿಎಸ್‍ಸಿ ಪರೀಕ್ಷೆ ಬರೆಯಲು ಅವಕಾಶವಿತ್ತು. ಈಗ ಅದನ್ನು 6 ಬಾರಿ ಬರೆಯಲು ಅವಕಾಶ ನೀಡಲಾಗಿದೆ. ಕೇಂದ್ರೀಯ ವಿದ್ಯಾಲಯ, ನವೋದಯ ಶಾಲೆಗಳು, ಸೈನಿಕ ಶಾಲೆಗಳಲ್ಲಿ ಒಬಿಸಿಗೆ ಮೀಸಲಾತಿ ಇರಲಿಲ್ಲ. ಬಿಜೆಪಿ ಸರ್ಕಾರ ಬಂದ ನಂತರ ಶೇ.27 ರಷ್ಟು ಮೀಸಲಾತಿ ಜಾರಿಗೆ ಬಂದಿದ್ದು, ಹಲವರಿಗೆ ಅವಕಶಾ ಸಿಗುತ್ತಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಸಹ ವಿರ್ಶವಕರ್ಮ, ಮಡಿವಾಳ, ಸವಿತಾ ಸಮಾಜದಂತಹ ಸಮುದಾಯಗಳಿಗೆ ಪ್ರೋತ್ಸಾಹದಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರ ಜೊತೆಗೆ ಪಕ್ಷವು ಒಬಿಸಿ ಮಂಡಲ ಅಧ್ಯಕ್ಷರಿಗೆ ಕೆಲವು ಜವಾಬ್ದಾರಿಗಳನ್ನು ವಹಿಸಿದೆ. ಹಾಸ್ಟೆಲ್‍ಗಳಿಗೆ ಭೇಟಿ ನೀಡುವುದು, ಅಲ್ಲಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ ಸರ್ಕಾರದ ಮಟ್ಟದಲ್ಲಿ ಪರಿಹಾರ ಕಲ್ಪಿಸುವಂತಹ ನೈತಿಕ ಹೊಣೆಗಾರಿಕೆಯನ್ನು ಹೊತ್ತುಕೊಳ್ಳುವುದು, ಸಮುದಾಯದ ಜೊತೆ ಚಿಂತನ ಮಂಥನ ಕಾರ್ಯಕ್ರಮಗಳನ್ನು ನಡೆಸಿ ಅಲ್ಲಿ ಬೆಳಕಿಗೆ ಬರುವ ಹಲವು ವಿಷಯಗಳ ಬಗ್ಗೆ ಗಮನ ಹರಿಸುವಂತಹ ಜವಾಬ್ದಾರಿ ನೀಡಲಾಗಿದೆ ಎಂದರು.
ಕೇಂದ್ರದ ಕೌಶಲ್ಯ ಭಾರತ ಯೋಜನೆಯಡಿ ಸುಮಾರು 450 ತರಬೇತಿ ಕಾರ್ಯಕ್ರಮಗಳಿವೆ ಅವುಗಳ ಬಗ್ಗೆ ಸಮುದಾಯಕ್ಕೆ ಮಾಹಿತಿ ನೀಡಿ ಮಾರುಕಟ್ಟೆ ಮತ್ತು ಬೇಡಿಕೆಗಳಿಗೆ ಅನುಗುಣವಾಗಿ ಅಗತ್ಯ ತರಬೇತಿ ಕೊಡಿಸಬೇಕಿದೆ ಎಂದರು.
ದೇವರಾಜ ಅರಸು ಅಭಿವೃದ್ಧಿ ನಿಗಮದಿಂದ ಬಹಳಷ್ಟು ವಿದ್ಯಾರ್ಥಿಗಳು ಶೈಕ್ಷಣಕ ಸಾಲ ಪಡೆದು ಪದವಿ ಗಳಿಸಿದ್ದರೂ ಉದ್ಯೋಗವಿಲ್ಲದೆ ಈಗ ಸಾಲಗಾರರಾಗಿದ್ದಾರೆ ಎನ್ನುವ ಬಗ್ಗೆ ಅವರ ಗಮನ ಸೆಳೆದಾಗ ಇಂತಹ ಸಮಸ್ಯೆಗಳನ್ನು ಪರಿಹರಿಸಲು ಕೌಶಲ್ಯಾಧಾರಿತ ತರಬೇತಿಗಳು ಸಹಕಾರಿಯಾಗುತ್ತವೆ. ಈ ನಿಟ್ಟಿನಲ್ಲಿ ಅವರಲ್ಲಿ ವಿಶ್ವಾಸ ಮೂಡಿಸಬೇಕು ಎನ್ನುವ ದೃಷ್ಠಿಯಿಂದಲೇ ಕೇಂದ್ರ ಸರ್ಕಾರ ಯೋಜನೆಯನ್ನು ಜಾರಿಗೆ ತಂದಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲೂ ಇದನ್ನು ಅಳವಡಿಸಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹಿಂದುಗಳಿದ ವರ್ಗಗಳ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್ ಬಾಬು, ಉಪಾಧ್ಯಕ್ಷ ಅಶೋಕ್ ಮೂರ್ತಿ, ಜಿಲ್ಲಾಧ್ಯಕ್ಷ ವೆನಿಲ್ಲಾ ಭಾಸ್ಕರ್, ಜಿಲ್ಲಾ ಬಿಜೆಪಿ ವಕ್ತಾರ ವರಸಿದ್ದಿ ವೇಣುಗೋಪಾಲ್, ಮಾಧ್ಯಮ ಪ್ರಮುಖ್ ಡಿ.ಸುಧೀರ್ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss