ಹುಬ್ಬಳ್ಳಿ: ಮಹಾಮಾರಿ ಕೊರೋನಾ ವೈರಸ್ ಸೋಂಕು ಹರಡುವಿಕೆಯನ್ನು ತಡೆಗಟ್ಟುವುದಕ್ಕಾಗಿ ರಾಜ್ಯ ಸರ್ಕಾರದ ಭಾನುವಾರ ಜಾರಿಗೊಳಿಸಿರುವ ಲಾಕ್ಡೌನ್ ಕರ್ಫ್ಯೂಗೆ ಹುಬ್ಬಳ್ಳಿ-ಧಾರವಾಡದ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕರ್ಫ್ಯೂವಿನಿಂದಾಗಿ ಅವಳಿನಗರ ಸಂಪೂರ್ಣವಾಗಿ ಸ್ತಬ್ದವಾಗಿದ್ದು, ಜನರಲ್ಲದೆ ರಸ್ತೆಗಳು ಭಣಗುಟ್ಟುತ್ತಿವೆ. ಅಗತ್ಯ ವಸ್ತುಗಳ ಅಂಗಡಿಗಳನ್ನು ತೆರೆಯಲು ಅನುಮತಿಯಿದ್ದರೂ ವ್ಯಾಪಾರಿಗಳು ಭಾನುವಾರವಾದ ಕಾರಣದಿಂದ ತಮ್ಮ ಅಂಗಡಿ, ಮುಗ್ಗಟ್ಟುಗಳನ್ನು ತೆರೆಯದೆ ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿದ್ದಾರೆ.
ಪೊಲೀಸ್ ಸಿಬ್ಬಂದಿ ಶನಿವಾರ ಸಂಜೆಯಿಂದಲೇ ಅಗತ್ಯ ಕ್ರಮ ಕೈಗೊಂಡಿದ್ದರು. ತುರ್ತು ಸೇವೆ ಹೊರತುಪಡಿಸಿ ಉಳಿದ ಆಟೋ ಟ್ಯಾಕ್ಸಿ, ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ಬಹುತೇಕ ಸಂಚಾರ ವ್ಯವಸ್ಥೆ ಸಂಪೂರ್ಣ ನಿಂತಿದ್ದು ಹುಬ್ಬಳ್ಳಿ ಜನತೆ ಸ್ವಯಂ ಪ್ರೇರಿತರಾಗಿ ಲಾಕ್ಡೌನ್ ಆಗಿದ್ದರಿಂದ ಉತ್ತಮ ಬೆಂಬಲ ಸಿಕ್ಕಿದೆ. ಇನ್ನೂ ಕೆಲವು ಕಡೆ ಪೊಲೀಸರು ಬ್ಯಾರಿಕೇಡ್ ಹಾಕುವ ಮೂಲಕ ಪ್ರಮುಖ ರಸ್ತೆ ಸಂಪರ್ಕಿಸುವ ಮಾರ್ಗಗಳನ್ನು ಬಂದ್ ಮಾಡಿದ್ದಾರೆ.