ಹುಬ್ಬಳ್ಳಿ: ಕರ್ನಾಟಕ ಸರ್ಕಾರದ ಕೋರಿಕೆ ಮೇರೆಗೆ ಹುಬ್ಬಳ್ಳಿ ನೈಋತ್ಯ ರೈಲ್ವೇ ವಲಯದ ವಿಭಾಗೀಯ ಕಚೇರಿಯು ಬೇರೆ ರಾಜ್ಯಗಳಿಗೆ ತೆರಳುವ ವಲಸೆ ಕಾರ್ಮಿಕರು. ಪ್ರವಾಸಿಗರು, ಯಾತ್ರಾರ್ಥಿಗಳು, ವಿದ್ಯಾರ್ಥಿಗಳು ಹಾಗೂ ಇತರೆ ಜನರಿಗಾಗಿ ಶ್ರಮಿಕ ಎಕ್ಸ್ಪ್ರೆಸ್ ವಿಶೇಷ ರೈಲುಗಳ ವ್ಯವಸ್ಥೆ ಮಾಡಿದೆ. ಮೇ 17 ರಂದು ಹುಬ್ಬಳ್ಳಿಯಿಂದ ಬಿಹಾರದ ಕಠಿಹಾರ್, ಹಾಗೂ ಮೇ 17 ಮತ್ತು 18 ರಂದು ಹುಬ್ಬಳ್ಳಿಯಿಂದ ಉತ್ತರ ಪ್ರದೇಶದ ಲಕ್ನೋ ಮಾರ್ಗವಾಗಿ ಬಸ್ತಿ ರೈಲು ನಿಲ್ದಾಣದ ವರೆಗೆ ೩ ವಿಶೇಷ ಶ್ರಮಿಕ ಎಕ್ಸ್ಪ್ರೆಸ್ ರೈಲುಗಳು ತೆರಳಲಿವೆ.
ತಾತ್ಕಾಲಿಕ ವೇಳಾಪಟ್ಟಿ : ಮೇ 17 ರಂದು ಸಂಜೆ 5 ಗಂಟೆಗೆ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಬಿಹಾರದ ಕಠಿಹಾರ್ಗೆ ರೈಲು ಹೊರಡಲಿದೆ. ಮೇ 17 ಮತ್ತು 18 ರಂದು ಬೆಳಿಗ್ಗೆ 9 ಗಂಟೆಗೆ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಉತ್ತರ ಪ್ರದೇಶದ ಬಸ್ತಿ ರೈಲು ನಿಲ್ದಾಣಕ್ಕೆ ಎರಡು ದಿನ ರೈಲುಗಳು ಹೊರಡಲಿವೆ.
ಮೂರು ಶ್ರಮಿಕ ಎಕ್ಸ್ಪ್ರೆಸ್ ರೈಲುಗಳ ಕೋರಿಕೆ: ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಎನ್.ಮಂಜುನಾಥ ಪ್ರಸಾದ್ ಅವರು ಹುಬ್ಬಳ್ಳಿ ರೈಲ್ವೇ ವಿಭಾಗದ ವ್ಯವಸ್ಥಾಪಕರಿಗೆ ಪತ್ರ ಬರೆದು, ಮೇ 20 ರಿಂದ 22 ರವರಗೆ ಮೂರು ದಿನಗಳ ಕಾಲ ಪ್ರತಿದಿನ ಒಂದು ರೈಲನ್ನು ಉತ್ತರ ಪ್ರದೇಶಕ್ಕೆ ಬಿಡಲು ಕೋರಿದ್ದಾರೆ. ಮೇ 20 ಹಾಗೂ 22 ರಂದು ಲಕ್ನೋ ಮಾರ್ಗವಾಗಿ ಉತ್ತರ ಪ್ರದೇಶದ ಬಸ್ತಿ, ಮೇ 21 ರಂದು ಲಕ್ನೋ ಮಾರ್ಗವಾಗಿ ಉತ್ತರ ಪ್ರದೇಶದ ಅಜಮ್ಘಡ ನಿಲ್ದಾಣದವರೆಗೆ ರೈಲುಗಳ ವ್ಯವಸ್ಥೆ ಮಾಡಲು ಕೋರಿದ್ದಾರೆ.
ಹೊಸ ಬಸ್ ನಿಲ್ದಾಣದಲ್ಲಿ ನೋಂದಣಿ: ಈ ರೈಲುಗಳ ಮೂಲಕ ತೆರಳಲು ಬಯಸುವ ಪ್ರಯಾಣಿಕರು ಮುಂಚಿತವಾಗಿ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡು, ಟಿಕೆಟ್ ಪಡೆಯಲು ಹುಬ್ಬಳ್ಳಿ ಹೊಸ ಬಸ್ ನಿಲ್ದಾಣದಲ್ಲಿ ಕೌಂಟರ್ ಸ್ಥಾಪಿಸಲಾಗಿದೆ. ಹೊರ ರಾಜ್ಯಗಳ ಜನತೆ ಈ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ನೋಡಲ್ ಅಕಾರಿಯಾಗಿರುವ ಸಮಾಜ ಕಲ್ಯಾಣ ಜಂಟಿ ನಿರ್ದೇಶಕ ಎನ್.ಆರ್.ಪುರುಷೋತ್ತಮ್ ತಿಳಿಸಿದ್ದಾರೆ.