ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಮತ್ತು ಮಹಾನಗರ ಪಾಲಿಕೆ ಅಡಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ನಗರಾಭಿವೃದ್ಧಿ ಸಚಿವರಾದ ಬಿ.ಎ.ಬಸವರಾಜ ವೀಕ್ಷಣೆ ಮಾಡಿದರು.
ಅವರು ಮಂಗಳವಾರ ಬೆಳಗ್ಗೆ ಉಣಕಲ್-ಹುಲಕೊಪ್ಪ ಸೇತುವೆ ಹಾಗೂ ಹನುಮಂತ ನಗರದ ಸೇತುವೆ,
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ದ್ವೀತಿಯ ಹಂತದ ವೈಜ್ಞಾನಿಕ ತ್ಯಾಜ್ಯ ನಿರ್ವಹಣಾ ಘಟಕದ ಸ್ಟೇಷನರಿ ಕಂಪ್ಯಾಕ್ಟರ್ ಸ್ಟೇಷನ್ ಹಾಗೂ ಬೆಂಗೇರಿಯ ಸಂತೆ ಮೈದಾನ ಹಾಗೂ ಸ್ಮಾರ್ಟ್ ಯೋಜನೆಯಡಿ ಮೇಲ್ದರ್ಜೆಗೆ ಪೂರ್ಣಗೊಂಡ, ಮಹಾನಗರ ಪಾಲಿಕೆಯ ಈಜುಗೋಳ, ಘಂಟಿಕೇರಿಯ ಸರಕಾರಿ ಮಾದರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯ ನಂ.1 ಕಟ್ಟಡ ದುರಸ್ತಿ ಕಾಮಗಾರಿ ಹಾಗೂ ರಾಮಲಿಂಗೇಶ್ವರ ನಗರದ ಕಾಮಗಾರಿ ವೀಕ್ಷಿಸಿದರು.
ನಂತರ ಕಾಟನ್ ಮಾರ್ಕೆಟ್ ಭಗತ್ ಸಿಂಗ್ ಸರ್ಕಲ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಆರೋಗ್ಯ ವಿಚಾರಿಸಿ,ಸೇವೆಗೆ ಶ್ಲಾಘನೀಯ ವ್ಯಕ್ತಪಡಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಹುಬ್ಬಳ್ಳಿ ಧಾರವಾಡ ಅವಳಿನಗರದ ಅಭಿವೃದ್ಧಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದು,ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಹಿಸುವುದು,ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ವಿವಿಧ ಕಾಮಗಾರಿ ಬಗ್ಗೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ.
ಕಾಮಗಾರಿ ಸ್ಥಳ ಪರಿಶೀಲನೆಯನ್ನು ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಅವರೊಂದಿಗೆ ವೀಕ್ಷಿಸಿ, ಸಾಧಕ ಭಾದಕಗಳು,ಯುಜಿಡಿ ಕಾಮಗಾರಿ, ಅಥವಾ ವಿವಿಧ ಕಾಮಗಾರಿಗಳು ಸಮರ್ಪಕವಾಗಿ ಹಾಗೂ ವೇಗವಾಗಿ ನಡೆಯಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದೇವೆ.
ಸ್ಮಾರ್ಟ್ ಸಿಟಿ ನಾಲಾ ಅಭಿವೃದ್ಧಿ ಯೋಜನೆಯ ಗ್ರೀನ್ ಕಾರಿಡಾರ್ 130 ಕೋಟಿ,ಬೆಂಗೇರಿ ಮಾರುಕಟ್ಟೆ ಯೋಜನೆಗೆ 6.8 ಕೋಟಿ,ಈಜುಗೋಳ ಅಭಿವೃದ್ಧಿಗೆ 3.3 ಕೋಟಿ, ಬಿಎಸ್ ಯುಪಿ ಯೋಜನೆಯ ಪ್ಯಾಕೇಜ್ 3ಕ್ಕೆ 31.91 ಕೋಟಿ,ಬಿಎಸ್ ಯುಪಿ ಪ್ಯಾಕೇಜ್ 1ರ ಯೋಜನೆಯಡಿ 31.14 ಕೋಟಿ,ಸ್ಮಾರ್ಟ್ ರೋಡ್ ಪ್ಯಾಕೇಜ್ 4 , 21.09 ಕೋಟಿ,ಎಮ್ ಎಸ್ ಎಮ್ ಇ ಯೋಜನೆಯಡಿ 18.40 ಕೋಟಿ,ತೋಳನಕೇರೆ ಅಭಿವೃದ್ಧಿ 13.45 ಕೋಟಿ ಕಾಮಗಾರಿ ನಡೆಯುತ್ತಿವೆ ಇವೆಲ್ಲವೂ ವೇಗವಾಗಿ ನಡೆಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು
ಈಗಾಗಲೇ ಒಟ್ಟು 59 ಸ್ಮಾರ್ಟ್ ಯೋಜನೆಯಡಿ ಕಾಮಗಾರಿ ಇದ್ದು,ಈಗಾಗಲೇ 9 ಕಾಮಗಾರಿ ಪೂರ್ಣಗೊಂಡಿವೆ.ಮುಂದಿನ ದಿನಗಳಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಶುಚಿಯಾದ ನಗರ ಆಗಬೇಕೆಂದು ಸೂಚಿಸಿದ್ದೇನೆ. ಪೌರಕಾರ್ಮಿಕರೊಂದಿಗೆ ಆರೋಗ್ಯ, ಹಾಗೂ ಸಂಬಳ ಸೇರಿ ಮಾಸ್ಕ್, ಸ್ಯಾನಿಟೈಸರ್ ಇನ್ನಿತರ ಸಮಸ್ಯೆಗಳು ಬಗ್ಗೆ ವಿಚಾರಿಸಿದ್ದೇನೆ.
ಅದೇರೀತಿ 64 ಕೋಟಿ ವೆಚ್ಚದಲ್ಲಿ ವಿಶೇಷವಾಗಿ 10 ಮಹಾನಗರದಲ್ಲಿ ಎಲ್ ಇಡಿ ಲೈಟ್ಸ್ ಅಳವಡಿಸುವ ಹೊಸ ಯೋಜನೆ ರೂಪಿಸಿಲಾಗಿದೆ.ಮುಂದಿನ ದಿನಗಳಲ್ಲಿ ಸರ್ಕಾರದ ವತಿಯಿಂದ ಅನುಮೋದನೆ ಪಡೆದುಕೊಂಡು ಟೆಂಡರ್ ಕರೆಯಲಿದ್ದೇವೆ,ಅವಳಿನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸುವ ಕೆಲಸ ತ್ವರಿತಗತಿಯಲ್ಲಿ ಆಗುವಂತೆ ಸೂಚನೆ ನೀಡಿದ್ದೇನೆ ಯುಜಿಡಿ,ಹಾಗೂ ಕುಡಿಯುವ ನೀರು ಸೇರಿದಂತೆ ಹಲವು ಕಾಮಗಾರಿಗಳಿಗೆ ಇನ್ನೂ 492 ಕೋಟಿ ರೂ ಅನುದಾನದ ಅವಶ್ಯಕವಿದೆ ಎಂದು ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ.
ಈ ಕುರಿತು ಸಿಎಂ ಜೊತೆ ಚರ್ಚೆ ನಡೆಸಿ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಿದ್ದೇವೆ,ಯುಜಿಡಿ ಸೇರಿದಂತೆ ನಗರದ ಪ್ರಮುಖ ಕಾಮಗಾರಿಗಳ ಪರಿಶೀಲನೆ ನಡೆಸಿ ಸ್ಮಾರ್ಟ್ ಸಿಟಿ ಯೋಜನೆಯಡಿ ಇರುವ ಹಲವು ಕಾಮಗಾರಿಗಳನ್ನ ಪರಿಶೀಲನೆ ಮಾಡಿದ್ದೇನೆ,
ಸ್ಮಾರ್ಟ್ ಸಿಟಿ ಯೋಜನೆಗೆ ಬೇಕಾದ ಎಲ್ಲ ಅವಶ್ಯಕಗಳನ್ನು ಸರ್ಕಾರದಿಂದ ಕಲ್ಪಿಸಲಾಗುವುದು ಎಂದರು.
ಬಳ್ಳಾರಿ, ಕಲಬುರ್ಗಿ ,ವಿಜಯಪುರ ಹಾಗೂ ಮೈಸೂರು ಸೇರಿದಂತೆ ನಾಲ್ಕು ಜಿಲ್ಲೆಗಳನ್ನು ಸ್ಮಾರ್ಟ್ ಸಿಟಿ ಅಡಿಯಲ್ಲಿ ಸೇರಿಸುವಂತೆ
ಕೇಂದ್ರಕ್ಕೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದೇನೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿ, ಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ, ಸ್ಮಾರ್ಟ್ ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್, ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಎನ್.ಎಂ.ಕುಮ್ಮಣ್ಣವರ ಮತ್ತಿತರರು ಇದ್ದರು.