ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆಗೆ ಸರ್ಕಾರದ ಅಲಕ್ಷ್ಯ: ಉ.ಕರ್ನಾಟಕ ಅಭಿವೃದ್ಧಿಗೆ ಎಳ್ಳುನೀರು?

0
133

ಹುಬ್ಬಳ್ಳಿ: ಶತಮಾನದ ಕನಸಾಗಿದ್ದ ಮಹತ್ವಾಕಾಂಕ್ಷಿ ಹುಬ್ಬಳ್ಳಿ- ಅಂಕೋಲಾ ರೈಲು ಯೋಜನೆ ಪ್ರಸ್ತಾಪನೆ ತಿರಸ್ಕಾರ ಮಾಡುವ ಮುನ್ನ ಲಭ್ಯ ಉನ್ನತ ತಂತ್ರಜ್ಞಾನದತ್ತ ಹೊರಳಿಯೂ ನೋಡದ ರಾಜ್ಯ ವನ್ಯಜೀವಿ ಮಂಡಳಿಯು ಪೂರ್ವಾಗ್ರಹ ಪೀಡಿತವಾಯಿತೇ ಎಂಬ ಶಂಕೆ ಜನರನ್ನು ಕಾಡತೊಡಗಿದೆ.

ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಯಾವುದೇ ಮಾರಕ ಯೋಜನೆ ತರುವಾಗ ಇರದ ಪರಿಸರ ಪ್ರಜ್ಞೆ -ಕಾಳಜಿ ಈ ಹುಬ್ಬಳ್ಳಿ -ಅಂಕೋಲಾ ರೈಲು ಯೋಜನೆ ವಿಷಯದಲ್ಲಿ ಮಾತ್ರ ಈ ಪರಿ ಎದ್ದು ನಿಲ್ಲುತ್ತಿರುವುದರ ಹಿಂದೆ ಅದ್ಯಾವ ಶಕ್ತಿಗಳು ಕಾರ್ಯನಿರ್ವಹಿಸುತ್ತಿವೆ ಎಂಬ ಪ್ರಶ್ನೆಯೂ ಜನರಲ್ಲಿ ಮೂಡಿದೆ. 25 ವರ್ಷಗಳ ಹಿಂದಿನ ಅರಣ್ಯ ಪ್ರದೇಶದ ವರದಿ ಇರಿಸಿಕೊಂಡು ಮತ್ತು ಈಗ ಲಭ್ಯವಾದ ಆಧುನಿಕ ತಂತ್ರಜ್ಞಾನದ ಸೌಲಭ್ಯ ಬಳಸುವತ್ತ ತಿರುಗಿಯೂ ನೋಡದೇ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ತಿರಸ್ಕರಿಸುತ್ತಿರುವುದನ್ನು ನೋಡಿದಾಗ ಇದರ ಹಿಂದೆ ಬಲವಾದ ಲಾಬಿ ಇರುವ ಶಂಕೆಯಿದೆ.

ಏನಾಯ್ತು ನೋಡಿ?: ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್, ಮೂಲ ಸೌಕರ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಕಪಿಲ್ ಮೋಹನ, ಹುಬ್ಬಳ್ಳಿ ಅಂಕೋಲಾ ರೈಲು ಯೋಜನೆ ಜಾರಿಯ ಪ್ರಯೋಜನ ಮತ್ತು ಹಾನಿಯಿಲ್ಲದೆ ಜಾರಿಗೊಳಿಸುವ ಕ್ರಮದ ಬಗ್ಗೆ ಪ್ರಸ್ತಾಪ ಮಾಡಿದರೂ ಅರಣ್ಯ ಮಂತ್ರಿ ಆನಂದ ಸಿಂಗ್, ವನ್ಯಜೀವಿ ತಜ್ಞ ಸಂಜಯ ಗುಬ್ಬಿ, ಸೌಮ್ಯ ರೆಡ್ಡಿ ಮುಂತಾದವರು ಯೋಜನೆ ಜಾರಿ ಬೇಡವೇ ಬೇಡ ಎಂದು ಪಟ್ಟು ಹಿಡಿದರು.

ವನ್ಯಜೀವಿ ಮಂಡಳಿ ಈ ಯೋಜನೆಯನ್ನು ತಿರಸ್ಕಾರ ಮಾಡಿದರೂ ವಾಸ್ತವಿಕ ಅಂಶಗಳನ್ನು ಮರೆಮಾಡಿದೆಯೇ ಎಂಬ ಸಂಶಯವಂತೂ ಕಾಡಿದೆ. ಈ ಯೋಜನೆಯಿಂದ ಪರಿಸರ ಮತ್ತು ವನ್ಯಜೀವಿಗಳು, ಪಶುಪಕ್ಷಿಗಳ ಮೇಲೆ ಆಗುವ ಪ್ರಭಾವದ ಬಗ್ಗೆ ಒಂದು ವರ್ಷದಷ್ಟು ಅವಧಿಗೆ ಕಾಡಿನಲ್ಲಿದ್ದು ಸಮಗ್ರ ಅಧ್ಯಯನ ಮಾಡಿದವರು ಭಾರತೀಯ ವಿಜ್ಞಾನ ಭವನದ ಡಾ.ಟಿ.ವಿ. ರಾಮಚಂದ್ರನ್ ಮತ್ತು ಡಾ. ಸುಭಾಶ್ಚಂದ್ರನ್ ಅವರು. ಈ ಅಧ್ಯಯನ ವರದಿ ಸರ್ಕಾರದ ಬಳಿಯಿದೆ.

ಹೊಸ ದಿಗಂತ ಈ ತಂಡದ ಡಾ.ಸುಭಾಶ್ಚಂದ್ರನ್ ಅವರನ್ನು ಮಾತನಾಡಿಸಿದಾಗ, ಉತ್ತರ ಕನ್ನಡ ಜಿಲ್ಲೆಯ ಪ್ರಾಕೃತಿಕ ಸ್ಥಿತಿ ಗಮನಿಸಿದರೆ ಈಗ ರೈಲು ಯೋಜನೆ ಜಾರಿಗೊಳಿಸಬಹುದಾದ ಏಕೈಕ ಸಾಧ್ಯತೆ ಇರುವುದು ಹುಬ್ಬಳ್ಳಿ -ಅಂಕೋಲಾ ರೈಲು ಯೋಜನೆಗೆ ಮಾತ್ರ ಎಂದು ಅಭಿಪ್ರಾಯಪಟ್ಟರು.

ಲಕ್ಷ ಮರಗಳು ಯೋಜನೆಗೆ ಬಲಿ ಆಗಬೇಕಾದರೆ ಈ ಸರ್ವೆಯಲ್ಲಿ ಕನಿಷ್ಠವೆಂದರೂ ಪ್ರತಿ ಚ.ಮೀಟರ್ ಗೆ 35-40 ಮರಗಳು ಬರಬೇಕು. ಆದರೆ ಸರ್ವೇಯಲ್ಲಿ ಇದು ಸಿಕ್ಕಿದ್ದು ಬರೇ 10-15 ಮರಗಳು ಮಾತ್ರ. ಅರಣ್ಯ ಪ್ರದೇಶ ವಿರಳ ಇರುವ ಹಿನ್ನೆಲೆಯಲ್ಲಿ ಯೋಜನೆಗೆ ಬಲಿಯಾದ ಮರಗಳನ್ನು ಅದೇ ಅರಣ್ಯ ಪ್ರದೇಶದಲ್ಲಿ ಬೆಳೆಸಬಹುದಾಗಿದೆ.

ಯೋಜನಾ ಪ್ರದೇಶದಲ್ಲಿ ಬರುವ ನೈಸರ್ಗಿಕ ಅರಣ್ಯ ಪ್ರದೇಶ ತುಂಬ ನಾಶವಾಗಿದೆ. ರಾಮನಗುಳಿ ಮತ್ತಿತರ ಪ್ರದೇಶದಲ್ಲಿ ಪ್ಲಾಂಟೇಶನ್ ಪ್ರದೇಶವೇ ಜಾಸ್ತಿ. ವನ್ಯಜೀವಿ ಸಂಚಾರ ಋತುಮಾನ ಆಧಾರಿತವಾಗಿದೆ. ಕಳೆದ 10 ವರ್ಷದ ಹಿಂದಿನ ಅಧ್ಯಯನಕ್ಕೆ ಹೋಲಿಸಿದರೆ ಈಗ ಪಥ ಬದಲಾವಣೆ ಸಾಕಷ್ಟು ಆಗಿದೆ. ಕ್ಯಾಸರಲಾಕ್‌ ನಂತಹ ಪ್ರದೇಶದಲ್ಲಿ ಗುಹೆಯ ಮೇಲೆ ದಟ್ಟ ಅರಣ್ಯ ಪ್ರದೇಶವಿದೆ. ವನ್ಯಜೀವಿಗಳಿಗೂ ಇದರಿಂದ ಯಾವ ತೊಂದರೆಯೂ ಇಲ್ಲ.

3 ಸುರಂಗ ಮಾರ್ಗ ಒಯ್ಯಲು ಯಾವುದೇ ಅಡ್ಡಿಯಿಲ್ಲ. ಅಂತಹ ತಂತ್ರಜ್ಞಾನ ಲಭ್ಯ. ರೈಲು ಯೋಜನೆಯಲ್ಲಿ ಎರಡು ಹಳಿಗಳನ್ನು ಮಾತ್ರ ಜೋಡಿಸುವುದು. ಹಳಿಗಳ ಅಕ್ಕಪಕ್ಕದಲ್ಲಿ ಯಾವುದೇ ಅಭಿವೃದ್ದಿ ( ಲೀನೀಯರ್ ಡೆವಲಪಮೆಂಟ್ ) ಆಗುವುದಿಲ್ಲ. ಇವೆಲ್ಲವುಗಳನ್ನು ನೋಡಿದಾಗ, ಬೇಲೇಕೇರಿ, ಕಾರವಾರ, ತದಡಿ ಮತ್ತಿತರ ಬಂದರುಗಳ ಜೊತೆಗೆ ಸಂಪರ್ಕ ಸಾಧಿಸಿ ಕೊಂಕಣ ರೈಲಿನೊಂದಿಗೆ ಜೋಡಣೆಯಾಗಿ ಇಡೀ ಉತ್ತರ ಕರ್ನಾಟಕದ ಅಭಿವೃದ್ಧಿಗೆ ದಾರಿ ಮಾಡುವ ಸಾಧ್ಯತೆ ಇದೆ.

ಯೋಜನೆಯ ಇತಿಹಾಸ: ಹುಬ್ಬಳ್ಳಿ- ಅಂಕೋಲಾ ರೈಲು ಯೋಜನೆ ಪ್ರಸ್ತಾಪ ಬ್ರಿಟೀಷ್ ಆಡಳಿತದಲ್ಲೇ ಆಗಿದೆ. ಹುಬ್ಬಳ್ಳಿ ಅಂಕೋಲಾ ಸುಮಾರು 150 ವರ್ಷಗಳಷ್ಟು ಹಿಂದಿನ ಕನಸು. ಸುಮಾರು 168 ಕಿ.ಮೀ ಉದ್ದದ ಈ ರೈಲು ಯೋಜನೆಗೆ ಎನ್.ಡಿ.ಎ ಸರ್ಕಾರದ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಹುಬ್ಬಳ್ಳಿಯಲ್ಲಿ 1999ರಲ್ಲಿ ಹುಬ್ಬಳ್ಳಿಯಲ್ಲಿ ಅಡಿಗಲ್ಲು ಹಾಕಿದ್ದರು.

ನಂತರದಲ್ಲಿ ಹುಬ್ಬಳ್ಳಿಯಿಂದ -ಕಲಘಟಗಿಯವರೆಗೆ ಸುಮಾರು 26 ಕಿ.ಮೀ. ಮಾರ್ಗ ನಿರ್ಮಾಣ ಆಗಿತ್ತು. ರೈಲು ಮಾರ್ಗದಿಂದ ಆಗುವ ಅನಾಹುತಗಳನ್ನು ಪರಿಶೀಲಿಸುವಂತೆ 2006ರಲ್ಲಿ ರಾಜ್ಯದ ವೈಲ್ಡರ್ ನೆಸ್ ಕ್ಲಬ್ ಹಾಗೂ ಶಿರಸಿಯ ಪರಿಸರ ಸಂರಕ್ಷಣಾ ಕೇಂದ್ರ ಎಂಬ ಎರಡು ಸರ್ಕಾರೇತರ ಸಂಸ್ಥೆ (ಎನ್.ಜಿ.ಓ)ಗಳು ಸರ್ವೋಚ್ಛ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದವು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ರೈಲು ಮಾರ್ಗ ನಿರ್ಮಾಣವನ್ನು ತಡೆ ಹಿಡಿದಿತ್ತು.

ಅಲ್ಲಿಂದ ಪದೇ ಪದೇ ತಕರಾರು ಹಿನ್ನಡೆ ಕಾಣುತ್ತ ಬಂದಿರುವ ಈ ಯೋಜನೆ ಬಗ್ಗೆ ಅಧ್ಯಯನಕ್ಕೆ ಗಂಗೋಪಾಧ್ಯಾಯ ಸಮಿತಿ, ನಂತರಲ್ಲಿ ಭಾರತೀಯ ವಿಜ್ಞಾನ ಭವನದ ಡಾ. ಟಿ.ವಿ. ರಾಮಚಂದ್ರನ್ – ಡಾ. ಸುಭಾಶ್ಚಂದ್ರನ್ ಕಮಿಟಿ ನೇಮಕವಾಗಿ ವರದಿ ಸಲ್ಲಿಕೆಯಾಗಿದೆ. ವಿವಿಧ ಹಂತದ ಪ್ರತಿರೋಧ ಎದುರಿಸಿ ಈಗ ವನ್ಯಜೀವಿ ಮಂಡಳಿಯ ವಿರೋಧಕ್ಕೆ ಒಳಗಾಗಿದೆ. ಈ ಮಂಡಳಿ ಯೋಜನೆ ಜಾರಿಯಿಂದ 2 ಲಕ್ಷ ಮರಗಳ ನಾಶ, ಹುಲಿ, ಆನೆ ಮತ್ತಿತರ ವನ್ಯಜೀವಿಗಳ ಸಂಚಾರಕ್ಕೆ ಅಡ್ಡಿ ಮತ್ತಿತರ ಕಾರಣವನ್ನು ಮುಂದೆ ಮಾಡಿ ಇದಕ್ಕೆ ಅನುಮತಿ ನೀಡಲು ನಿರಾಕರಿಸಿದೆ.

-ವಿಠ್ಠಲದಾಸ ಕಾಮತ್

LEAVE A REPLY

Please enter your comment!
Please enter your name here