ಹುಬ್ಬಳ್ಳಿ: ಹೋಮ್ ಕ್ವಾರಂಟೈನ್ ನಲ್ಲಿ ಒಳಪಟ್ಟಿರುವ ಎಲ್ಲಾ ವ್ಯಕ್ತಿಗಳನ್ನು ಆಧುನಿಕ ತಂತ್ರಜ್ಞಾನ ಬಳಸಿ ಜಿಯೋ ಫೆನ್ಸಿಂಗ್ ಮೂಲಕ ಕಣ್ಗಾವಲಿನಲ್ಲಿ ಇರಿಸಲಾಗಿದೆ. ಜಿಯೋ ಫೆನ್ಸಿಂಗ್ ವ್ಯಾಪ್ತಿಯಿಂದ ಹೊರಬರುವವರ ಮಾಹಿತಿ ತ್ವರಿತವಾಗಿ ಲಭ್ಯವಾಗುತ್ತಿದೆ. ಅಂತಹವರ ವಿರುದ್ಧ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ ೧೮೯೭ ಹಾಗೂ ಕರ್ನಾಟಕ ಸಾಂಕ್ರಾಮಿಕ ರೋಗಗಳ ತಡೆ (ಕೋವಿಡ್) ಕಾಯ್ದೆ ಅಡಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಆರ್.ದಿಲೀಪ್ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕ್ವಾರಂಟೈನ್ ಉಲ್ಲಂಘಿಸಿ ಮನೆಯಿಂದ ಹೊರಬರುವ ನಾಗರಿಕರ ಕುರಿತು ಅವರ ನೆರೆ ಹೊರೆಯವರು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೊಂದಿಗೆ ಸಮನ್ವಯ ಮಾಡಿಕೊಂಡು ಮಾಹಿತಿ ಸಂಗ್ರಹಿಸಿ ನಿಯಂತ್ರಿಸಬೇಕು ಎಂದು ಅವರು ತಿಳಿಸಿದ್ದಾರೆ.