ಹೀಗಾದರೆ ನಮ್ಮನ್ನು ರಕ್ಷಿಸಲು ಭಗವಂತನಿಂದಲೂ ಸಾಧ್ಯವಿಲ್ಲ!

0
61

ಮಡಿಕೇರಿ: ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರಕಾರ ದೇಶಾದ್ಯಂತ ಮಾ.೧೪ರವರೆಗೆ ಲಾಕ್‌ಡೌನ್ ಘೋಷಿಸಿದೆ. ದೇಶದ ಜನತೆಯ ಆರೋಗ್ಯದ ದೃಷ್ಟಿಯಿಂದ ಪ್ರಧಾನಿ ನರೇಂದ್ರಮೋದಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ದೇಶದ ಜನತೆ ೨೧ದಿನಗಳ ಕಾಲ ಮನೆಯಿಂದ ಹೊರಬರದೇ ಇದ್ದಲ್ಲಿ ಈ ಮಾರಕ ಸೋಂಕು ಹರಡುವುದನ್ನು ತಡೆಯಬಹುದು ಎಂಬ ಸದುದ್ದೇಶದಿಂದ ಸರಕಾರ ಈ ಕ್ರಮ ಕೈಗೊಂಡಿದೆ.
ಆದರೆ ವಿದ್ಯಾಂತರು, ಬುದ್ಧಿವಂತರು, ಪ್ರಜ್ಞಾವಂತರ ಜಿಲ್ಲೆ ಎಂದೇ ಖ್ಯಾತಿ ಪಡೆದಿರುವ ಕೊಡಗಿನ ಜನತೆ ಸೋಮವಾರ ನಡೆದುಕೊಂಡ ರೀತಿ ಗಮನಿಸಿದರೆ, ನಮ್ಮನ್ನು ಪ್ರಧಾನಿಯಲ್ಲ, ದೇವರು ಬಂದರೂ ಕೂಡಾ ರಕ್ಷಿಸಲು ಸಾಧ್ಯವಿಲ್ಲ ಎಂಬ ಆತಂಕ ತಲೆದೋರಿದೆ.
ಮಾ.೨೨ರಂದು ಜನತಾ ಕರ್ಫ್ಯೂ ಆಚರಿಸುವಂತೆ ಪ್ರಧಾನಿ ನೀಡಿದ್ದ ಕರೆಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆ ಬಳಿಕ ಕೊರೋನಾ ಸೋಂಕು ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಹೇರಲಾಗಿರುವ ನಿಷೇಧಾಜ್ಞೆಯ ನಡುವೆಯೂ ಜಿಲ್ಲಾಡಳಿತ ಕೊಡಗಿನಲ್ಲಿ ಪ್ರತೀದಿನ ಮಧ್ಯಾಹ್ನ ೧೨ರಿಂದ ೨ ಗಂಟೆಯವರೆಗೆ ತರಕಾರಿ, ದಿನಸಿ ಅಂಗಡಿಗಳನ್ನು ತೆರೆಯಲು ಹಾಗೂ ಅವುಗಳನ್ನು ಖರೀದಿಸಲು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿತ್ತು. ಈ ಅವಧಿಯನ್ನು ಹೊರತುಪಡಿಸಿ ಇತರ ಸಮಯದಲ್ಲಿ ಮನೆಯಿಂದ ಹೊರಬಂದವರ ವಿರುದ್ಧ ಪೊಲೀಸರು ನಿರ್ದಾಕ್ಷಿಣ್ಯ ಕ್ರಮವನ್ನೂ ಕೈಗೊಂಡು ಜಿಲ್ಲೆಯಲ್ಲಿ ಒಂದು ಹಂತದ ಶಿಸ್ತು ಮನೆ ಮಾಡಿತ್ತು.
ಆದರೆ ಆ ಬಳಿಕ ಜಿಲ್ಲಾಡಳಿತ ಪ್ರತೀದಿನ ಬೆಳಗ್ಗೆ ೮ರಿಂದ ಮಧ್ಯಾಹ್ನ ೧೨ರವರೆಗೆ ಅಂಗಡಿಗಳನ್ನು ತೆರೆಯಲು ಹಾಗೂ ಸಾರ್ವಜನಿಕರಿಗೆ ಸಾಮಾಗ್ರಿಗಳನ್ನು ಖರೀದಿಸಲು ಅವಕಾಶ ಕಲ್ಪಿಸಿತ್ತು. ಇದು ಜನರಲ್ಲಿ ಶಿಸ್ತು ಮಾಯವಾಗಿ ಅಶಿಸ್ತಿಗೆ ದಾರಿ ಮಾಡಿಕೊಟ್ಟಿದೆ.  ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾ.೧೪ರವರೆಗೆ ದೇಶಾದ್ಯಂತ ಲಾಕ್‌ಡೌನ್‌ಗೆ ಕರೆ ನೀಡಿದ್ದರು. ಸಾರ್ವಜನಿಕರಿಗೆ ಮುಂದಿನ ೨೧ ದಿನಗಳಿಗೆ ಬೇಕಾದ ಅಗತ್ಯವಸ್ತುಗಳನ್ನು ಖರೀದಿಸಿ ದಾಸ್ತಾನು ಮಾಡಿಕೊಳ್ಳಲು ಈ ನಡುವಿನ ೫ ದಿನಗಳಲ್ಲಿ ಸಾಕಷ್ಟು ಅವಕಾಶಗಳಿತ್ತು. ಆದರೆ…
ಆದರೆ ವಿದ್ಯಾವಂತರು, ಬುದ್ಧಿವಂತರು, ಪ್ರಜ್ಞಾವಂತರ ಜಿಲ್ಲೆ ಎಂದು ಕರೆಸಿಕೊಂಡಿರುವ ಕೊಡಗಿನ ಜನತೆ ತಮ್ಮನ್ನೇ ತಾವು ಮರೆತಂತೆ ವರ್ತಿಸುತ್ತಿದ್ದಾರೆ. ಕೊಡಗಿನ ಸುತ್ತಮುತ್ತ ಇರುವ ಮೈಸೂರು, ಕಾಸರಗೋಡು, ಕಣ್ಣೂರು, ದಕ್ಷಿಣ ಕನ್ನಡ ಮುಂತಾದ ಜಿಲ್ಲೆಗಳಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಅಧಿಕವಾಗುತ್ತಿದ್ದರೂ, ಕೊಡಗಿನ ಜನತೆ ಬೀದಿಗೆ ಬರುವುದನ್ನು ಮಾತ್ರ ಇನ್ನೂ ನಿಲ್ಲಿಸಿಲ್ಲ.
ವಾರದಲ್ಲಿ ಮೂರು ದಿನ ನಿಷೇಧಾಜ್ಞೆಯನ್ನು ಸಡಿಲಿಸುವುದಾಗಿ ಜಿಲ್ಲಾಡಳಿತ ಘೋಷಿಸುತ್ತಿದ್ದಂತೆ ಕೊಡಗಿನ ಜನತೆ ಮತ್ತೆ ಬೀದಿಗೆ ಬಂದು ಸಾಮಾಗ್ರಿಗಳ ಖರೀದಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಖರೀದಿ ಸಂದರ್ಭ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜಿಲ್ಲಾಡಳಿತ, ಪೊಲೀಸರು ನೂರಾರು ಬಾರಿ ಮನವಿ ಮಾಡಿಕೊಳ್ಳುತ್ತಿದ್ದರೂ, ಜನತೆ ಇದಾವುದನ್ನೂ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ತಮ್ಮ ಜೀವಕ್ಕಿಂತಲೂ ಖರೀದಿಯೇ ಮುಖ್ಯ ಎಂಬಂತೆ ಜನತೆ ವರ್ತಿಸುತ್ತಿದ್ದಾರೆ. ಪ್ರತೀ ಬಾರಿ ನಿಷೇಧಾಜ್ಞೆ ಸಡಿಲಿಸಿದಾಗಲೂ ಸಾರ್ವಜನಿಕರು ಬೀದಿಗೆ ಬರುತ್ತಿದ್ದಾರೆ.
ಸೋಮವಾರ ಜಿಲ್ಲೆಯ ಜನತೆ ಸಾಮಾಗ್ರಿಗಳ ಖರೀದಿಗೆ ಮುಗಿಬಿದ್ದಿರುವುದನ್ನು ಗಮನಿಸಿದರೆ, ಇವರಿಗೆ ತಮ್ಮ ಆರೋಗ್ಯಕ್ಕಿಂತಲೂ ಅಗತ್ಯ ಸಾಮಾಗ್ರಿಗಳ ಖರೀದಿಯೇ ಮುಖ್ಯವಾಗಿದ್ದಂತಿತ್ತು.
ಜಿಲ್ಲೆಯ ಸೋಮವಾರಪೇಟೆ, ಮಡಿಕೇರಿ, ಗೋಣಿಕೊಪ್ಪ ಸೇರಿದಂತೆ ಬಹುತೇಕ ಪಟ್ಟಣ ಪ್ರದೇಶಗಳಲ್ಲಿ ಸಾರ್ವಜನಿಕರು ನಿಷೇಧಾಜ್ಞೆ ಇದೆ ಎಂಬುದನ್ನೇ ಮರೆತಂತಿತ್ತು. ತರಕಾರಿ, ದಿನಸಿ ವಸ್ತುಗಳ ಖರೀದಿಗೆ ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳದೆ ಮುಗಿಬಿದ್ದಿದ್ದು, ವೈಯಕ್ತಿಕ ಸುರಕ್ಷತಾ ಸಾಧನವಾದ ಕನಿಷ್ಟ ಮಾಸ್ಕ್ ಕೂಡಾ ಧರಿಸದೆ ಬೀದಿಗಿಳಿದದ್ದನ್ನು ಗಮನಿಸಿದರೆ ಇಲ್ಲಿ ಕೊರೋನಾ ಮಾತ್ರವಲ್ಲ ಇತರ ಯಾವುದೇ ಸಾಂಕ್ರಮಿಕ ರೋಗ ಹರಡಲು ನಿಮಿಷವೂ ಬೇಕಾಗಿರಲಿಲ್ಲ.
ಇಂತಹ ಪರಿಸ್ಥಿತಿಯಲ್ಲೂ ಕೊಡಗಿನ ಜನರು ಮೈಮರೆತರೆ ನಮ್ಮನ್ನು ಜಿಲ್ಲಾಡಳಿತ ಮಾತ್ರವಲ್ಲ, ಭಗವಂತನೇ ಧರೆಗೆ ಇಳಿದು ಬಂದರೂ ರಕ್ಷಿಸಲು ಸಾಧ್ಯವಿಲ್ಲ.
ದಿನಕ್ಕೆ ಎರಡು ಗಂಟೆಯೇ ಸೂಕ್ತ 
ಹೌದು, ಕೊಡಗಿನ ಜನತೆಯನ್ನು ಕೊರೋನಾ ಸೋಂಕಿನಿಂದ ರಕ್ಷಿಸಬೇಕಾದರೆ ವಾರದಲ್ಲಿ ಮೂರು ದಿನ ನಿಷೇಧಾಜ್ಞೆ ಸಡಿಲಿಸುವುದನ್ನು ಕೈಬಿಟ್ಟು ಈ ಹಿಂದೆ ಇದ್ದಂತೆ ದಿನಕ್ಕೆ ಎರಡು ಗಂಟೆ ಮಾತ್ರ ಅವಕಾಶ ನೀಡಬೇಕಿದೆ.
ಇದರಿಂದ ಜನ ಜಾತ್ರೆ ಸೇರುವುದನ್ನು ಸ್ವಲ್ಪ ಮಟ್ಟಿಗಾದರೂ ತಡೆಯಬಹುದಾಗಿದೆ. ದಿನಂಪ್ರತಿ ಎರಡು ಗಂಟೆ ಕಾಲಾವಕಾಶ ಇರುವುದರಿಂದ ಅಗತ್ಯ ಇರುವವರು ಮಾತ್ರ ಬೀದಿಗೆ ಬಂದು ಅವಶ್ಯಕ ಸಾಮಾಗ್ರಿ ಪಡೆಯುತ್ತಾರೆ. ಇದರೊಂದಿಗೆ ತರಕಾರಿ ಬೆಳೆದ ರೈತನಿಗೂ ಒಂದಿಷ್ಟು ಆದಾಯ ಲಭಿಸುತ್ತದೆ. ತರಕಾರಿ ಕೊಳೆತು ಹಾಳಾಗುವುದಕ್ಕೂ ಅವಕಾಶವಿರುವುದಿಲ್ಲ. ಬೆಲೆಯನ್ನೂ ನಿಯಂತ್ರಿಸುವುದಕ್ಕೂ ಅನುಕೂಲ.   ವಾರದಲ್ಲಿ ಮೂರು ದಿನ ಅವಕಾಶ ನೀಡುವುದು ಕೊರೋನಾ ಸೋಂಕಿತರನ್ನು ಹೆಚ್ಚು ಮಾಡುವ ನಿರ್ಧಾರ ಆಗಬಹುದು.!

LEAVE A REPLY

Please enter your comment!
Please enter your name here