ಹೊಸ ದಿಗಂತ ವರದಿ, ಮಂಗಳೂರು:
ಹಿರಿಯ ಪತ್ರಕರ್ತ, ಬರಹಗಾರ ರವಿ ಬೆಳಗೆರೆ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಸಂತಾಪ ವ್ಯಕ್ತಪಡಿಸಿದ್ದಾರೆ.
ರವಿ ಬೆಳಗೆರೆ ಅವರ ಹಠಾತ್ ನಿಧನ ಕನ್ನಡ ಸಾಹಿತ್ಯ ಲೋಕಕ್ಕೆ ಆಘಾತ ತಂದಿದೆ. ಅತ್ಯಪೂರ್ವ ಮಾಹಿತಿ ಹಾಗೂ ಗಮನ ಸೆಳೆಯುವ ಶೈಲಿಯ ಕೃತಿಗಳ ಮೂಲಕ ಜನಪ್ರಿಯತೆ ಗಳಿಸಿದ ರವಿ ಬೆಳಗೆರೆ ಅಪಾರ ಓದುಗ ಬಳಗವನ್ನು ಹೊಂದಿದ್ದರು. ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವು ಪುರಸ್ಕಾರಗಳಿಗೆ ಪಾತ್ರರಾಗಿದ್ದ ಬೆಳಗೆರೆ ರಾಷ್ಟ್ರೀಯವಾದಿ ಚಿಂತಕರಾಗಿದ್ದರು. ಯುವ ಬರಹಗಾರರಿಗೆ ಸ್ಪೂರ್ತಿಯಾಗಿದ್ದ ಬೆಳಗೆರೆ ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸುವ ಮೂಲಕ ಸಾಹಿತ್ಯ ಕ್ಷೇತ್ರದ ಜತೆಗೆ ಶಿಕ್ಷಣ ಕ್ಷೇತ್ರಕ್ಕೂ ತಮ್ಮಕೊಡುಗೆ ನೀಡಿದ್ದಾರೆ. ಅವರ ಕುಟುಂಬದವರಿಗೆ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ನಳಿನ್ ಹೇಳಿದ್ದಾರೆ.