ಹುಬ್ಬಳ್ಳಿ: ಧಾರವಾಡ ಜಿಲ್ಲೆ ಕಲಘಟಗಿ ಪೊಲೀಸರಿಗೂ ಕೊರೋನಾ ಭೀತಿ ಶುರುವಾಗಿದ್ದು, ಠಾಣೆಯ ಮೂವರು ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಇದರಿಂದಾಗಿ ಕಲಘಟಗಿ ಪೊಲೀಸರಿಗೆ ಕೊರೋನಾ ಭೀತಿ ಕಾಡಲು ಶುರುವಾಗಿದೆ.
ಕಲಘಟಗಿ ತಾಲೂಕಿನ ಬಿ.ಗುಡಿಹಾಳ ಗ್ರಾಮದ ಕೊರೋನಾ ಸೋಂಕಿತ ಪಿ- 3397 ಸಂಪರ್ಕಕ್ಕೆ ಬಂದ ಮೂವರು ಪೊಲೀಸರನ್ನು ಮುಂಜಾಗ್ರತ ಕ್ರಮವಾಗಿ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ.
ಪಿ-3397ಗೆ ಜೂನ್ 1ರಂದು ಕೊರೊನಾ ಸೋಂಕು ದೃಢಪಟ್ಟಿತ್ತು. ಮೇ ೧೯ರಂದು ಧುಮ್ಮವಾಡ ಗ್ರಾಮದಲ್ಲಿ ನಡೆದಿದ್ದ ಅವಘಡ ಸಂಬಂಧ ಸ್ಥಳ ಮಹಜರಿಗೆ ಹೋಗಿದ್ದ ಪೊಲೀಸರೊಂದಿಗೆ ಪಿ-3397 ಪಂಚನಾಮೆ ನೆರವೇರಿಸಿದ್ದನು. ಇದಾದ ಬಳಿಕ ಮೇ 20ರಂದು ಠಾಣೆಗೆ ತೆರಳಿದ್ದನು. ಮೇ 22ರಂದು ಅಸ್ವಸ್ಥನಾದ ಈತ ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ತೆರಳಿದ್ದನು. ನಂತರ ಎಸ್ಡಿಎಂ ಆಸ್ಪತ್ರೆಗೆ ಬಂದ ಈತನ ಗಂಟಲು ದ್ರವ ಪರೀಕ್ಷೆ ಮಾಡಲಾಗಿತ್ತು. ಜೂನ್ 1ರಂದು ಬಂದ ವರದಿಯಲ್ಲಿ ಆತನಿಗೆ ಸೋಂಕು ದೃಢಪಟ್ಟಿದೆ. ಮುಂಜಾಗ್ರತಾ ಕ್ರಮವಾಗಿ ಆತನೊಂದಿಗೆ ಸಂಪರ್ಕದಲ್ಲಿದ್ದ ಮೂವರು ಪೊಲೀಸ್ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಿ, ಮೂವರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ.