Thursday, July 7, 2022

Latest Posts

ಹಿರಿಯರ ಸ್ವರ್ಗ ಮೈಸೂರಿನಲ್ಲಿಯೇ ಅತಿ ಹೆಚ್ಚಾಗಿ ಕೊರೋನಾ ಸೋಂಕಿಗೆ ವೃದ್ಧರು ಬಲಿ!

ಎಸ್.ಮಹೇಶ್
ಮೈಸೂರು: ಹಿರಿಯರು, ನಿವೃತ್ತರ ಸ್ವರ್ಗ, ಸುರಕ್ಷತೆಯ ತಾಣ ಎಂದು ಕರೆಯಿಸಿಕೊಳ್ಳುತ್ತಿರುವ ಅರಮನೆ ನಗರಿ ಮೈಸೂರಿನಲ್ಲಿಯೇ ಕೊರೋನಾ ಸೋಂಕಿನಿoದ ವೃದ್ಧರೇ ಅತಿ ಹೆಚ್ಚಾಗಿ ಸಾವಿಗೀಡಾಗುತ್ತಿದ್ದಾರೆ. ಇಲ್ಲಿಯ ತನಕ ಬಲಿಯಾದವ ೩೧ ಜನರಲ್ಲಿ ೩೭ ವರ್ಷ ವಯಸ್ಸಿನ ವ್ಯಕ್ತಿಯೊಬ್ಬರನ್ನು ಹೊರತುಪಡಿಸಿದರೆ, ಉಳಿದವರೆಲ್ಲಾ ೫೦ ವರ್ಷ ಮೇಲ್ಪಟ್ಟವರೇ, ಅದರಲ್ಲೂ ಸಾವಿಗೀಡಾಗುತ್ತಿರುವವರಲ್ಲಿ ೬೦ ವರ್ಷ ವಯಸ್ಸು ಮೇಲ್ಪಟ್ಟವರೇ. ಆತಂಕದ ಸಂಗತಿ ಎಂದರೆ ಕೊರೋನಾಗೆ ಬಲಿಯಾದ ವೃದ್ಧರಲ್ಲಿ ಗ್ರಾಮೀಣ ಪ್ರದೇಶದವರೂ ಕೂಡ ಹೆಚ್ಚಾಗಿದ್ದಾರೆ.
ವೃದ್ಧರ ಅತಿ ಹೆಚ್ಚಿನ ಸಾವಿಗೆ ಕಾರಣವೇನು  
ಕೊರೋನಾ ಮೈಸೂರಿನಲ್ಲಿ ಹರಡುವ ಆರಂಭಿಕ ಹಂತದಲ್ಲಿ ಸೋಂಕಿತರಾದವರಲ್ಲಿ ಅತಿ ಹೆಚ್ಚಾಗಿ ೨೦ರಿಂದ ೪೦ ವರ್ಷ ವಯಸ್ಸಿನ ಆಸುಪಾಸಿನಲ್ಲಿದ್ದವರು. ಅವರೆಲ್ಲಾ ನಂಜನಗೂಡಿನ ಜುಬಿಲಿಯಂಟ್ ಔಷಧ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಸೋಂಕಿತ ಕಾರ್ಖಾನೆಯ ಕಾರ್ಮಿಕರು ತಮ್ಮೊಂದಿಗೆ ಸೋಂಕನ್ನು ತಮ್ಮ ಕುಟುಂಬದವರಿಗೂ ತಂದು ಅಂಟಿಸಿದ್ದರು. ಹೀಗಾಗಿ ಮೈಸೂರಿನ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ ಒಟ್ಟು ೯೫ ಮಂದಿಯಲ್ಲಿ ದಾಖಲಾಗಿದ್ದ ವೃದ್ಧರ ಸಂಖ್ಯೆ ಕೇವಲ ೮ . ಲಾಕ್‌ಡೌನ್ ಸಡಿಲಿಕೆ ಮಾಡುವ ತನಕವೂ ಕೊರೋನಾ ಸೋಂಕಿಗೆ ತುತ್ತಾಗುತ್ತಿದ್ದ ವೃದ್ಧರ ಸಂಖ್ಯೆ ಏರಿಕೆಯಾಗಿರಲಿಲ್ಲ. ಆ ಮಟ್ಟಿಗೆ ಮೈಸೂರು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವೃದ್ಧರು ಸುರಕ್ಷಿತವಾಗಿದ್ದರು.
ಆದರೆ ಯಾವಾಗ ಲಾಕ್ ಡೌನ್ ಸಡಲಿಕೆಯಾಯಿತೋ ಆಗ ಸೋಂಕಿಗೆ ಒಳಗಾಗುವ ವೃದ್ಧರ ಸಂಖ್ಯೆಯೂ ಗಣನೀಯವಾಗಿ ಏರತೊಡಗಿತು. ಇದಕ್ಕೆ ಪ್ರಮುಖ ಕಾರಣವೆಂದರೆ, ಬೆಂಗಳೂರು, ಮಹಾರಾ ರಾಷ್ಟ್ರ ,ರಾಜಸ್ತಾನ, ತಮಿಳುನಾಡು, ಆಂಧ್ರಪ್ರದೇಶಗಳಿoದ ಮೈಸೂರಿಗೆ ಬಂದ ಜನರು, ತಮ್ಮೊಂದಿಗೆ ಕೊರೋನಾ ಸೋಂಕನ್ನು ಹೊತ್ತು ತಂದಿದ್ದರು. ಮುಂಬೈನಿoದ ಮೈಸೂರಿನ ಕೆ.ಆರ್.ನಗರ, ತಿ.ನರಸೀಪುರ, ಹುಣಸೂರು, ಪಿರಿಯಾಪಟ್ಟಣ ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ವಲಸೆ ಬಂದ ಕಾರ್ಮಿಕರು, ತಮ್ಮೊಂದಿಗೆ ತಂದಿದ್ದ ಕೊರೋನಾ ವೈರಸ್‌ನ್ನು ಕುಟುಂದವರಿಗೂ, ಗ್ರಾಮಸ್ಥರಿಗೂ ಹರಡಿಬಿಟ್ಟರು. ಹೀಗಾಗಿ ಮೈಸೂರಿನಲ್ಲಿ ನಿಯಂತ್ರಣದಲ್ಲಿದ್ದ ಕೊರೋನಾ ಸೋಂಕು ಕೈಮೀರಿ ಹೋಯಿತು. ಏಕಾಏಕಿ ಸೋಂಕಿತರ ಸಂಖ್ಯೆ ಅರ್ಧಶತಕದ ಗಡಿದಾಟಿ ಈಗ ಶತಕದ ಅಂಚಿಗೆ ಬರುವ ಪ್ರಯತ್ನ ಮಾಡುತ್ತಿದೆ.
ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದವರೇ ಹೆಚ್ಚಾಗಿ ಸಾವು
ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ಬಲಿಯಾದ ವೃದ್ಧರಲ್ಲಿ ಬಹುತೇಕರು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದವರು. ಅಸ್ತಮಾ, ಮಧುಮೇಹ, ಹೃದಯಾ ಸಂಬoಧಿ, ಕಿಡ್ನಿ ಸಂಬoಧಿ ಸೇರಿದಂತೆ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದವರು. ಅಂತಹರಿಗೆ ಕೊರೋನಾ ಸೋಂಕು ಬೇಗ ಅಂಟಿಕೊoಡು ಅವರನ್ನು ಬಲಿ ತೆಗೆದುಕೊಂಡಿದೆ. ಇವರ ಪ್ರವಾಸದ ಹಿನ್ನಲೆಯೇ ಇಲ್ಲ. ಹೀಗಿದ್ದರೂ ಕೂಡ ಕುಟುಂಬದ ಸದಸ್ಯರಲ್ಲಿ ಯಾರೋ ಒಬ್ಬರು, ಇಲ್ಲವೇ ತಮ್ಮ ಸಂಪರ್ಕಕ್ಕೆ ಬಂದಿದ್ದ ಸೋಂಕಿತರಿoದ ಇವರು ಸೋಂಕು ಅಂಟಿಸಿಕೊoಡು, ತಮ್ಮ ಜೀವವನ್ನು ತೆತ್ತಿದ್ದಾರೆ. ಇದು ಗ್ರಾಮೀಣ ಪ್ರದೇಶದ ಸೋಂಕಿಗೆ ಬಲಿಯಾದರ ಸಾವಿನ ಹಿನ್ನಲೆಯಾದರೆ, ಇನ್ನು ಮೈಸೂರು ನಗರದಲ್ಲಿ ಸೋಂಕಿಗೆ ಬಲಿಯಾದ ವೃದ್ಧರದ್ದು ಬೇರೆ ಕಥೆ. ಈ ಜನರಿಗೆ ಕೊರೋನಾ ಸೋಂಕಿನ ಬಗ್ಗೆ ಅರಿವಿತ್ತು. ಆದರೂ ಕೂಡ ನಿರ್ಲಕ್ಸ್ಯ ವಹಿಸಿದ್ದರು. ತಮ್ಮ ದಿನ ನಿತ್ಯ ರೂಢಿಸಿಕೊಂಡಿದ್ದ ಗೆಳಯರೊಂದಿಗೆ ಪಾರ್ಕ್ ಮುಂತಾದ ಕಡೆಗಳಲ್ಲಿ ಹರಟೆ ಹೊಡೆಯುವುದು, ವ್ಯಾಕಿಂಗ್ ಎಂದು ಗುಂಪು, ಗುಂಪಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ, ಮಾಸ್ಕ್ಗಳನ್ನೂ ಧರಿಸದೆ ಎಲ್ಲೆಂದರಲ್ಲಿ ಓಡಾಡುತ್ತಿದ್ದರು. ತರಕಾರಿ ಕೊಳ್ಳುವುದರಿಂದ ಹಿಡಿದು, ಮನೆಗೆ ಬೇಕಾದಂತಹ ಪ್ರತಿಯೊಂದು ವಸ್ತುವನ್ನು ಮನೆಯ ಹಿರಿಯರೇ ಈಗಲೂ ಕೂಡ ಮಾರುಕಟ್ಟೆ, ದಿನಸಿ ಅಂಗಡಿಗಳು ಮುಂತಾದ ಸ್ಥಳಗಳಿಗೆ ಬಂದು ಖರೀದಿಸಿಕೊಂಡು ಹೋಗುತ್ತಿದ್ದಾರೆ. ಆದರೆ ಮಾರುಕಟ್ಟೆಗಳಲ್ಲಿ, ಅಂಗಡಿ ಮುಗ್ಗಟ್ಟುಗಳಲ್ಲಿ ಯಾರೂ ಕೂಡ ಸರಿಯಾಗಿ ಮಾಸ್ಕ್ಗಳನ್ನು ಹಾಕುತ್ತಿಲ್ಲ, ಅಂಗಡಿಯವರು ಕೂಡ ಗ್ರಾಹಕರ ನಡುವೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಮಾಡುತ್ತಿಲ್ಲ, ಸೋಂಕು ಹರಡುವಿಕೆಯ ಮೊದಲ ಹಂತದಲ್ಲಿ ವರ್ತಕರು ಬಹಳ ಕಟ್ಟು ನಿಟ್ಟಾಗಿ ಗ್ರಾಹಕರೊಂದಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಮಾಡುತ್ತಿದ್ದರು. ಅದಕ್ಕಾಗಿ ವೃತ್ತಗಳನ್ನು ನಿರ್ಮಿಸಿ, ಅಲ್ಲಿಯೇ ನಿಲ್ಲಲು ಹೇಳುತ್ತಿದ್ದರು. ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ಬಂದವರಿಗೆ ಮಾತ್ರ ಅವರಿಗೆ ಬೇಕಾದ ವಸ್ತು, ಪದಾರ್ಥಗಳನ್ನು ನೀಡುತ್ತಿದ್ದರು. ಈಗ ಅಂತಹ ಕಟ್ಟು ನಿಟ್ಟಿನ ನಿಯಮಗಳನ್ನು ಯಾರೂ ಕೂಡ ಪಾಲಿಸುತ್ತಿಲ್ಲ. ಹೀಗಾಗಿ ವೃದ್ಧರು ಕೊರೋನಾ ಸೋಂಕಿಗೀಡಾಗುತ್ತಿದ್ದಾರೆ.
ಸಕಾಲಕ್ಕೆ ಚಿಕಿತ್ಸೆ ಪಡೆಯಲು ನಿರ್ಲಕ್ಸ್ಯ
ಮೈಸೂರಿನಲ್ಲಿ ಕೊರೋನಾ ಸೋಂಕಿತರು ಅತಿ ಹೆಚ್ಚಾಗಿ ಸಾವಿಗೀಡಾಗಲು ಪ್ರಮುಖ ಕಾರಣವೆಂದರೆ, ಕೊರೋನಾ ಸೋಂಕು ತಗುಲಿದ್ದರೂ ಸಕಾಲಕ್ಕೆ ಚಿಕಿತ್ಸೆ ಪಡೆಯಲು ನಿರ್ಲಕ್ಸ್ಯ ವಹಿಸುತ್ತಿರುವುದು. ತಮಗೆ ಬೇರೆ, ಬೇರೆ ಕಾಯಿಲೆಗಳಿದ್ದರೂ, ಕೊರೋನಾ ಸೋಂಕು ವಕ್ಕರಿಸಿದ್ದರೂ, ಅದಕ್ಕೆ ಚಿಕಿತ್ಸೆ ಪಡೆಯಲು ಖಾಸಗಿ ಆಸ್ಪತ್ರೆಗಳಿಗೆಂದು ಹೋದರೆ ಲಕ್ಷಾಂತರ ರೂ ಖರ್ಚಾಗುತ್ತದೆ. ಅಲ್ಲದೆ ಬದುಕಿ ಬರುವುದು ಕೂಡ ಡೌಟು. ಸುಮ್ಮನೆ ಏಕೆ ಮನೆಯವರಿಗೆ ತೊಂದರೆ ಕೊಡಬೇಕು ಎಂಬ ಉದಾಸೀನವೂ ಹಿರಿಯರು ಕೊರೋನಾಗೆ ಅತಿ ಹೆಚ್ಚಾಗಿ ಬಲಿಯಾಗಲು ಕಾರಣವಾಗುತ್ತಿದೆ.
ಬದಲಾದ ವಾತಾವರಣವೇ ಜೀವಕ್ಕೆ ಮಾರಕವಾಯಿತು   
ಮೈಸೂರಿನಲ್ಲಿ ಹಠಾತ್ತನೇ ಬದಲಾಗಿರುವ ವಾತಾವರಣವೂ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗಲು ಮತ್ತೊಂದು ಪ್ರಮುಖ ಕಾರಣವಾಗುತ್ತಿದೆ. ಲೌಕ್‌ಡೌನ್ ಸಡಿಲಿಕೆಯ ವೇಳೆ ಮೈಸೂರು ನಗರ ಹಾಗೂ ಜಿಲ್ಲೆಯಲ್ಲಿ ಸುಡು ಬಿಸಿಲಿನ ವಾತಾವರಣವಿತ್ತು. ಆದರೆ ಈಗ ಮೈ ನಡುಗಿಸುವ ಥಂಡೀ, ಥಂಡೀ ವಾತಾವರಣವಿದೆ. ಇದರಿಂದಾಗಿ ಅಸ್ತಮಾ, ನ್ಯೂಮೇನಿಯಾ ಮುಂತಾದ ಕಾಯಿಲೆಗಳಿಂದ ಬಳಲುತ್ತಿರುವ ವೃದ್ಧರಿಗೆ ಕಾಯಿಲೆ ಉಲ್ಬಣಿಸುತ್ತಿದೆ. ಅದರೊಂದಿಗೆ ಮಹಾಮಾರಿ ಕೊರೋನಾ ಅಂಟುತ್ತಿರುವುದರಿoದ ಕಾಯಿಲೆಗಳು ಗಂಭೀರ ಸ್ಥಿತಿಗೆ ತಲುಪಿ, ತೀವ್ರ ಉಸಿರಾಟದ ಸಮಸ್ಯೆಯಿಂದ ಉಸಿರು ಚೆಲ್ಲುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss