Monday, August 15, 2022

Latest Posts

ಹಿಂದು ಮುನ್ನಣಿ ಸ್ಥಾಪಕ ರಾಮಗೋಪಾಲನ್ ಇನ್ನಿಲ್ಲ

ಚೆನ್ನೈ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕ್ ಹಾಗೂ ತಮಿಳ್ನಾಡಿನ ಹಿಂದು ಮುನ್ನಣಿ ಸಂಸ್ಥಾಪಕ , ಹಿಂದುಗಳ ಉನ್ನತಿಗಾಗಿ ಜೀವನ ಮುಡಿಪಾಗಿಟ್ಟಿದ್ದ ರಾಮ ಗೋಪಾಲನ್ ಇನ್ನಿಲ್ಲ. ಅವರು ಕೋವಿಡ್-೧೯ಕ್ಕೆ ಬಲಿಯಾಗಿದ್ದಾರೆ. ಅವರಿಗೆ ೯೪ವರ್ಷ ಪ್ರಾಯವಾಗಿತ್ತು.
ಅವರು ಸೆ.೨೬ರಂದು ನ್ಯುಮೋನಿಯಾಕ್ಕೊಳಗಾಗಿ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು.ಮೊದಲ ಪರೀಕ್ಷೆಯಲ್ಲಿ ಅವರಿಗೆ ಕೊರೋನಾ ಸೋಂಕು ಇಲ್ಲವೆಂದು ಕಂಡುಬಂದಿದ್ದರೆ, ಎರಡನೇ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿತ್ತು.ಕಳೆದ ಎರಡು ದಿನಗಳಿಂದ ಅವರನ್ನು ಉಳಿಸಲು ವೈದ್ಯರು ತಮ್ಮೆಲ್ಲ ಪ್ರಯತ್ನಗಳನ್ನು ನಡೆಸಿದರೂ ಯಶಸ್ವಿಯಾಗಲಿಲ್ಲ ಎಂಬುದಾಗಿ ರಾಜ್ಯ ಹಿಂದು ಮುನ್ನಣಿ ನೇತಾರ ಕಡೇಶ್ವರ ಸಿ.ಸುಬ್ರಹ್ಮಣ್ಯಮ್ ಹೇಳಿದ್ದಾರೆ. ಬುಧವಾರ ಸಂಜೆ ಅವರು ಕೊನೆಯುಸಿರೆಳೆದರು.
೧೯೨೭ ಸೆ.೧೯ರಂದು ತಮಿಳ್ನಾಡಿನ ತಾಂಜಾವೂರು ಜಿಲ್ಲೆಯ ಸಿರ್ಕಾಝಿಯಲ್ಲಿ ಜನಿಸಿದ್ದ ಅವರು, ಎಎಂಐಇ ಡಿಪ್ಲೊಮಾ ಪೂರೈಸಿದ್ದು, ತಮಿಳ್ನಾಡಿನ ವಿದ್ಯುತ್ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದರು. ಆದರೆ ಅನಂತರ ಉದ್ಯೋಗ ತ್ಯಜಿಸಿ ೧೯೪೫ರಿಂದ ಆರೆಸ್ಸೆಸ್ ಪ್ರಚಾರಕರಾಗಿ ತಮ್ಮ ಜೀವನವನ್ನು ಪೂರ್ತಿಯಾಗಿ ಹಿಂದು ಸಮಾಜ ಮತ್ತು ರಾಷ್ಟ್ರಸೇವೆಗೆ ಸಮರ್ಪಿಸಿಕೊಂಡರು.
ತಮಿಳ್ನಾಡಿನಲ್ಲಿ ಹಿಂದುಗಳ ದುಸ್ಥಿತಿಯನ್ನು ನಿವಾರಿಸುವುದಕ್ಕಾಗಿ ಸಂಘಪ್ರೇರಣೆಯಂತೆ ಹಿಂದು ಮುನ್ನಣಿ ಸ್ಥಾಪಿಸಿದ ಅವರು ರಾಜ್ಯದಲ್ಲಿ ಸಾರ್ವಜನಿಕ ಶ್ರೀಗಣೇಶೋತ್ಸವವನ್ನು ಜನಪ್ರಿಯಗೊಳಿಸಿದ್ದರು. ಮದುರೈ ರೈಲ್ವೆ ನಿಲ್ದಾಣದಲ್ಲಿ ೧೯೮೪ರಲ್ಲಿ ಮತಾಂಧ ದುಷ್ಕರ್ಮಿಗಳು ಅವರ ಹತ್ಯೆಗೆ ಯತ್ನಿಸಿ ಅವರ ಕುತ್ತಿಗೆ ಮತ್ತು ತಲೆಗೆ ಅನೇಕ ಮಾರಣಾಂತಿಕ ಗಾಯಗಳಾದರೂ ಹಿಂದು ಸಮಾಜದ ರಕ್ಷಣೆಗಾಗಿ ತಮ್ಮ ಹೋರಾಟವನ್ನು ಅವರು ನಿಲ್ಲಿಸಲಿಲ್ಲ.ಆ ಬಳಿಕ ತಮ್ಮ ತಲೆಯಲ್ಲಿನ ಗಾಯಗಳ ಕಾರಣದಿಂದ ಕೇಸರಿ ಟೋಪಿ ಧರಿಸುತ್ತಿದ್ದರು.
ಅವರಿಗೆ ತಮಿಳ್ನಾಡಿನ ಜನತೆ ಗೌರವಪೂರ್ಣವಾಗಿ ವೀರ ತುರವಿ (ವೀರ ಸಂತ)ಎಂದೇ ಕರೆಯುತ್ತಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿಯೂ ಪಾಲ್ಗೊಂಡಿದ್ದ ಅವರು ಹಿಂದುಗಳ ಮತಾಂತರ ಮತ್ತು ಇಸ್ಲಾಮಿಕ್ ತೀವ್ರವಾದಿಗಳ ಅಟ್ಟಹಾಸಕ್ಕೆ ತಡೆಹಾಕಿದ್ದರು. ಡಿಎಂಕೆ ಅಧ್ಯಕ್ಷ ಎಂ.ಕರುಣಾನಿ ಅವರು ಕೂಡಾ ರಾಮಗೋಪಾಲನ್ ಬಗ್ಗೆ ವಿಶೇಷ ಗೌರವಾದರಗಳನ್ನು ಹೊಂದಿದ್ದರು.
ಗಣ್ಯರ ಕಂಬನಿ
ಅವರ ನಿಧನಕ್ಕೆ ತಮಿಳ್ನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್, ಮುಖ್ಯಮಂತ್ರಿ ಕೆ.ಪಳನಿಸ್ವಾಮಿ, ಉಪಮುಖ್ಯಮಂತ್ರಿ ಒ.ಪನೀರ್ ಸೆಲ್ವಮ್, ಬಿಜೆಪಿ ನಾಯಕ ಎಲ್.ಮುರುಗನ್ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ , ಪಿಎಂಕೆ ನಾಯಕ ಡಾ.ಎಸ್.ರಾಮದಾಸ್, ಎಎಂಎಮ್‌ಕೆ ಸ್ಥಾಪಕ ಟಿಟಿವಿ ದಿನಕರನ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ವನತಿ ಶ್ರೀನಿವಾಸನ್ ಮತ್ತಿತರ ನಾಯಕರು ಕಂಬನಿ ಮಿಡಿದಿದ್ದಾರೆ.ಪುರೋಹಿತ್ ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದ ರಾಮಗೋಪಾಲನ್ ಅವರ ನಿಧನ ತುಂಬಲಾರದ ನಷ್ಟ ಎಂದಿದ್ದರೆ, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಸೈದ್ಧಾಂತಿಕ ಭಿನ್ನಾಭಿಪ್ರಾಯ ಇದ್ದರೂ ತನ್ನ ತಂದೆ ಕರುಣಾನಿ ಮತ್ತು ರಾಮಗೋಪಾಲನ್ ನಡುವೆ ಅತ್ಯಂತ ಆತ್ಮೀಯ ಬಾಂಧವ್ಯವಿತ್ತು ಎಂದು ಸ್ಟಾಲಿನ್ ಹೇಳಿದ್ದಾರೆ.ತೆಲಂಗಾಣ ರಾಜ್ಯಪಾಲೆ ತಮಿಳಿಸಾಯಿ ಸೌಂದರರಾಜನ್ ಕೂಡಾ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss