ಹುಬ್ಬಳ್ಳಿ: ಕೊರೋನಾ ವೈರಸ್ ಭೀತಿ ಎಲ್ಲೆಡೆಯೂ ಹೆಚ್ಚುತ್ತಿದ್ದು, ಈ ಹಿನ್ನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಧಾರವಾಡ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಹುಬ್ಬಳ್ಳಿಯ ಹು-ಧಾ ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಕೋವಿಡ್-19 ಪರೀಕ್ಷೆ ನಡೆಸಲಾಯಿತು. ಗರ್ಭಿಣಿಯರಲ್ಲಿರುವ ಭಯವನ್ನು ನಿವಾರಣೆ ಮಾಡಲು ಹಾಗೂ ಕೊರೋನಾ ವೈರಸ್ ನಿಯಂತ್ರಣದ ಹಿನ್ನ್ನೆಲೆಯಲ್ಲಿ ಗರ್ಭಿಣಿ ಮಹಿಳೆಯರ ಗಂಟಲು ದ್ರವ ಹಾಗೂ ಮೂಗಿನ ದ್ರವದ ಪರೀಕ್ಷೆ ಮಾಡಲಾಯಿತು. ಈಗಾಗಲೇ ಮೂರು ದಿನಗಳಿಂದ ಕೋವಿಡ್-19 ಪರೀಕ್ಷೆ ಪ್ರಾರಂಭವಾಗಿದ್ದು, ದಿನಕ್ಕೆ 60 ಜನರ ತಪಾಸಣೆ ಮಾಡಲಾಗುತ್ತಿದೆ. ಸೋಮವಾರ ಹಾಗೂ ಮಂಗಳವಾರ ತಲಾ 65 ಗರ್ಭಿಣಿಯರಿಗೆ ಕೋವಿಡ್-19 ತಪಾಸಣೆ ಮಾಡಲಾಗಿದೆ. ಬುಧವಾರ 45 ಗರ್ಭಿಣಿಯರ ಗಂಟಲು ಹಾಗೂ ಮೂಗಿನ ದ್ರವವನ್ನು ಸಂಗ್ರಹಿಸಲಾಯಿತು. ಆರೋಗ್ಯಾಧಿಕಾರಿ ಡಾ.ಪ್ರಭು ಬಿರಾದಾರ ಮಾತನಾಡಿ,ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಮುಂಜಾಗ್ರತಾ ಕ್ರಮವಾಗಿ ಹಾಗೂ ಕೊರೋನಾ ವೈರಸ್ ನಿಯಂತ್ರಣದ ಹಿನ್ನ್ನೆಲೆಯಲ್ಲಿ ಗರ್ಭಿಣಿಯರ ಗಂಟಲು ದ್ರವ ಹಾಗೂ ಮೂಗಿನ ದ್ರವವನ್ನು ಸಂಗ್ರಹಿಸಿ ಪರೀಕ್ಷೆ ಮಾಡುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದರು. ಗರ್ಭಿಣಿಯರು ಸ್ವಯಂಪ್ರೇರಿತವಾಗಿ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಳ್ಳಬೇಕು ಅಲ್ಲದೇ ಯಾರಿಗಾದರೂ ರೋಗದ ಲಕ್ಷಣಗಳಿದ್ದರೇ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.